ಬೆಂಗಳೂರು: ಲೋಕಾಯುಕ್ತಕ್ಕೆ ಮತ್ತೆ ಅಧಿಕಾರ ಬಲಪಡಿಸುವ ಚರ್ಚೆ ಮುನ್ನೆಲೆಗೆ ಬಂದಿದ್ದು, ನಾಳೆ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನವಾಗುವ ಸಾಧ್ಯತೆ ಇದೆ. ಲೋಕಾಯುಕ್ತಕ್ಕೆ ಪವರ್ ನೀಡುವ ವಿಚಾರಕ್ಕೆ ಸಂಬಂಧಪಟ್ಟಂತೆ ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿರುವ ಇಂಧನ ಸಚಿವ ವಿ.ಸುನೀಲ್ ಕುಮಾರ್, ನಾಳೆ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಉಳಿದ ವಿಚಾರ ಚರ್ಚೆ ಮಾಡುತ್ತೇವೆ ಎಂದಷ್ಟೇ ಹೇಳಿದ್ದಾರೆ.
ನಮ್ಮ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದೆ. ಎಲ್ಲ ವಿಚಾರಗಳ ಬಗ್ಗೆ ಕಾಲಕಾಲಕ್ಕೆ ಪಕ್ಷ ತೀರ್ಮಾನ ಮಾಡುತ್ತದೆ. ರಾಜ್ಯಾಧ್ಯಕ್ಷರ ಬದಲಾವಣೆ ಪಕ್ಷದ ಆಂತರಿಕ ವಿಚಾರ. ಬಿಜೆಪಿ ಒಂದು ಜಾತಿ, ಸಮುದಾಯ, ವ್ಯಕ್ತಿ ಮತ್ತು ಕುಟುಂಬಕ್ಕೆ ಸೀಮಿತವಾದ ಪಾರ್ಟಿ ಅಲ್ಲ ಎಂದು ಅಭಿಪ್ರಾಯಪಟ್ಟರು. ಸೋನಿಯಾ, ರಾಹುಲ್ ಗಾಂಧಿ ಇಡಿ ವಿಚಾರಣೆಗೆ ವಿರೋಧ ವ್ಯಕ್ತಪಡಿಸುತ್ತ ಇರುವವರು ಈ ಹಿಂದೆ ಒಂದಲ್ಲಾ ಒಂದು ಭ್ರಷ್ಟಾಚಾರ ಮಾಡಿ ಜೈಲಿಗೆ ಹೋಗಿ ಬಂದವರು.
ಕಾಂಗ್ರೆಸ್ ದೇಶದ ಕ್ಷಮೆ ಕೇಳಬೇಕು. ಕಾನೂನಿಗೆ ಗೌರವ ಕೊಡಲ್ಲ ಎಂದಿರುವ ಕಾಂಗ್ರೆಸ್ ಈ ಕುರಿತು ಸ್ಪಷ್ಟನೆ ಕೊಡಬೇಕು. ಕಾಂಗ್ರೆಸ್ ಇಷ್ಟು ವರ್ಷ ದೇಶದ ಜನರಿಗೆ ಕಿರುಕುಳ ನೀಡಿದೆ. ಭ್ರಷ್ಟಾಚಾರದ ಮಾಡಿದ್ದು ಕಾಂಗ್ರೆಸ್. ಮೋದಿ ಅವಧಿಯಲ್ಲಿ ಒಂದೇ ಒಂದು ಭ್ರಷ್ಟಾಚಾರ ಇಲ್ಲ. ತಪ್ಪು ಮಾಡಿಲ್ಲ ಅಂದ್ರೆ ಭಯ ಯಾಕೆ. ಈ ಹಿಂದೆ ತಪ್ಪು ಮಾಡಿದವರು ಈಗ ತನಿಖೆ ಎದುರಿಸೋಕೆ ಸಹಜವಾಗಿ ಭಯ ಪಡ್ತಾರೆ. ತಪ್ಪು ಮಾಡಿಲ್ಲ ಅಂದ್ರೆ ಭಯ ಪಡೋದು ಯಾಕೆ.
ತನಿಖೆ ಎದುರಿಸಲಿ ಎಂದು ಹೇಳಿದರು.
ದೇಶದಲ್ಲಿ ಜಾತಿ-ಜಾತಿ ನಡುವೆ ವಿಷ ಬೀಜ ಬಿತ್ತಿದೆ. ಭಾರತವನ್ನು ಒಡೆಯುವ ಕೆಲಸ ಸ್ವಾತಂತ್ರ್ಯ ಪೂರ್ವದಲ್ಲೂ ಮಾಡಿದೆ. ಅಸ್ಸೋಂ ವಿಚಾರದಲ್ಲಿ ದೇಶ ಒಡೆದಿದ್ದು ಕಾಂಗ್ರೆಸ್, ಈಗ ಯಾಕೆ ಭಾರತ್ ಜೋಡೊ ಕಾರ್ಯಕ್ರಮ ಮಾಡ್ತಾರೊ ಗೊತ್ತಿಲ್ಲ ಎಂದರು.
ಇದನ್ನೂ ಓದಿ: 1,700 ದಾಳಿ, ಶೇ 0.5 ರಲ್ಲಿ ಮಾತ್ರ ಶಿಕ್ಷೆ: ED ವಿರುದ್ಧ ಕಾಂಗ್ರೆಸ್ ವಾಗ್ದಾಳಿ