ಬೆಂಗಳೂರು : ಕರ್ನಾಟಕದಲ್ಲಿ ಏನಾಗುತ್ತಿದೆ ಎಂಬುದೇ ಅರ್ಥವಾಗುತ್ತಿಲ್ಲ. ಗುಪ್ತಚರ ಇಲಾಖೆ ಸಂಪೂರ್ಣ ವಿಫಲವಾಗಿದೆ. ಕೂಡಲೇ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಒತ್ತಾಯಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಿನ್ನೆ ಒಬ್ಬ ಯುವಕನ ಹತ್ಯೆಯಾಗಿದೆ. ಅದರ ಹೇಳಿಕೆ ಬಗ್ಗೆ ಗೃಹ ಸಚಿವರು ಗುಪ್ತಚರ ಇಲಾಖೆ ವರದಿ ಪಡೆದಿಲ್ಲ. ಗುಪ್ತಚರ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ದೂರಿದರು. ಉರ್ದು ಮಾತನಾಡಲಿಲ್ಲವೆಂದು ಯುವಕನಿಗೆ ಚೂರಿ ಇರಿದಿದ್ದಾರೆ.
ಆರಗ ಜ್ಞಾನೇಂದ್ರ ಅವರು ಹೇಳಿಕೆ ನೀಡಿದ್ರು. ಬಳಿಕ ತಪ್ಪಾಯ್ತು ಅಂತಾ ಹೇಳಿದ್ದಾರೆ. ನಿಮಗೆ ಗೃಹ ಸಚಿವ ಸ್ಥಾನ ಕೊಡಲಾಗಿದೆ, ಯಾಕೆ ಕೊಟ್ಟಿದ್ದಾರೆ ಅನ್ನೋ ಚರ್ಚೆ ಬೇಡ. ಕೂಡಲೇ ನಿಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೋಗಿ, ನಿಮಗೂ ಘನತೆ ಬರುತ್ತದೆ. ಗೃಹಸಚಿವ ಸ್ಥಾನಕ್ಕೂ ಮಾನ ಉಳಿಯುತ್ತದೆ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಮುಸ್ಕಾನ್‌ಳನ್ನು ಹಾಡಿ ಹೊಗಳಿದ ಅಲ್‌ಖೈದಾ ಉಗ್ರ: ಸಿಎಂ ಇಬ್ರಾಹಿಂ ಹೇಳಿದ್ದೇನು?
ಕನ್ನಡದವರು ಸುಮ್ಮನೆ ಕೂತಿದ್ದೀರಾ ಅಂತಾ ವಾಟ್ಸ್‌ಆ್ಯಪ್, ಫೇಸ್ಬುಕ್ನಲ್ಲಿ ಹರಿದಾಡ್ತಿದೆ. ಯಾವುದು ಸತ್ಯ, ಯಾವುದು ಸುಳ್ಳು ಎಂಬುದೇ ಅರ್ಥವಾಗುತ್ತಿಲ್ಲ. ಸರ್ವ ಜನಾಂಗದ ಶಾಂತಿಯ ತೋಟ ಅಂತಾ ರಾಷ್ಟ್ರಕವಿ ಕುವೆಂಪು ಸಾಹಿತ್ಯ ಬರೆದಿದ್ದಾರೆ. ಸಭೆ, ಸಮಾರಂಭಗಳಲ್ಲಿ ಈ ಹಾಡನ್ನು ಹೇಳ್ತಿದ್ದಾರೆ. ಹಿಂದೂ, ಕ್ರೈಸ್ತ, ಮುಸಲ್ಮಾನ ಅಂತಾ ಸಾಲು ಇದೆ. ಇದು ಯಾರಿಗೂ ಅರ್ಥ ಆಗ್ತಿಲ್ಲ. ನಾಡಿಗೆ ಅಪಚಾರ ಆಗಬಾರದು ಎಂದು ತಿಳಿಸಿದರು.
ರಾಜ್ಯವನ್ನು ಕಂಟ್ರೋಲ್ ತೆಗೆದುಕೊಂಡಿದ್ದೇವೆಂದು ಅಂದುಕೊಂಡಿದ್ದಾರೆ. ರಾಜ್ಯದಲ್ಲಿ ಒಂದಾದ ಮೇಲೆ ಒಂದು ಘಟನೆ ನಡೆಯುತ್ತಿದೆ. ಹಿಜಾಬ್, ದೇವಸ್ಥಾನ, ಹಲಾಲ್ ಕಟ್, ಜಟಕಾ ಕಟ್ ಬಂತು. ಈಗ ಮಾವಿನ ಹಣ್ಣು ವಿಚಾರ ಬಂದಿದೆ. ನಾನು ನಮ್ಮ ತೋಟದಲ್ಲಿ ಮಾವಿನ ಹಣ್ಣನ್ನ ಮುಸ್ಲಿಂರಿಗೆ ಕೊಟ್ಟಿದ್ದೇನೆ ಎಂದರು.