ಆನೇಕಲ್( ಬೆಂಗಳೂರು): ಬನ್ನೇರುಘಟ್ಟದ ಚಂಪಕಧಾಮ ಸ್ವಾಮಿ ದಸರಾ ಮಹೋತ್ಸವಕ್ಕೆ ತಂದಿದ್ದ ಆನೆಯನ್ನು ತಿರುಚ್ಚಿಗೆ ವಾಪಸ್ ಒಯ್ಯುತ್ತಿದ್ದ ವೇಳೆ ವಾಹನ ತಗ್ಗು ಪ್ರದೇಶಕ್ಕೆ ಹರಿದ ಪರಿಣಾಮ ಲಾರಿ ಚಾಲಕ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಸಾನಮಾವು ಅರಣ್ಯ ಪ್ರದೇಶದ ಬೆಂಗಳೂರು ಚೆನ್ನೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ಸಂಭವಿಸಿದೆ. ತಮಿಳುನಾಡಿನ ಪುದುಕ್ಕೊಟ್ಟೈ ಮೂಲದ ಆರೋಗ್ಯ ಸ್ವಾಮಿ ಮೃತ ಚಾಲಕ. ಆದರೆ ಲಾರಿಯಲ್ಲಿದ್ದ ಆನೆಯನ್ನು ರಕ್ಷಿಸಲಾಗಿದೆ.
ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸಿ ಚಾಲಕ ಮೂತ್ರ ವಿಸರ್ಜನೆಗೆ ತೆರಳಿದ್ದನು. ಈ ವೇಳೆ ಹ್ಯಾಂಡ್ ಬ್ರೇಕ್ ಮಾಡದಿದ್ದರಿಂದ ವಾಹನ ಮುಂದಕ್ಕೆ ಚಲಿಸಿ ಚಾಲಕನ ಮೇಲೆ ಹರಿದಿದೆ. ಇದರಿಂದ ಲಾರಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇನ್ನು, ರಸ್ತೆ ಬದಿಯ ತಗ್ಗು ಪ್ರದೇಶಕ್ಕೆ ವಾಹನ ಇಳಿದಿದ್ದರೂ ಲಾರಿಯಲ್ಲಿ ಆನೆ ನಿಂತಲ್ಲಿಯೇ ನಿಂತುಕೊಂಡಿತ್ತು. ಜೆಸಿಬಿ ಮೂಲಕ ಆನೆ ಸಹಿತ ಲಾರಿಯನ್ನು ಹೊರಕ್ಕೆ ಎಳೆಯಲಾಗಿದೆ.
ತಿರುಚ್ಚಿ ಜಿಲ್ಲೆಯ ಶ್ರೀರಂಗಂ ಪ್ರದೇಶಕ್ಕೆ ಸೇರಿದ ಭಾಸ್ಕರನ ಬಳಿ 3 ಸಾಕಾನೆಗಳು ಇದ್ದವು. ಕರ್ನಾಟಕ ರಾಜ್ಯದ ಬನ್ನೇರುಘಟ್ಟ ಪ್ರದೇಶದ ಪೆರುಮಾಳ್ ದೇವಸ್ಥಾನದಲ್ಲಿ ದಸರಾ ಹಬ್ಬವನ್ನು ಆಚರಿಸಲು ರಾಣಿ ಹೆಸರಿನ ಆನೆ ತರಲಾಗಿತ್ತು. ಈ ಆನೆಯನ್ನು ವಾಪಸ್ ಸ್ಥಳಕ್ಕೆ ಬಿಟ್ಟುಬರಲು ತೆರಳುವ ಮುನ್ನ ಈ ದುರ್ಘಟನೆ ಸಂಭವಿಸಿದೆ. ವಾಹನದಲ್ಲಿ ಆರು ಜನರು ರಾತ್ರಿ ವಾಹನದಲ್ಲಿ ತಿರುಚ್ಚಿಗೆ ತೆರಳಿದ್ದರು. ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಈ ಘಟನಾ ಸ್ಥಳಕ್ಕೆ ಅಡ್ಕೋ ಪೊಲೀಸರು ಹಾಗೂ ಅರಣ್ಯ ಸಿಬ್ಬಂದಿ ಧಾವಿಸಿ ಆನೆ ಲಾರಿಯನ್ನು ಹೊರಕ್ಕೆ ತೆಗೆದು ರಕ್ಷಣೆ ಮಾಡಿದ್ದಾರೆ. ಅಪಘಾತದಿಂದ ಕೆಲ ಕಾಲ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತವಾಗಿತ್ತು.
ಪ್ರತ್ಯೇಕ ಘಟನೆ- ಬಸ್ ಪಲ್ಟಿಯಾಗಿ 25 ಮಂದಿಗೆ ಗಾಯ: ಪಶ್ಚಿಮ ಬಂಗಾಳದ ಪ್ರವಾಸಿಗರಿದ್ದ ಬಸ್ ಪಲ್ಟಿಯಾಗಿ 25 ಮಂದಿ ಗಾಯಗೊಂಡಿರುವ ಘಟನೆ ಚಾಮರಾಜನಗರ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಸಮೀಪದ ಮೇಲುಕಾಮನಹಳ್ಳಿ ಇಳಿಜಾರಿನಲ್ಲಿ ಮಂಗಳವಾರ ಸಂಭವಿಸಿತ್ತು. ತಮಿಳುನಾಡಿನ ತೀರ್ಥಕ್ಷೇತ್ರಗಳನ್ನು ನೋಡಿಕೊಂಡು ಬಂಡೀಪುರ ಮಾರ್ಗವಾಗಿ ಕರ್ನಾಟಕಕ್ಕೆ ಬರುತ್ತಿದ್ದಾಗ ಇಳಿಜಾರಿನ ರಸ್ತೆಯಲ್ಲಿ ಬ್ರೇಕ್ ಫೆಲ್ಯೂರ್ ಆಗಿ ಅವಘಡ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಅಡುಗೆ ಸಿಬ್ಬಂದಿ ಸೇರಿದಂತೆ 65 ಮಂದಿ ಈ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದರು. 25 ಮಂದಿ ಗಾಯಗೊಂಡಿದ್ದು ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಸ್‌ನಲ್ಲಿದ್ದ ಬಹುಪಾಲು ಮಂದಿ ಹಾಗೂ ಗಾಯಗೊಂಡ ಅನೇಕರು ಹಿರಿಯ ನಾಗರಿಕರಾಗಿದ್ದಾರೆ. ಗಾಯಾಳುಗಳನ್ನು ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ.
ಇದನ್ನೂಓದಿ:ದಾವಣಗೆರೆ: ವಿದ್ಯುತ್ ಶಾರ್ಟ್ ಸರ್ಕ್ಯೂಟ್: ಹೊತ್ತಿ ಉರಿದ ಬಟ್ಟೆ ಅಂಗಡಿ