ಬೆಂಗಳೂರು: ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿರುವ ಮಹಿಳೆಯರೇ ಕಾರ್ಯ ನಿರ್ವಹಣೆ ಮಾಡುವ ವನಿತ ಸಹಾಯವಾಣಿ ಸದ್ಯ ಕುಟುಂಬದಲ್ಲಿನ ಸಮಸ್ಯೆಗಳನ್ನ ಪರಿಹಾರ ಮಾಡುವ ಜೊತೆಗೆ ನಗರದಲ್ಲಿ ಲಾಕ್‌ಡೌನ್ ಸಂದರ್ಭದಲ್ಲಿ ಸಂಕಷ್ಟದಲ್ಲಿ ಸಿಲುಕಿದ ಕೆಲವರನ್ನ ರಕ್ಷಿಸುವ ಕೆಲಸ ಮಾಡಿದ್ದಾರೆ.
ಸದ್ಯ ನಗರದಲ್ಲಿ ಲಾಕ್‌ಡೌನ್ ಸಂದರ್ಭದಲ್ಲಿ ಭಿಕ್ಷುಕರು, ನಿರ್ಗತಿಕರು, ಅನಾಥರು, ಪಿಜಿಗಳಲ್ಲಿ ವಾಸಿಸುವವರು ಸಂಕಷ್ಟ ಎದುರಿಸುತ್ತಿದ್ದಾರೆ. ಇಂತಹವರನ್ನು ಪತ್ತೆಮಾಡಿ ಅವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ. ಈವರೆಗೆ 56 ಜನರನ್ನು ರಕ್ಷಣೆ ಮಾಡಲಾಗಿದೆ. ಲಾಕ್‌ಡೌನ್ ಸಮಯದಲ್ಲಿ ವನಿತ ಸಹಾಯವಾಣಿ ಕೌನ್ಸೆಲಿಂಗ್ ಮಾಡುವ ಜೊತೆಗೆ ಮಹಿಳಾ ತಂಡ ಪೊಲೀಸರ ಸಹಾಯದಿಂದ ರೆಸ್ಕ್ಯೂ ಕೆಲಸವನ್ನು ಕೂಡ ಮಾಡಿದ್ದಾರೆ.
ಪ್ರಮುಖ ರಕ್ಷಣಾ ಕಾರ್ಯಗಳು :
1. ಬಿಟಿಎಂ ಲೇಔಟ್ ಬಳಿ ರಸ್ತೆಯಲ್ಲಿ ಓರ್ವ ಮಹಿಳೆ ಬೆಡ್ ಹಾಕಿ ಮಲಗಿದ್ದಳು, ಅವಳನ್ನ ನೋಡಿದ ಸ್ಥಳೀಯರು ನಗರ ಆಯುಕ್ತರ ಕಚೇರಿಯ ವನಿತ ಸಹಾಯವಾಣಿಗೆ ತಿಳಿಸಿದ್ರು. ನಂತ್ರ ಪೊಲೀಸರು ಹಾಗೂ ಆ್ಯಂಬುಲೆನ್ಸ್ ಸಹಾಯದಿಂದ ರಾಜೀವ್ ಗಾಂಧಿ ಆಸ್ಪತ್ರೆಗೆ ಕರೆದೊಯ್ದು ಕೋವಿಡ್ ಪರೀಕ್ಷೆ ಮಾಡಿಸಲಾಗಿತ್ತು. ಕೊರೊನಾ ಇಲ್ಲದಿರುವುದು ದೃಢಪಟ್ಟ ನಂತರ, ಆಕೆಯನ್ನು ಮಾನಸಿಕ ಅಸ್ವಸ್ಥತೆ ಕಾರಣ ನಿಮ್ಹಾನ್ಸ್‌ಗೆ ಶಿಫ್ಟ್ ಮಾಡಿದ್ದಾರೆ.
2. ಯಶಂವತಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಂಗವಿಕಲೆಯೊಬ್ಬಳು ಮನೆಯಿಲ್ಲದೇ ರಸ್ತೆ ಬದಿ ಮಲಗಿದ್ದಳು. ಈಕೆಯನ್ನ ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿದ್ದಾರೆ.
3. ಯುವತಿಯೋರ್ವಳು ಪಿಜಿ ಮಾಲೀಕನಿಂದ ಲಾಕ್‌ಡೌನ್ ಸಂಧರ್ಭದಲ್ಲಿ ತನಗೆ ಆದ ಸಮಸ್ಯೆ ಕುರಿತು ಟ್ವೀಟ್ ಮಾಡಿದ್ದರು. ತಕ್ಷಣ ನಗರ ಆಯುಕ್ತರ ಕಚೇರಿಯ ಸೋಶಿಯಲ್ ಮೀಡಿಯಾದ ಸಹಾಯ ಪಡೆದು, ವಿಜಯನಗರ ಪೊಲೀಸರ ಸಹಾಯದಿಂದ ಹುಡುಗಿ ಪಿಜಿ ಪತ್ತೆ ಮಾಡಿ ಸಹಾಯ ಮಾಡಿದ್ದಾರೆ.
ಸದ್ಯ ಲಾಕ್‌ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೊಳಗಾದವರಿಗೆ ವನಿತ ಸಹಾಯವಾಣಿಯಲ್ಲಿ ಕಾರ್ಯ ನಿರ್ವಹಿಸುವ ಮಹಿಳಾ ತಂಡ ಸಹಾಯಹಸ್ತ ಚಾಚಿದ್ದು, ಇವರ ಕಾರ್ಯಕ್ಕೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಭೇಷ್ ಅಂದಿದ್ದಾರೆ.