ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕೊನೆಯ ಬಜೆಟ್ ಮಂಡನೆ ಮಾಡಿದ್ದು, ಹೈನುಗಾರಿಕೆ, ಪಶುಸಂಗೋಪನೆಗೆ ಸಂಬಂಧಿಸಿದಂತೆ ಕೆಲವೊಂದು ಮಹತ್ವದ ಯೋಜನೆಗಳನ್ನು ಕೈಗೊಂಡಿದ್ದಾರೆ. ಪ್ರಾಣಿಗಳ ಚರ್ಮಗಂಟು ರೋಗವನ್ನು ತಡೆಗಟ್ಟಲು 1 ಕೋಟಿಗೂ ಹೆಚ್ಚು ಜಾನುವಾರುಗಳಿಗೆ ಲಸಿಕೆ ನೀಡಲಾಗುವುದು. ಈ ಸೋಂಕಿನಿಂದಾಗಿ ಮರಣ ಹೊಂದಿದ ರಾಸುಗಳ ಮಾಲೀಕರಿಗೆ ಪರಿಹಾರವಾಗಿ 55 ಕೋಟಿ ರೂ. ಮಂಜೂರು ಮಾಡಲಾಗಿದೆ.
ಮೆಗಾ ಡೈರಿ ಸ್ಥಾಪನೆ: ಮಂಡ್ಯದಲ್ಲಿ ಇತ್ತೀಚೆಗಷ್ಟೇ 2,250 ಕೋಟಿ ವೆಚ್ಚದಲ್ಲಿ ಮೆಗಾ ಡೈರಿಯನ್ನು ಸ್ಥಾಪಿಸಲಾಗಿತ್ತು. ಪ್ರಸ್ತುತ ಮುಂಗಡ ಪತ್ರದಲ್ಲಿ ಅದೇ ರೀತಿಯ ಮೆಗಾ ಡೈರಿಗಳ ಸ್ಥಾಪನೆಗೆ ಘೋಷಿಸಲಾಗಿದೆ. ಹಾವೇರಿಯಲ್ಲಿ 1 ಲಕ್ಷ ಲೀಟರ್ ಸಾಮರ್ಥ್ಯದ ಮೆಗಾ ಡೈರಿ ಸ್ಥಾಪನೆಗೆ ಸರ್ಕಾರದಿಂದ 90 ಕೋಟಿ ರೂ. ಅನುದಾನ ಘೋಷಿಸಲಾಗಿದೆ. ಪ್ರಸಕ್ತ ವರ್ಷದಲ್ಲಿ ಕಲ್ಯಾಣ ಕರ್ನಾಟಕದ ಭಾಗದಲ್ಲಿ ಹಾಲು ಉತ್ಪಾದನೆ ಹೆಚ್ಚಿಸಲು ಬಳ್ಳಾರಿಯಲ್ಲಿ ದಿನಂಪ್ರತಿ 2 ಲಕ್ಷ ಲೀಟರ್ ಹಾಲು ಸಂಸ್ಕರಣಾ ಸಾಮರ್ಥ್ಯದ ಮೆಗಾ ಡೈರಿ ಸ್ಥಾಪನೆಗೆ 100 ಕೋಟಿ ರೂಪಾಯಿ ಹಂಚಿಕೆಯಾಗಿದೆ.
ಅಮೃತ ಸ್ವಾಭಿಮಾನಿ ಕುರುಗಾಹಿ ಯೋಜನೆಯಡಿ 20,000 ಫಲಾನುಭವಿಗಳಿಗೆ 355 ಕೋಟಿ ರೂ.ಗಳ ವೆಚ್ಚದಲ್ಲಿ ಕುರಿ ಮೇಕೆ ಘಟಕ ಸ್ಥಾಪಿಸುವ ಯೋಜನೆ ಜಾರಿ ಮಾಡಲು ತೀರ್ಮಾನಿಸಲಾಗಿದೆ. ರಾಜ್ಯದ ಹಾಲು ಉತ್ಪಾದಕರಿಗೆ 1,067 ಕೋಟಿ ಪ್ರೋತ್ಸಾಹ ಧನ ನೀಡಲು ನಿರ್ಧರಿಸಲಾಗಿದೆ.
ಇದನ್ನೂ ಓದಿ: ಬಜೆಟ್ 2023-24: ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿ ಸ್ಥಾಪನೆ: 1 ಲಕ್ಷ ಹುದ್ದೆ ಭರ್ತಿ: ಗೃಹರಕ್ಷಕರ ಭತ್ಯೆ ಹೆಚ್ಚಳ
ಮುಧೋಳ ಶ್ವಾನ ತಳಿ ಅಭಿವೃದ್ಧಿಗೆ ಅನುದಾನ: ರೈತ ಮಹಿಳೆಯರಿಗೆ ಕೋಳಿ ಸಾಕಾಣಿಕೆ ಪ್ರೋತ್ಸಾಹಿಸಲು 2022-23 ನೇ ಸಾಲಿನಲ್ಲಿ 16,642 ಫಲಾನುಭವಿಗಳಿಗೆ 3.33 ಲಕ್ಷ ಕೋಳಿ ಮರಿ ವಿತರಿಸಲು ನಿರ್ಧರಿಸಲಾಗಿದೆ. ಪ್ರಾಣಿ ಕಲ್ಯಾಣ ಮಂಡಳಿಗೆ 5 ಕೋಟಿ ರೂ. ಅನುದಾನ ಮತ್ತು ಸಂಚಾರಿ ಚಿಕಿತ್ಸಾಲಯ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ. ಮುಧೋಳ ಜಾತಿಯ ಶ್ವಾನ ತಳಿ ಅಭಿವೃದ್ಧಿಗಾಗಿ 5 ಕೋಟಿ ಅನುದಾನ ಘೋಷಿಸಲಾಗಿದೆ. ಬೀದಿ ನಾಯಿ ದತ್ತು ಕಾರ್ಯಕ್ರಮಕ್ಕೆ ವಿಶೇಷ ಆನ್ಲೈನ್ ತಂತ್ರಾಂಶ ಅಭಿವೃದ್ಧಿಪಡಿಸಲು ಚಿಂತಿಸಲಾಗಿದೆ.
ರೈತರಿಗೆ ಬೀಜ, ರಸಗೊಬ್ಬರ, ಕೀಟನಾಶಕ ಪರಿಕರಗಳಿಗೆ 962 ಕೋಟಿ ರೂ ವೆಚ್ಚ ಮಾಡಲಾಗಿದೆ. ಕೃಷಿಯನ್ನು ಮತ್ತಷ್ಟು ಉತ್ತಮಗೊಳಿಸಲು ಸಣ್ಣ ಸಣ್ಣ ರೈತರ ಮಟ್ಟಿಗೆ ಗ್ರಾಮಾಂತರ ಪ್ರದೇಶಗಳಲ್ಲಿ ಹೊಸ ಪದ್ಧತಿಯ ಗೋದಾಮುಗಳ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ. ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲವನ್ನು 3 ಲಕ್ಷದಿಂದ 5 ಲಕ್ಷ ರೂ.ಗೇರಿಸುವ ಸಾಧ್ಯತೆಯಿದೆ. ರೈತರ ಬೆಳೆ ಬಿತ್ತನೆ ಸಂದರ್ಭದಲ್ಲೇ ಖರ್ಚು ವೆಚ್ಚದ ಆಧಾರದಲ್ಲಿ ಲಾಭದಾಯಕ ದರವನ್ನು ನಿಗದಿ ಮಾಡಲು ನಿರ್ಧರಿಸಲಾಗಿದೆ. ಜೊತೆಗೆ ರೈತರಿಗೆ ಡೀಸೆಲ್ ಸಹಾಯಧನವನ್ನು ವಿಸ್ತರಿಸಲು ಯೋಜಿಸಲಾಗಿದೆ. ಅಡಿಕೆ ರೋಗವನ್ನು ತಡೆಯಲು ಸರ್ಕಾರದಿಂದ ವಿಶೇಷ ಅನುದಾನ ಘೋಷಣೆಯಾಗಿದೆ.
ಇದನ್ನೂ ಓದಿ: ರೈತರಿಗೆ ಸಿಹಿಸುದ್ದಿ ನೀಡಿದ ಬೊಮ್ಮಾಯಿ: 3 ಲಕ್ಷದವರೆಗಿದ್ದ ಶೂನ್ಯ ಬಡ್ಡಿದರ ಸಾಲದ ಮೊತ್ತ 5 ಲಕ್ಷಕ್ಕೆ ಏರಿಕೆ