ಬೆಂಗಳೂರು: ಸೀರೆಗಳು ನಮ್ಮ ಸಂಪ್ರದಾಯ, ನಮ್ಮ ಸಂಸ್ಕೃತಿ ಎಂಬ ಶೀರ್ಷಿಕೆಯಡಿ ಕರ್ನಾಟಕ ಕರಕುಶಲ ಮಂಡಳಿಯು ವಸ್ತ್ರಾಭರಣ ಎಂಬ ಹೆಸರಿನಲ್ಲಿ ಪ್ರದರ್ಶನ ಆಯೋಜಿಸಿದೆ. ನಗರದ ಚಿತ್ರಕಲಾ ಪರಿಷತ್ನಲ್ಲಿ ಇಂದಿನಿಂದ ಆರಂಭವಾಗಿರುವ ಈ ಪ್ರದರ್ಶನದ ವಿಶೇಷ ಅಂದರೆ ದೇಶದ ಪ್ರಮುಖ ನೇಕಾರರು, ಉದಯೋನ್ಮುಖ ನೇಕಾರರು, ರಾಷ್ಟ್ರೀಯ ಹಾಗೂ ರಾಜ್ಯಮಟ್ಟದ ಪ್ರಶಸ್ತಿ ಪಡೆದ ನೇಕಾರರನ್ನು ಪರಿಚಯಿಸುತ್ತಿದೆ.
ಸಂಪ್ರದಾಯವನ್ನು ಜೀವಂತವಾಗಿರಿಸುವುದು, ಅದನ್ನು ಮುಂದಿನ ತಲೆಮಾರಿಗೆ ಪರಿಚಯಿಸುವ ಮುಖ್ಯ ಗುರಿ ಹೊಂದಿದೆ. ಕರಕುಶಲ ಮಂಡಳಿಯು ಕರ್ನಾಟಕದ ಪರಂಪರಾಗತ ಕಲೆಗಳನ್ನು ಉಳಿಸಿ ಬೆಳೆಸುವ ಕಾರ್ಯ ಮಾಡುತ್ತಿದ್ದು, ಈ ಮೂಲಕ ದೊರೆಯುವ ಹಣವನ್ನ ಕಲಾ ಪ್ರದರ್ಶನ, ಸೆಮಿನಾರ್, ವಿನ್ಯಾಸ ಅಭಿವೃದ್ಧಿ, ಕುಶಲಕರ್ಮಿಗಳ ಕಲ್ಯಾಣ ಯೋಜನೆ ಮುಂತಾದವುಗಳನ್ನು ನಡೆಸಲಿದೆ.
ಅಂದಹಾಗೆ ಪ್ರತಿ ವರ್ಷದ ಪ್ರದರ್ಶನದಲ್ಲಿ ನಿರ್ದಿಷ್ಟ ಪರಂಪರೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಈ ಬಾರಿ ವೈವಿಧ್ಯಮಯ ಕೈಮಗ್ಗದ ಚೋಲಿಗಳು, ಬೆಸ್ಪೋಕ್ ಕಂಜಾರೀಸ್‍ಗಳು ಪ್ರದರ್ಶನದಲ್ಲಿ ಕಾಣಬಹುದಾಗಿದೆ. ಇನ್ನು ವಿವಿಧ ರಾಜ್ಯಗಳ 50ಕ್ಕೂ ಹೆಚ್ಚು ನೇಕಾರರು ಪ್ರದರ್ಶನದಲ್ಲಿ ಭಾಗವಹಿಸಿದ್ದಾರೆ.
ಉಪ್ಪಡ ಮತ್ತು ಪೈಥಾನಿ ಸೀರೆಗಳು, ಹ್ಯಾಂಡ್ ಬ್ಲಾಕ್ ಪ್ರಿಂಟೆಡ್ ಯಾರ್ಡೇಜ್, ಪ್ರಾಚೀನ ನೈಸರ್ಗಿಕ ಬಣ್ಣದ ಹ್ಯಾಂಡ್ ಬ್ಲಾಕ್ ಪ್ರಿಂಟ್ ಬಟ್ಟೆಗಳು, ವರ್ಣರಂಜಿತ ಚಂದೇರಿ ಸೇರಿದಂತೆ ಜಾಂದಾನಿ ನೇಯ್ಗೆಗಳು, ಲಿನನ್ ಸೀರೆಗಳು, ಅಲಂಕಾರಿಕ ವಿನ್ಯಾಸಗಳು ಪ್ರದರ್ಶನದಲ್ಲಿದ್ದು, ಒಂದಕ್ಕೊಂದು ಸೆಡ್ಡು ಹೊಡೆಯುವಂತಿವೆ.
ಇನ್ನು ಮೊದಲ ದಿನವೇ ವಿಶೇಷ ವಸ್ತ್ರಾಭರಣ ಪ್ರದರ್ಶನಕ್ಕೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಒಂದೇ ಸೂರಿನಡಿ ಎಲ್ಲ ರಾಜ್ಯಗಳ ವಸ್ತ್ರಗಳ ಡಿಸೈನ್ ದೊರೆಯೋದ್ರಿಂದ ಮಹಿಳಾಮಣಿಗಳು ಶಾಪಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ.