ಬೆಂಗಳೂರು: ಸದ್ಯಕ್ಕೆ ಕರ್ನಾಟಕ ಬಂದ್ ಮುಂದೂಡಿದ್ದೇವೆ ಎಂದು ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಹೇಳಿದರು.
ರಾಜ್ಯದಲ್ಲಿ ಎಂಇಎಸ್ ಸಂಘಟನೆ ನಿಷೇಧಿಸಬೇಕೆಂದು ಒತ್ತಾಯಿಸಿ ಕನ್ನಡ ಒಕ್ಕೂಟದ ರಾಜ್ಯಾಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ವುಡ್‌ಲ್ಯಾಂಡ್ಸ್ ಹೋಟೆಲ್‌ನ ಸಭಾಂಗಣದಲ್ಲಿ ಸಭೆ ಕರೆಯಲಾಗಿತ್ತು.
ಈ ಸಭೆಯಲ್ಲಿ ಕನ್ನಡ ಸಂಘಟನೆಗಳ ಮುಖಂಡರಾದ ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು, ಕನ್ನಡ ಸೇನೆ ರಾಜ್ಯಾಧ್ಯಕ್ಷ ಕೆ.ಆರ್.ಕುಮಾರ್ ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಯ ಮುಖಂಡರು ಭಾಗಿಯಾಗಿದ್ದರು.
ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾಹಿತಿ ಹಂಚಿಕೊಂಡ ವಾಟಾಳ್ ನಾಗಾರಾಜ್, ಬೆಂಗಳೂರಲ್ಲಿ ಬಂದ್ ಹಿಂಪಡೆದರೂ ಹಿಂದೆಂದೂ ನಡೆಯದ ರೀತಿಯಲ್ಲಿ ದೊಡ್ಡ ಹೋರಾಟ ಮಾಡುತ್ತೇವೆ. ರಾಜ್ಯದ ಎಲ್ಲ ಜಿಲ್ಲೆಗಳಿಗೂ ಭೇಟಿ ನೀಡಿ ಹೋರಾಟದ ಕುರಿತು ಜನರನ್ನು ಒಗ್ಗೂಡಿಸುತ್ತೇವೆ. 22ರ ಶನಿವಾರ ಬೆಳಗ್ಗೆ 10 ಗಂಟೆಗೆ ಟೌನ್‌ಹಾಲ್‌ನಿಂದ ಬೃಹತ್ ಮೆರವಣಿಗೆ ಆರಂಭವಾಗುತ್ತದೆ ಎಂದರು.
ಮೇಕೆದಾಟು, ಮಹದಾಯಿ, ಎಂಇಎಸ್ ಹೋರಾಟ:
ಮೇಕೆದಾಟು, ಮಹದಾಯಿ, ಎಂಇಎಸ್ ಮೂರು ವಿಚಾರಗಳನ್ನು ಇಟ್ಟುಕೊಂಡು ಹೋರಾಟ ಮಾಡುತ್ತೇವೆ. ಟೌನ್ ಹಾಲ್‌ನಿಂದ ಸ್ವಾತಂತ್ರ್ಯ ಉದ್ಯಾನವನದವರೆಗೆ ದೊಡ್ಡ ಮೆರವಣಿಗೆ ಮಾಡುತ್ತೇವೆ. ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿ ಕಛೇರಿ ಮುಂದೆ ಪ್ರತಿಭಟನೆ ನಡೆಸುತ್ತೇವೆ ಎಂದರು.
ಮೇಕೆದಾಟು ಹೋರಾಟದ ವಿಚಾರವಾಗಿ ಕಾಂಗ್ರೆಸ್‌ಗೆ ಟಾಂಗ್:
ಮೇಕೆದಾಟು ಬಗ್ಗೆ ನಾವು ಈ ಹಿಂದೆಯೇ ಸಾಕಷ್ಟು ಹೋರಾಟ ಮಾಡಿದ್ದೇವೆ. ಈಗ ಕಾಂಗ್ರೆಸ್‌ನವರು ಪ್ರಚಾರಕ್ಕಾಗಿ ಹೋರಾಟಕ್ಕೆ ಇಳಿದಿದ್ದಾರೆ. ನಿಮ್ಮ ಸರ್ಕಾರ ಇದ್ದಾಗ ಏನು ಮಾಡಿದ್ದೀರಿ. ಈಗ ನೀವು ಸಿನಿಮಾದವರ ರೀತಿ ಫೋಟೋ ತೆಗೆಸಿಕೊಳ್ಳುವುದು, ಈಜು ಹೊಡೆಯುವುದು ಮಾಡುತ್ತಿದ್ದೀರಿ. ಈ ರೀತಿಯ ಹೋರಾಟ ಒಳ್ಳೆಯದಲ್ಲ ಎಂದು ವಾಟಾಳ್ ಟಾಂಗ್ ಕೊಟ್ಟರು.