ಬೆಂಗಳೂರು : ಮುಂಬರುವ ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಪಾಳಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ನೂತನ ರಾಜ್ಯಾಧ್ಯಕ್ಷರ ಆಯ್ಕೆ ಹಾಗೂ ವಿಧಾನಮಂಡಲದ ಉಭಯ ಸದನಗಳ ಪ್ರತಿಪಕ್ಷ ನಾಯಕರ ಆಯ್ಕೆ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ. ಇನ್ನೊಂದು ವಾರದಲ್ಲಿ ಖಾಲಿ ಇರುವ ಮೂರು ಪ್ರಮುಖ ಹುದ್ದೆಗಳಿಗೆ ನೇಮಕ ಪ್ರಕ್ರಿಯೆ ಪೂರ್ಣಗೊಳ್ಳಲಿದ್ದು, ರಾಜ್ಯದ ಎರಡು ಪ್ರಬಲ ಸಮುದಾಯಗಳಾದ ಲಿಂಗಾಯತ ಮತ್ತು ಒಕ್ಕಲಿಗ ಜೊತೆ ಹಿಂದುಳಿದ ವರ್ಗಗಳ ಸಮೀಕರಣದೊಂದಿಗೆ ಆಯಕಟ್ಟಿನ ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತದೆ ಎಂದು ಬಿಜೆಪಿ ಪಡಸಾಲೆಯಲ್ಲಿ ಮಾತುಗಳು ಕೇಳಿಬರುತ್ತಿದೆ.
ಲೋಕಸಭಾ ಚುನಾವಣೆಗೆ ಬಿಜೆಪಿ ತಯಾರಿ : ಅಧಿವೇಶನ ಮುಕ್ತಾಯಗೊಂಡಿರುವ ಹಿನ್ನೆಲೆಯಲ್ಲಿ ಪ್ರತಿಪಕ್ಷ ನಾಯಕರ ಆಯ್ಕೆಗಿಂತ ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆಗೆ ಈಗ ಹೆಚ್ಚಿನ ಮಹತ್ವ ಬಂದಿದೆ. ಹಾಲಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವಧಿ ಜನವರಿಯಲ್ಲೇ ಪೂರ್ಣಗೊಂಡಿದ್ದರೂ ವಿಧಾನಸಭಾ ಚುನಾವಣಾ ಕಾರಣಕ್ಕಾಗಿ ಕಟೀಲ್ ಅವರನ್ನೇ ಮುಂದುವರೆಸಲಾಗಿತ್ತು. ಆದರೆ, ಇದೀಗ ವಿಧಾನಸಭಾ ಚುನಾವಣೆ ಮುಗಿದಿದ್ದು, ಲೋಕಸಭಾ ಚುನಾವಣೆಗೆ ತಯಾರಿ ಆರಂಭಿಸಬೇಕಿರುವ ಹಿನ್ನೆಲೆಯಲ್ಲಿ ಹೊಸ ತಂಡ ರಚನೆಗೆ ಪೂರಕವಾಗಿ ಹೊಸ ರಾಜ್ಯಾಧ್ಯಕ್ಷರ ನೇಮಕ ಆಗಬೇಕಿದೆ. ಹಾಗಾಗಿ, ರಾಜ್ಯಾಧ್ಯಕ್ಷರ ನೇಮಕ ಪ್ರಕ್ರಿಯೆಗೆ ಬಿಜೆಪಿಯಲ್ಲಿ ಚಾಲನೆ ನೀಡಲಾಗಿದೆ.
ಜಾತಿ ಲೆಕ್ಕಾಚಾರ: ಈ ಬಾರಿ ಒಕ್ಕಲಿಗ ಸಮುದಾಯಕ್ಕೆ ರಾಜ್ಯಾಧ್ಯಕ್ಷ ಸ್ಥಾನ ನೀಡಿ, ವಿಧಾನಸಭೆ ಪ್ರತಿಪಕ್ಷ ನಾಯಕನ ಸ್ಥಾನವನ್ನು ಲಿಂಗಾಯತ ಸಮುದಾಯಕ್ಕೆ ನೀಡಿ, ಎರಡು ದೊಡ್ಡ ಸಮುದಾಯಕ್ಕೆ ಆದ್ಯತೆ ನೀಡಲು ನಿರ್ಧರಿಸಲಾಗಿದೆ. ಆದ್ದರಿಂದ ಸಿಟಿ ರವಿ, ಅಶ್ವತ್ಥ್ ನಾರಾಯಣ,ಶೋಭಾ ಕರಂದ್ಲಾಜೆ ಹೆಸರುಗಳು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕೇಳಿಬಂದಿವೆ. ಇದರಲ್ಲಿ ಸಿ.ಟಿ.ರವಿ ಹೆಸರು ಹೆಚ್ಚು ಪ್ರಚಲಿತವಾಗಿದೆ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗಿದ್ದ ಸಿಟಿ ರವಿ ಅವರನ್ನು ಕೇಂದ್ರ ತಂಡ ಪುನರ್ ರಚನೆ ವೇಳೆ ಕೈಬಿಟ್ಟಿದೆ. ಸಚಿವರಾಗಿದ್ದ ಸಿ.ಟಿ.ರವಿ ಸಂಘಟನೆಗೆ ಬರುವಂತೆ ವರಿಷ್ಠರಿಂದ ಬಂದ ಸಂದೇಶಕ್ಕೆ ಮನ್ನಣೆ ನೀಡಿ ಯಡಿಯೂರಪ್ಪ ಸಂಪುಟಕ್ಕೆ ರಾಜೀನಾಮೆ ನೀಡಿ ದೆಹಲಿಗೆ ತೆರಳಿದ್ದರು. ಈಗ ದೆಹಲಿ ಜವಾಬ್ದಾರಿಯಿಂದ ಸಿಟಿ ರವಿ ಅವರನ್ನು ಮುಕ್ತಗೊಳಿಸಿದೆ. ಹಾಗಾಗಿ, ಅವರಿಗೆ ಬಹುತೇಕ ರಾಜ್ಯಾಧ್ಯಕ್ಷ ಸ್ಥಾನ ಅಂತಿಮವಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಸಿ.ಟಿ.ರವಿ ರಾಜ್ಯ ಬಿಜೆಪಿ ಅಧ್ಯಕ್ಷ?: ಈಗಾಗಲೇ ಯಡಿಯೂರಪ್ಪ ಸೇರಿ ರಾಜ್ಯದ ಪ್ರಮುಖರ ಜೊತೆ ವರಿಷ್ಠರು ಸಮಾಲೋಚನೆ ನಡೆಸಿಯೇ ಈ ತೀರ್ಮಾನಕ್ಕೆ ಬಂದಿದ್ದಾರೆ. ಹಾಗಾಗಿ ಸಿ.ಟಿ.ರವಿ ಬೆಂಗಳೂರಿಗೆ ಬರುತ್ತಿದ್ದಂತೆ ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದುಕೊಂಡರು. ಅಲ್ಲದೇ, ಶೋಭಾ ಕರಂದ್ಲಾಜೆ ಕೇಂದ್ರ ಸಚಿವರಿದ್ದಾರೆ. ಜೊತೆಗೆ ರಾಜ್ಯದ ನಾಯಕರು ಅವರನ್ನು ಒಪ್ಪುವುದು ಕಷ್ಟ. ಇನ್ನು ಅಶ್ವತ್ಥ್ ನಾರಾಯಣ ಪ್ರಬಲ್ ಹಿಂದುತ್ವದ ಫೈರ್ ಬ್ರ್ಯಾಂಡ್ ಅಲ್ಲ. ಹಾಗಾಗಿ, ಬಿಜೆಪಿಗೆ ಈಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಅಗ್ರೆಸ್ಸಿವ್ ಆಗಿ ನಿಲ್ಲಬಲ್ಲ ವ್ಯಕ್ತಿ ಬೇಕು. ಅದಕ್ಕೆ ಸಿ.ಟಿ.ರವಿ ತಕ್ಕ ಅಭ್ಯರ್ಥಿ ಎನ್ನುವುದು ರಾಜ್ಯ ಬಿಜೆಪಿ ನಾಯಕರ ಲೆಕ್ಕಾಚಾರ.
ಸಿ.ಟಿ.ರವಿಗೆ ಹೈಕಮಾಂಡ್ ಬುಲಾವ್ ನೀಡಿದ್ದು ಇಂದು ದೆಹಲಿಗೆ ತೆರಳಿ ವರಿಷ್ಠರ ಭೇಟಿ ಮಾಡಲಿದ್ದಾರೆ. ನಂತರ ಅಧಿಕೃತ ಘೋಷಣೆ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ. ವರಿಷ್ಠರ ಕರೆ ಬರುತ್ತಿದ್ದಂತೆ ಭಾನುವಾರ ಕೇಶವಕೃಪಾಗೆ ಭೇಟಿ ನೀಡಿದ ಅವರು ಸಂಘದ ಪ್ರಮುಖರ ಜೊತೆ ಮಾತುಕತೆ ನಡೆಸಿ ಆಶೀರ್ವಾದ ಪಡೆದುಕೊಂಡಿದ್ದಾರೆ.
ಸಿ.ಟಿ.ರವಿ ಹೇಳಿದ್ದೇನು? : ಇನ್ನೊಂದೆಡೆ, ರಾಜ್ಯಾಧ್ಯಕ್ಷ ಸ್ಥಾನದ ಕುರಿತು ಪ್ರತಿಕ್ರಿಯೆ ನೀಡಿದ್ದ ಸಿ.ಟಿ.ರವಿ, "ನಾನು ಯಾವಾಗಲೂ ಪಕ್ಷದ ಕಾರ್ಯಕರ್ತನಾಗಿಯೇ ಇರುತ್ತೇನೆ. ಆದರೆ, ಪಕ್ಷ ವಹಿಸುವ ಜವಾಬ್ದಾರಿಯನ್ನು ನಿರ್ವಹಿಸುತ್ತೇನೆ" ಎನ್ನುವ ಮೂಲಕ ರಾಜ್ಯಾಧ್ಯಕ್ಷ ಸ್ಥಾನ ಸಿಕ್ಕರೆ ರೆಡಿ ಇದ್ದೇನೆ ಎನ್ನುವುದನ್ನು ಪರೋಕ್ಷವಾಗಿ ತಿಳಿಸಿದ್ದಾರೆ.
ಬಿ.ವೈ.ವಿಜಯೇಂದ್ರಗೂ ಪ್ರಮುಖ ಹುದ್ದೆ? : ಇನ್ನು ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರಗೂ ಸಂಘಟನೆಯಲ್ಲಿ ಪ್ರಮುಖ ಹುದ್ದೆ ಕೊಡುವ ನಿರ್ಧಾರಕ್ಕೆ ವರಿಷ್ಠರು ಬಂದಿದ್ದಾರೆ. ಹಾಲಿ ರಾಜ್ಯ ಉಪಾಧ್ಯಕ್ಷರಾಗಿರುವ ವಿಜಯೇಂದ್ರಗೆ ರಾಜ್ಯ ಪ್ರಧಾನ ಕಾರ್ಯದರ್ಶಿ ಸ್ಥಾನ ನೀಡಿ ಸಂಪೂರ್ಣವಾಗಿ ಸಂಘಟನಾತ್ಮಕ ಚಟುವಟಿಕೆಯಲ್ಲಿ ತೊಡಗಿಕೊಳ್ಳುವ ಸೂಚನೆ ನೀಡಲಿದ್ದಾರೆ, ಈ ಸಂಬಂಧ ಮಾತುಕತೆ ನಡೆಸಲು ಇತ್ತೀಚೆಗೆ ವಿಜಯೇಂದ್ರ ಅವರನ್ನು ವರಿಷ್ಠರು ದೆಹಲಿಗೆ ಕರೆಸಿಕೊಂಡು ಮಾತುಕತೆ ನಡೆಸಿದ್ದರು. ಯಡಿಯೂರಪ್ಪರನ್ನು ಕಡೆಗಣಿಸಲಾಗಿದೆ ಎನ್ನುವ ಆರೋಪದ ಪರಿಣಾಮವು ವಿಧಾನಸಭಾ ಚುನಾವಣೆಯಲ್ಲಿ ಸ್ಪಷ್ಟವಾಗಿ ತಿಳಿದ ಹಿನ್ನಲೆಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಅದರ ಪರಿಣಾಮ ಬೀರದಂತೆ ಮುನ್ನೆಚ್ಚರಿಕೆ ವಹಿಸಲು ಪ್ರಮುಖ ಜವಾಬ್ದಾರಿಯನ್ನು ವಿಜಯೇಂದ್ರಗೆ ನೀಡಲಾಗುತ್ತದೆ ಎನ್ನಲಾಗಿದೆ.
ವಿಧಾನಸಭೆ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಬಸವರಾಜ ಬೊಮ್ಮಾಯಿ, ಬಸನಗೌಡ ಪಾಟೀಲ್ ಯತ್ನಾಳ್, ಸುನೀಲ್ ಕುಮಾರ್, ಆರ್.ಅಶೋಕ್ ಹೆಸರುಗಳು ಕೇಳಿಬಂದಿವೆ. ಆದರೆ ಲಿಂಗಾಯತ ಸಮುದಾಯಕ್ಕೆ ಅವಕಾಶ ಕೊಡುವ ನಿರ್ಧಾರವಾಗಿರುವ ಹಿನ್ನೆಲೆಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯಗ್ನಾಳ್ಗೆ ಅವಕಾಶ ಸಿಗಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಹಿಂದುತ್ವದ ಫೈರ್ ಬ್ರ್ಯಾಂಡ್ ಆಗಿರುವ ಯತ್ನಾಳ್ ಸದನದಲ್ಲಿ ಗಟ್ಟಿಯಾಗಿ ಸರ್ಕಾರವನ್ನು ಟೀಕಿಸಿ ವಾಗ್ದಾಳಿ ನಡೆಸುವ ಸಾಮರ್ಥ್ಯ ಹೊಂದಿದ್ದಾರೆ ಎನ್ನುವ ಕಾರಣಕ್ಕೆ ಅವರ ಹೆಸರು ಪರಿಗಣಿಸಲಾಗಿದೆ.
ಆದರೆ, ಅದಕ್ಕೆ ಯಡಿಯೂರಪ್ಪ ಒಪ್ಪದೆ ಇದ್ದಲ್ಲಿ ಬಸವರಾಜ ಬೊಮ್ಮಾಯಿ ಅವರನ್ನು ತಾತ್ಕಾಲಿಕವಾಗಿ ಚುನಾವಣೆ ಮುಗಿಯುವವರೆಗೂ ನೇಮಕ ಮಾಡಲಾಗುತ್ತದೆ ಅಥವಾ ಬೇರೆ ಸಮುದಾಯದ ನಾಯಕರಿಗೂ ಅವಕಾಶ ನೀಡುವ ಸಾಧ್ಯತೆ ಇದೆ. ಲಿಂಗಾಯತ ಸಮುದಾಯಕ್ಕೆ ಕೈತಪ್ಪಿದರೆ ಶಾಸಕ ಸುನೀಲ್ ಕುಮಾರ್ಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಒಕ್ಕಲಿಗರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿದ ನಂತರ ಪ್ರತಿಪಕ್ಷ ನಾಯಕನ ಸ್ಥಾನವನ್ನೂ ಅದೇ ಸಮುದಾಯಕ್ಕೆ ನೀಡುವ ಸಾಧ್ಯತೆ ಕಡಿಮೆ. ಹಾಗಾಗಿ, ಅಶೋಕ್ ರೇಸ್ ನಿಂದ ಹೊರಗುಳಿಯಬೇಕಾಗಲಿದೆ.
ಇದನ್ನೂ ಓದಿ : C T Ravi: ಸಿ.ಟಿ.ರವಿಗೆ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ ಬಹುತೇಕ ಖಚಿತ; ಇಂದು ದೆಹಲಿಗೆ ಪ್ರಯಾಣ
ಪರಿಷತ್ ಪ್ರತಿಪಕ್ಷ ನಾಯಕನ ಸ್ಥಾನಕ್ಕೂ ನೇಮಕ ನಡೆಯಲಿದೆ. ಶಶಿಲ್ ನಮೋಶಿ, ಕೋಟಾ ಶ್ರೀನಿವಾಸ ಪೂಜಾರಿ, ರವಿಕುಮಾರ್ ಆಕಾಂಕ್ಷಿಗಳಾಗಿದ್ದಾರೆ. ಈಗಾಗಲೇ ಸಭಾಪತಿ ಲಿಂಗಾಯತ ಸಮುದಾಯಕ್ಕೆ ಸೇರಿದ್ದು, ವಿಧಾನಸಭೆ ಪ್ರತಿಪಕ್ಷ ನಾಯಕರೂ ಅದೇ ಸಮುದಾಯಕ್ಕೆ ಸೇರಿದರೆ ಲಿಂಗಾಯತ ಸಮುದಾಯದ ಶಶಿಲ್ ನಮೋಶಿಗೆ ಅವಕಾಶ ಕಷ್ಟ. ಹಿರಿತನ, ಅನುಭವ ಹಾಗು ಸಭಾನಾಯಕರಾಗಿದ್ದ ಕೋಟಾ ಶ್ರೀನಿವಾಸ ಪೂಜಾರಿಗೆ ಪರಿಷತ್ ಪ್ರತಿಪಕ್ಷ ನಾಯಕನ ಸ್ಥಾನ ಸಿಗಲಿದೆ. ಹೊಸಬರಿಗೆ ಅವಕಾಶ ನೀಡುವ ನಿರ್ಧಾರವಾದಲ್ಲಿ ಹಿಂದುಳಿದ ವರ್ಗದ ರವಿಕುಮಾರ್ಗೆ ಅವಕಾಶ ಹೆಚ್ಚಿದೆ.
ಆಗಸ್ಟ್ ಮೊದಲ ವಾರದಲ್ಲಿಯೇ ನೂತನ ರಾಜ್ಯಾಧ್ಯಕ್ಷರ ನೇಮಕಾತಿ ಪ್ರಕ್ರಿಯೆ ನಡೆಯಲಿದ್ದು, ಅದೇ ಸಮಯದಲ್ಲೇ ಪ್ರತಿಪಕ್ಷ ನಾಯಕರ ಸ್ಥಾನಕ್ಕೂ ಆಯ್ಕೆ ಅಂತಿಮಗೊಳಿಸಲಾಗುತ್ತದೆ ಎನ್ನಲಾಗಿದೆ. ಆದರೆ, ದೆಹಲಿಯಲ್ಲಿ ನಡೆಯುವ ವಿದ್ಯಮಾನಗಳ ಮೇಲೆ ಇದೆಲ್ಲಾ ನಿರ್ಧಾರವಾಗಬೇಕಿರುವುದರಿಂದ ನೇಮಕವಾಗುವವರೆಗೂ ಬಿಜೆಪಿ ನಾಯಕರಿಗೆ ಕಾದು ನೋಡದೆ ಬೇರೆ ಗತಿಯಿಲ್ಲದಂತಾಗಿದೆ.