ಬೆಂಗಳೂರು : ಈದ್-ಮಿಲಾದ್ ಹಬ್ಬದ ಪ್ರಯುಕ್ತ ಗುರುವಾರ ನಗರದ ನೃಪತುಂಗ ರಸ್ತೆಯ ವೈ.ಎಂ.ಸಿ.ಎ ಮೈದಾನದಲ್ಲಿ ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ವಿವಿಧ ಸ್ಥಳಗಳಿಂದ ಆಗಮಿಸುವುದರಿಂದ ವಾಹನ ಸವಾರರು ಬದಲಿ ಮಾರ್ಗದಲ್ಲಿ ಸಂಚರಿಸಲು ಸಂಚಾರ ಠಾಣಾ ಪೊಲೀಸರು ತಿಳಿಸಿದ್ದಾರೆ.
ಆನಂದ್‌ರಾವ್ ವೃತ್ತದ ಕಡೆಯಿಂದ ಬರುವ ವಾಹನ ಸವಾರರು ಕೆ ಆರ್ ವೃತ್ತದ ಬಳಿ ಎಡ ತಿರುವು ಪಡೆದು ಡಾ ಅಂಬೇಡ್ಕರ್ ರಸ್ತೆಯಲ್ಲಿ ಸಾಗಿ ಬಾಳೇಕುಂದ್ರಿ ವೃತ್ತದ, ಕ್ವೀನ್ಸ್ ರಸ್ತೆ ಮೂಲಕ ಸಂಚರಿಸಬಹುದು. ಬಾಳೇಕುಂದ್ರಿ ವೃತ್ತದಿಂದ ಸಿಟಿ ಮಾರ್ಕೆಟ್ ಕಡೆಗೆ ತೆರಳುವ ವಾಹನ ಸವಾರರು ಕೀನ್ಸ್ ರಸ್ತೆ ಸಿದ್ದಲಿಂಗಯ್ಯ ವೃತ್ತದ ಮೂಲಕ ತೆರಳಬಹುದು.
ಮೈಸೂರು ರಸ್ತೆಯಲ್ಲಿ ಸಂಚಾರ ದಟ್ಟಣೆ ಹೆಚ್ಚಾದಲ್ಲಿ ನಾಯಂಡಹಳ್ಳಿ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು ನಾಗರಭಾವಿ ರಿಂಗ್ ರಸ್ತೆಯ ಮೂಲಕ ಸಂಚರಿಸಿ ಮತ್ತು ಚಂದ್ರಲೇಔಟ್, ವಿಜಯನಗರ ಮಾರ್ಗವಾಗಿ ಸಂಚರಿಸಬಹುದಾಗಿದೆ. ಕಿಂಕೋ ಜಂಕ್ಷನ್‌ನಲ್ಲಿ ಎಡತಿರುವು ಪಡೆದು ವಿಜಯನಗರ ಮೂಲಕ ಹಾಗೂ ವಿಜಯನಗರ ಕಡೆಯಿಂದ ಬರುವ ವಾಹನಗಳು ಮೈಸೂರು ಕಡೆಗೆ ಚಲಿಸಲು ಚಂದ್ರಲೇಔಟ್‌ನಿಂದ ಬಲ ತಿರುವು ಪಡೆದು ನಾಗರಬಾವಿ ವೃತ್ತ ಹಾಗೂ ರಿಂಗ್ ರಸ್ತೆ ಮುಖಾಂತರ ಕೆಂಗೇರಿ ಉಪನಗರ ಮಾರ್ಗವಾಗಿ ತೆರಳಬಹುದು. ಹಾಗೆಯೇ ಟೌನ್‌ಹಾಲ್ ಕಡೆಗೆ ಸಂಚಾರ ದಟ್ಟಣೆಯಾಗಿದ್ದಲ್ಲಿ ಬಸಪ್ಪ ವೃತ್ತದ ಕಡೆಗೆ ಬಲತಿರುವು ನೀಡಿ ಅಥವಾ ಅವೆನ್ಯೂ ರಸ್ತೆ ಕಡೆಗೆ ಮಾರ್ಗ ಬದಲಾವಣೆ ಮಾಡಲು ಸಂಚಾರಿ ಠಾಣಾ ಪೊಲೀಸರು ಸೂಚಿಸಿದ್ದಾರೆ.
ಸಂಚಾರ ನಿರ್ಬಂಧಿಸಿರುವ ರಸ್ತೆಗಳು: ಕೆ.ಜಿ ಹಳ್ಳಿ ಮತ್ತು ಪುಲಕೇಶಿನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈದ್-ಮಿಲಾದ್ ಹಬ್ಬದ ಸಲುವಾಗಿ ಶಿವಾಜಿನಗರ ಕಂಬಲ್ ಘೋಷ್ ದರ್ಗಾಕ್ಕೆ ಮೆರವಣಿಗೆ ಇರುವುದರಿಂದ ಸಾರ್ವಜನಿಕರ ಸುಗಮ ಸಂಚಾರದ ಹಿತದೃಷ್ಠಿಯಿಂದ ಬೆಳಗ್ಗೆ 10 ಗಂಟೆಯಿಂದ ರಾತ್ರಿ 10 ರವರೆಗೆ ನಾಗವಾರ ಜಂಕ್ಷನ್‌ನಿಂದ ಪಾಟರಿ ವೃತ್ತ, ನೇತಾಜಿ ಜಂಕ್ಷನ್‌ನಿಂದ ಪಾಟರಿ ವೃತ್ತದ ಮೂಲಕ ಟ್ಯಾನರಿ ರಸ್ತೆ ಕಡೆಗೆ, ಲಾಜರ್ ರಸ್ತೆ ಮತ್ತು ಎಂ.ಎಂ ರಸ್ತೆ ಜಂಕ್ಷನ್‌ನಿಂದ ಹೆನ್ಸ್ ಜಂಕ್ಷನ್‌ವರೆಗೆ, ಎಚ್.ಎಂ ರಸ್ತೆಯಲ್ಲಿ ಕೆ.ಇ.ಬಿ ಜಂಕ್ಷನ್‌ನಿಂದ ಹಾಲ್ ರಸ್ತೆಗೆ ಹೋಗುವ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಪಾರ್ಕಿಂಗ್ ನಿರ್ಬಂಧ: ಪಾಟರಿ ವೃತ್ತದಿಂದ ನಾಗವಾರ ಸಿಗ್ನಲ್, ಗೋವಿಂದಪುರ ಜಂಕ್ಷನ್‌ನಿಂದ ಗೋವಿಂದಪುರ ಪೊಲೀಸ್ ಠಾಣೆವರೆಗೆ ಮತ್ತು ಎಚ್‌ಬಿಆರ್ ಬಡಾವಣೆಯ ಸಿದ್ದಪ್ಪ ರೆಡ್ಡಿ ಜಂಕ್ಷನ್‌ನಿಂದ ನರೇಂದ್ರ ಟೆಂಟ್ ಜಂಕ್ಷನ್‌ವರೆಗೆ ಹಾಗೂ ನೇತಾಜಿ ಜಂಕ್ಷನ್‌ನಿಂದ ಹಜ್ ಕ್ಯಾಂಪಸ್‌ವರೆಗೆ ಮತ್ತು ಲಾಜರ್ ರಸ್ತೆಯಿಂದ ವೀಲರ್ಸ್ ರಸ್ತೆಯ ಥಾಮಸ್ ಕೆಫೆ ಜಂಕ್ಷನ್‌ವರೆಗೆ ರಸ್ತೆಯ ಎರಡು ಬದಿಗಳಲ್ಲಿ ವಾಹನಗಳ ನಿಲುಗಡೆಗಳನ್ನು ನಿರ್ಬಂಧಿಸಲಾಗಿದೆ.
ಇದನ್ನೂ ಓದಿ : ಶಿವಮೊಗ್ಗದಲ್ಲಿ ಗಣಪತಿ ಮೆರವಣಿಗೆ, ಈದ್ ಮಿಲಾದ್... ಬಂದೋಬಸ್ತ್ ಬಗ್ಗೆ ಎಡಿಜಿಪಿ ಹಿತೇಂದ್ರ ಸಭೆ