ಬೆಂಗಳೂರು: ರಾಜ್ಯಸಭೆ ಕಲಾಪದಲ್ಲಿ ಈ ಬಾರಿ ನಡೆದ ಘಟನೆ ತಲೆ ತಗ್ಗಿಸುವಂತದ್ದಾಗಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದರು.
ರಾಜಭವನದಲ್ಲಿ ಪತ್ರಕರ್ತರೊಂದಿಗೆ ನಡೆಸಿದ ಅನೌಪಚಾರಿಕ ಸಭೆಯಲ್ಲಿ ಮಾತನಾಡಿದ ಅವರು, ಈ ಘಟನೆಯಲ್ಲಿ ತಪ್ಪು ಮಾಡಿರುವವರ ವಿರುದ್ಧ ಕ್ರಮ ತಗೆದುಕೊಳ್ಳಲು ಈಗಾಗಲೇ ಚರ್ಚೆ ನಡೆಸಲಾಗುತ್ತಿದೆ. 16 ದಿನ ನಡೆದ ಕಲಾಪದಲ್ಲಿ ಒಂದು ದಿನವೂ ರಾಜ್ಯಸಭೆಯನ್ನು ನಡೆಸಲು ಬಿಡಲಿಲ್ಲ. ಕೆಲ ಸಂಸದರು ಮೇಜಿನ ಮೇಲೆ ಹತ್ತಿದ್ದರು, ಕುಣಿದಾಡಿದರು, ಬಿಲ್‌ಗಳನ್ನು ಹರಿದು ಬಿಸಾಡಿದರು. ಇನ್ನು ಕೆಲವರು ಹಿರಿಯ ಅಧಿಕಾರಿಗಳು ಇರುವ ಟೇಬಲ್ ಮೇಲೆ ದುರ್ವರ್ತನೆ ತೋರಿದರು. ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಲವರು ಮನವಿ ಸಲ್ಲಿಸಿದ್ದಾರೆ. ಈ ಬಗ್ಗೆ ಹಿಂದಿನ ಸಭಾಧ್ಯಕ್ಷರು, ನಿವೃತ್ತ ಸೆಕ್ರೆಟರಿ ಜನರಲ್‌ಗಳೊಂದಿಗೆ ಚರ್ಚೆ ನಡೆಸಿದ್ದು, ತೀರ್ಮಾನ ಕೈಗೊಳ್ಳುವುದಾಗಿ ಹೇಳಿದರು.
ರಾಜ್ಯಸಭೆಯಲ್ಲಿ ಈ ರೀತಿಯ ದುಂಡಾವರ್ತನೆ ಎಂದಿಗೂ ಆಗಿರಲಿಲ್ಲ. ಮೇಲ್ಮನೆ ಎನಿಸಿರುವ ರಾಜ್ಯಸಭೆಯನ್ನು ವಿದ್ಯಾರ್ಥಿಗಳು, ಮಕ್ಕಳು, ಸಾರ್ವಜನಿಕರು ನೋಡುತ್ತಿರುತ್ತಾರೆ. ವಿದೇಶದಲ್ಲಿರುವವರೂ ನೋಡುತ್ತಾರೆ. ಇದನ್ನೂ ಲೆಕ್ಕಿಸದೇ ದುರ್ವರ್ತನೆ ತೋರಿದ್ದಾರೆ. ಇದರಿಂದ ನಾನು ಬೇಸರಕ್ಕೆ ಒಳಗಾಗಿ ಖಿನ್ನತೆ ಕಾಡಿತ್ತು ಎಂದು ಬೇಸರ ವ್ಯಕ್ತಪಡಿಸಿದರು.
ಆರೇಳು ನಿಮಿಷದಲ್ಲಿ ಬಿಲ್ಪಾಸ್ ಆಗುವುದು ಸರಿಯಲ್ಲ:
ಆರೇಳು ನಿಮಿಷದಲ್ಲಿ ಬಿಲ್ ಪಾಸ್ ಆಗುವುದು ಸರಿಯಲ್ಲ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ವಿಷಾದ ವ್ಯಕ್ತಪಡಿಸಿದರು. ಕೆಲವೊಮ್ಮೆ ಕೇವಲ ಆರೇಳು ನಿಮಿಷದಲ್ಲಿ ಒಂದು ಬಿಲ್ ಪಾಸ್ ಆಗುತ್ತದೆ. ಈ ಬಗ್ಗೆ ಚರ್ಚೆಯೇ ಆಗುವುದಿಲ್ಲ. ಇದು ಸಹ ಒಳ್ಳೆಯ ಪದ್ಧತಿಯಲ್ಲ. ಆಡಳಿತ ಪಕ್ಷ ಬಿಲ್ ಮಂಡಿಸಿದಾಗ ಪ್ರತಿಪಕ್ಷದ ಸದಸ್ಯರು ಈ ಬಿಲ್ ಬಗ್ಗೆ ಮಾತನಾಡಬೇಕು. ಆದರೆ ಯಾರೂ ಮಾತನಾಡುವುದಕ್ಕೆ ತಯಾರಿಲ್ಲದಿದ್ದರೆ ಏನು ಮಾಡಲು ಆಗುತ್ತದೆ? ಎಂದು ಪ್ರಶ್ನಿಸಿದರು.
ಇನ್ನು ಪ್ರತಿಪಕ್ಷದವರು ಮಾತನಾಡಲು ಅವಕಾಶ ನೀಡುವುದಿಲ್ಲ ಎಂದು ಹೇಳುತ್ತಾರೆ. ಆದರೆ ಶೂನ್ಯ ವೇಳೆ, ಪ್ರಶ್ನೋತ್ತರ ವೇಳೆಯಲ್ಲಿ ಅವಕಾಶ ನೀಡಿದರೂ ಗಲಾಟೆ ಮಾಡಲು ನಿಂತರೆ ಏನು ಮಾಡಲು ಸಾಧ್ಯ?. ಹಾಗೆಂದ ಮಾತ್ರಕ್ಕೆ ಎಲ್ಲಾ ಸಂಸದರು ಈ ರೀತಿ ಇದ್ದಾರೆ ಎಂದು ಹೇಳುವುದಿಲ್ಲ. ಕೆಲವರು ಈ ರೀತಿ ಮಾಡುತ್ತಾರೆ. ಇದರಿಂದ ಇಡೀ ಸಭೆಗೆ ಕೆಟ್ಟ ಹೆಸರು ಎಂದರು.
ಹೆಚ್ಚುವರಿ ಲಸಿಕೆ ನೀಡಲು ಒಪ್ಪಿಗೆ:
ಕೇಂದ್ರ ಆರೋಗ್ಯ ಸಚಿವರು ಕರ್ನಾಟಕಕ್ಕೆ ಹೆಚ್ಚುವರಿ ಲಸಿಕೆ ನೀಡಲು ಒಪ್ಪಿಕೊಂಡಿದ್ದಾರೆ ಎಂದು ಇದೇ ವೇಳೆ ತಿಳಿಸಿದರು.
ಸಿಎಂ ಬಸವರಾಜ ಬೊಮ್ಮಾಯಿ ಅವರು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರೊಂದಿಗೆ ಲಸಿಕೆ ಹೆಚ್ಚಳ ಮಾಡುವ ಸಂಬಂಧ ಮಂಗಳವಾರ ಚರ್ಚಿಸಿದ್ದರು. ಈ ಸಂಬಂಧ ವೆಂಕಯ್ಯ ನಾಯ್ಡು ಅವರು ಕೇಂದ್ರ ಆರೋಗ್ಯ ಸಚಿವರೊಂದಿಗೆ ಚರ್ಚಿಸಿದ್ದು, ಕೂಡಲೇ ಶೇ.25ರಷ್ಟು ಹೆಚ್ಚುವರಿ ಲಸಿಕೆ ಕೊಡುವುದಕ್ಕೆ ಒಪ್ಪಿದ್ದಾರೆ ಎಂದು ತಿಳಿಸಿದರು.