ಬೆಂಗಳೂರು: ಇಂದು ಕಾಂಗ್ರೆಸ್ ನಾಯಕರ ಮಹತ್ವದ ಸಭೆ ನಡೆಯಲಿದ್ದು, ವಿಧಾನಪರಿಷತ್ ಅಭ್ಯರ್ಥಿ ಆಯ್ಕೆ ಅಂತಿಮವಾಗಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ನಿವಾಸದ ಬಳಿ ಮಾತನಾಡಿದ ಅವರು, ಪಕ್ಷದಿಂದ ಬೇರೆ ಬೇರೆ ವರ್ಗಗಳಿಂದ ಆಕಾಂಕ್ಷಿಗಳಿದ್ದಾರೆ. ನಾಲ್ವರನ್ನ ಈಗಾಗಲೇ ಆಯ್ಕೆ ಮಾಡಲಾಗಿದೆ. ಸಾಮಾನ್ಯ ಕಾರ್ಯಕರ್ತರಿಗೂ ಅವಕಾಶ ನೀಡಲು ನೋಡುತ್ತಿದ್ದೇವೆ. ಅವರಿಗೆ ಟಿಕೆಟ್ ಕೊಟ್ಟರೆ ಪಕ್ಷ ಸಂಘಟನೆ ಸುಲಭವಾಗಲಿದೆ. ನೋಡೋಣ ಸಂಜೆ ಒಂದು ನಿರ್ಧಾರ ಮಾಡುತ್ತೇವೆ ಎಂದು ತಿಳಿಸಿದರು.
ಕೆಪಿಸಿಸಿ ಆಡಿಟೋರಿಯಂ ಹೋಮಕ್ಕೆ ಗೈರಾದ ಬಗ್ಗೆ ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ, ಅಂದು ನಾನು ಬೆಳಗಾವಿಯಲ್ಲಿ ಬ್ಯುಸಿಯಾಗಿದ್ದೆ. ಹೀಗಾಗಿ ಅಂದು ಕಾರ್ಯಕ್ರಮಕ್ಕೆ ಬರಲಿಲ್ಲ. ಇಲ್ಲೇ ಇದ್ದಿದ್ದರೆ ನಾನು ಭಾಗಿಯಾಗುತ್ತಿದ್ದೆ. ಎಷ್ಟು ಗಮನಕೊಡಬೇಕೋ ಕೊಡುತ್ತಿದ್ದೆ. ಅದಕ್ಕೆ ಸಲೀಂ ಅಹ್ಮದ್ ಅವರಿಗೆ ನೀವೇ ಮಾಡಿಕೊಳ್ಳಿ ಎಂದಿದ್ದೆ ಎಂದು ಹೇಳಿದರು.
ಇದೇ ವೇಳೆ ಸಿ.ಎಂ.ಇಬ್ರಾಹಿಂ ಮಾತನಾಡಿ, ಪರಿಷತ್ ಟಿಕೆಟ್ ಆಕಾಂಕ್ಷಿಗಳು ಅವಕಾಶ ಕೇಳೋದ್ರಲ್ಲಿ ತಪ್ಪಿಲ್ಲ, ಅರ್ಥವಿದೆ. ಕೇಳೋಕೆ ಕಾರಣ ಬೇಕಲ್ಲಾ ಕೇಳ್ತಿದ್ದಾರೆ. ಪಕ್ಷದವರು ತೀರ್ಮಾನ ಮಾಡಿ ಅಲ್ಲಿಗೆ ಲಿಸ್ಟ್ ಕಳಿಸುತ್ತಾರೆ. ಯಾರಿಗೆ ಕೊಟ್ಟರೆ ಉತ್ತಮ, ಇಲ್ಲ ಅನ್ನೋದನ್ನ ಅಲ್ಲಿ ನಿರ್ಧರಿಸುತ್ತಾರೆ. ಈಗ ಕ್ರೂಶಿಯಲ್ ಟೈಂ ಬೇರೆ. ವಾರ್ ಟೈಂ, ಪೀಸ್ ಟೈಂ ಅಂತ ಇದೆ. ವಾರ್ ಟೈಂ ಅಂದ್ರೆ ಜನರ ಮಧ್ಯೆ ಹೋರಾಡುವವರು. ಪಕ್ಷದ ಸಿದ್ಧಾಂತ ಜನರಿಗೆ ತಲುಪಿಸುವವರು. ಫೀಸ್ ಟೈಂ ಅಂದ್ರೆ ಪಕ್ಷ ಅಧಿಕಾರದಲ್ಲಿದ್ದಾಗ ಇರುವವರು. ನಾವು ವಾರ್ ಟೈಂನಲ್ಲಿದ್ದೇವೆ ನೊಡೋಣ ಏನ್ಮಾಡ್ತಾರೆ ಎಂದರು.
ಬಿಜೆಪಿಯಲ್ಲಿ ಸಿಎಂ ಕಡಗಣನೆ ವಿಚಾರ ಮಾತನಾಡಿ, ಸಿಎಂ ಕಳಿಸೋ ಹೆಸರು ಪಾಲಿಸೋದು ಸತ್ಸಂಪ್ರದಾಯ. ಕೋವಿಡ್ ನಲ್ಲಿ ತುಂಬಾ ಓಡಾಡ್ತಿದ್ದಾರೆ. ಪಾಪ ಅವರನ್ನ ಬಿಟ್ಟು ಬೇರೆಯವರನ್ನ ಮಾಡಿದ್ದಾರೆ. ಆದ್ರೂ ಈಗ ಒಲ್ಲದ ಗಂಡಂಗೆ ಮೊಸರಲ್ಲಿ ಕಲ್ಲು ಅನ್ನುವಂತಾಗಿದೆ. ದೇವರು ಪಾಪ ಯಡಿಯೂರಪ್ಪಗೆ ಒಳ್ಳೆಯದು ಮಾಡಲಿ. ಮೂರು ವರ್ಷ ಅವಧಿ ಮುಗಿಸಲಿ ಎಂದರು.