ಬೆಂಗಳೂರು: 107ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ನ ಸಮಾರೋಪ ಸಮಾರಂಭವನ್ನು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಉದ್ಘಾಟಿಸಿದರು. ಈ ವೇಳೆ ಉಪರಾಷ್ಟ್ರಪತಿಗಳ ಹಿಂಭಾಗದಲ್ಲಿದ್ದ ಅಂಗರಕ್ಷರು ಒಂದೇ ಬಾರಿ ಎಚ್ಚೆತ್ತುಕೊಂಡರು. ಎಲ್ಲರೂ ಗಾಬರಿಯಿಂದ ಒಂದು ಬಾರಿ ವೇದಿಕೆಯ ಕಡೆಗೆ ಗಮನಿಸುವಂತೆ ಅಲ್ಲಿ ಘಟನೆ ನಡೆಯಿತು.
ಇಂಡಿಯನ್ ಸೈನ್ಸ್ ಕಾಂಗ್ರೆಸ್ ಅಸೋಸಿಯೇಷನ್ನ ನೂತನ ಪ್ರಧಾನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಪ್ರೊ. ವಿಜಯ್ ಲಕ್ಷ್ಮಿ ಸಕ್ಸೇನಾ ಅವರಿಗೆ ಪ್ರಸ್ತುತ ಅಧ್ಯಕ್ಷರಾಗಿರುವ ಪ್ರೊ.ಕೆ.ಎಸ್ ರಂಗಪ್ಪ ವಿಜ್ಞಾನ ಜ್ಯೋತಿಯನ್ನು ಹಸ್ತಾಂತರಿಸಿದರು. ಜ್ಯೋತಿಯಲ್ಲಿ ಉರಿಯುತ್ತಿದ್ದ ಬೆಂಕಿಯ ಕಿಡಿಯೊಂದು ಗಣ್ಯರಿದ್ದ ವೇದಿಕೆ ಮೇಲೆ ಬಿತ್ತು. ಈ ವೇಳೆ ಎಚ್ಚೆತ್ತುಕೊಂಡ ಉಪರಾಷ್ಟ್ರಪತಿಯ ಅಂಗರಕ್ಷಕರೊಬ್ಬರು ಜ್ಯೋತಿಯನ್ನು ದೂರ ಹಿಡಿಯುವಂತೆ ಸೂಚಿಸಿದರು. ಮತ್ತೊಮ್ಮೆ ಬೆಂಕಿಯ ಜ್ವಾಲೆಯಿಂದ ಅನಾಹುತ ಆಗಬಾರದು ಎಂಬ ಕಾರಣಕ್ಕೆ ಅಂಗರಕ್ಷಕರು ಮತ್ತೆ- ಮತ್ತೆ ದೂರ ಹಿಡಿಯುವಂತೆ ಹೇಳಿದರು.
ಕನ್ನಡದಲ್ಲಿ ಭಾಷಣ ಆರಂಭಿಸಿದ ವೆಂಕಯ್ಯನಾಯ್ಡು: ಉಪರಾಷ್ಟ್ರಪತಿ ತಮ್ಮ ಸಮಾರೋಪ ಭಾಷಣವನ್ನು ಕನ್ನಡದಲ್ಲಿ ಆರಂಭಿಸಿ ಸಭಾಂಗಣದಲ್ಲಿ ನೆರೆದಿದ್ದ ಕನ್ನಡಿಗರ ಮನಗೆದ್ದರು. ಮುಖ್ಯಮಂತ್ರಿ ಯಡಿಯೂರಪ್ಪ, ಹಾಗೂ ಎಲ್ಲಾ ಸಭಿಕರಿಗೆ ಕನ್ನಡದಲ್ಲೇ ವಂದನೆ ಸಲ್ಲಿಸಿ ಮಾತು ಆರಂಭಿಸಿದರು. '107ನೇ ವಿಜ್ಞಾನ ಕಾಂಗ್ರೆಸ್ನಲ್ಲಿ ಭಾಗವಹಿಸಿದ ನನಗೆ ತುಂಬಾ ಸಂತೋಷವಾಗಿದೆ' ಎಂದು ಕನ್ನಡದಲ್ಲಿ ಹೇಳಿದರು.
ಮನರಂಜಿಸಿದ ಪೊಲೀಸ್ ಬ್ಯಾಂಡ್: ಸಮಾರೋಪ ಸಮಾರಂಭದಲ್ಲಿ ವಿಶೇಷವಾಗಿ ಪೊಲೀಸ್ ಬ್ಯಾಂಡ್, ವಿಜ್ಞಾನ ಮೇಳಕ್ಕೆ ಬಂದ ಗಣ್ಯರು, ಸಾರ್ವಜನಿಕರನ್ನು ಮನರಂಜಿಸಿತು. 'ಗಂಧದ ಗುಡಿ' ಸಿನಿಮಾದ 'ನಾವಾಡುವ ನುಡಿಯೆ ಕನ್ನಡ ನುಡಿ' ಹಾಡನ್ನು ಬ್ಯಾಂಡ್ ನಲ್ಲಿ ನುಡಿಸಿದರು.