ಬೆಂಗಳೂರು: ನಗರದಲ್ಲಿ ಬೀದಿ ನಾಯಿಗಳ ಹಾವಳಿಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಬಿಬಿಎಂಪಿಗೆ ಇನ್ನೂ ಸಾಧ್ಯವಾಗಿಲ್ಲ. ಆದರೆ, ಹಿಂದಿನ ವರ್ಷಗಳಿಗೆ ಹೋಲಿಸಿದರೆ, ಈ ಬಾರಿ ಎಲ್ಲ ವಲಯಗಳಲ್ಲೂ ಟೆಂಡರ್ ಕರೆದು, ಬೀದಿ ನಾಯಿಗಳನ್ನು ಹಿಡಿದು, ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸುವ ಪ್ರಯತ್ನಕ್ಕೆ ಬಿಬಿಎಂಪಿ ಮುಂದಾಗಿದೆ.
2018-19 ನೇ ಸಾಲಿನಲ್ಲಿ 46,151 ನಾಯಿಗಳಿಗೆ ಎಬಿಸಿ ಚಿಕಿತ್ಸೆ ನೀಡಲಾಗಿದ್ದು, 1,16,216 ನಾಯಿಗಳಿಗೆ ಹುಚ್ಚುರೋಗ ನಿರೋಧಕ ಲಸಿಕೆ (ಎಆರ್ವಿ- ರೇಬಿಸ್ ಲಸಿಕೆ) ಹಾಕಲಾಗಿದೆ. ಇನ್ನು 2019-20ನೇ ಸಾಲಿನಲ್ಲಿ 38,035 ನಾಯಿಗಳಿಗೆ ಎಬಿಸಿ ಹಾಗೂ 76,556 ನಾಯಿಗಳಿಗೆ ಎಆರ್ವಿ ಚಿಕಿತ್ಸೆ ನೀಡಲಾಗಿದೆ. 2020-21ನೇ ಸಾಲಿನಲ್ಲಿ ಎಪ್ರಿಲ್ 20 ರಿಂದ ಜನವರಿ ಅಂತ್ಯದವರೆಗೆ 27,326 ನಾಯಿಗಳಿಗೆ ಎಬಿಸಿ ಹಾಗೂ 53,800 ನಾಯಿಗಳಿಗೆ ಎಆರ್ವಿ ಚಿಕಿತ್ಸೆ ನೀಡಲಾಗಿದೆ. ಕೋವಿಡ್ ಲಾಕ್ಡೌನ್ ಅವಧಿಯಲ್ಲಿ ಸ್ಥಗಿತವಾಗಿದ್ದ, ಈ ಕಾರ್ಯಾಚರಣೆ ಲಾಕ್ಡೌನ್ ತೆರವಾದ ಬಳಿಕ ಚುರುಕು ಪಡೆದಿದೆ.
2020-21ರಲ್ಲಿ ನಡೆದ ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆ:
2020-21ರಲ್ಲಿ ಒಟ್ಟು 27,484 ಬೀದಿ ನಾಯಿಗಳನ್ನು ಹಿಡಿಯಲಾಗಿದೆ. ಈ ಪೈಕಿ 12,926 ಗಂಡು, 14,400 ಹೆಣ್ಣು ಸೇರಿ ಒಟ್ಟು 27,326 ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆಗೆ 3,27,41,510 ರೂ. ವೆಚ್ಚ ಮಾಡಲಾಗಿದೆ.
ಜನವರಿ ತಿಂಗಳಿನ ವರದಿ: ಪೂರ್ವ ವಲಯದಲ್ಲಿ 807, ಪಶ್ಚಿಮದಲ್ಲಿ 586, ದಕ್ಷಿಣದಲ್ಲಿ 494, ಆರ್ ಆರ್ ನಗರದಲ್ಲಿ 625, ದಾಸರಹಳ್ಳಿಯಲ್ಲಿ 403, ಬೊಮ್ಮನಹಳ್ಳಿಯಲ್ಲಿ 782, ಯಲಹಂಕದಲ್ಲಿ 367, ಮಹದೇವಪುರದಲ್ಲಿ 676 ಸೇರಿದಂತೆ ಒಟ್ಟು 2021ರ ಜನವರಿ ಒಂದೇ ತಿಂಗಳಲ್ಲಿ 4,740 ಬೀದಿನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಲಾಗಿದೆ.
ಈ ಸುದ್ದಿಯನ್ನೂ ಓದಿ: 13 ವರ್ಷ ಕಳೆದರೂ ಸಂತಾನ ಹರಣ ಇಲ್ಲ: ಬಳ್ಳಾರಿಯಲ್ಲಿ 20 ಸಾವಿರ ಗಡಿ ದಾಟಿದ ಬೀದಿ ನಾಯಿಗಳ ಸಂಖ್ಯೆ
ಇನ್ನೊಂದು ಆತಂಕಕಾರಿ ವಿಚಾರ ಅಂದರೆ, ರೇಬಿಸ್ ಸೋಂಕು ಪರೀಕ್ಷೆಗೆ ಒಳಪಡಿಸಿದ ಬೀದಿನಾಯಿಗಳಲ್ಲಿ ಶೇ 83 ರಷ್ಟು ಶ್ವಾನಗಳಿಗೆ ರೇಬಿಸ್ ಸೋಂಕಿನ ಲಕ್ಷಣ ಕಂಡು ಬಂದಿದೆ. ಎಂಟು ವಲಯಗಳ 172 ನಾಯಿಗಳ ಮೆದುಳಿನ ದ್ರವಯುಕ್ತ ಮಾದರಿಯನ್ನು ಹೆಬ್ಬಾಳದ ಪಶು ವೈದ್ಯಕೀಯ ಮಹಾವಿದ್ಯಾಲಯದ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಸಾರ್ವಜನಿಕರ ದೂರುಗಳನ್ನು ಆಧರಿಸಿ, ನಾಯಿಗಳನ್ನು ಹಿಡಿದು ರೇಬಿಸ್ ಚುಚ್ಚುಮದ್ದು ಹಾಕಲಾಗುತ್ತಿದೆ. ಇನ್ನು ನಗರದಲ್ಲಿ ಬೀದಿ ನಾಯಿ ಕಡಿತದ ಗಂಭೀರ ಪ್ರಕರಣಗಳು ಈ ವರ್ಷ ವರದಿಯಾಗಿಲ್ಲ.