ಬೆಂಗಳೂರು: ನಾನು ಸುಮ್ಮನೆ ಕೂತಿರುವವನಲ್ಲ, ನಿದ್ದೆ ಮಾಡಲ್ಲ ಬೇರೆಯವರಿಗೂ ನಿದ್ದೆ ಮಾಡಲು ಬಿಡಲ್ಲ, ರಾಜ್ಯಾಧ್ಯಕ್ಷ ಸ್ಥಾನ ಕೇಳಿದ್ದೇನೆ, ನನಗಿಂತ ಬುದ್ಧಿವಂತರು ಸಿಕ್ಕರೆ ಅವರನ್ನೇ ರಾಜ್ಯಾಧ್ಯಕ್ಷರನ್ನಾಗಿ ಮಾಡಲಿ, ಅವಕಾಶ ಕೊಟ್ಟರೆ ನಿಭಾಯಿಸುತ್ತೇನೆ. ಇಲ್ಲವೇ ಪಕ್ಷ ಹೇಳುವ ಕೆಲಸ ಮಾಡಿಕೊಂಡಿರುತ್ತೇನೆ ಎಂದು ಮಾಜಿ ಸಚಿವ ವಿ.ಸೋಮಣ್ಣ ಹೇಳಿದರು.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಫೋರ್, ಸಿಕ್ಸ್ ಹೊಡೆಯೋಕ್ಕೆ ಹೋಗಿ ಬೌಲ್ಡ್ ಆಗಿದ್ದೇನೆ. ಆದರೆ ನಾನು ಸನ್ಯಾಸಿ ಅಲ್ಲ, ನಾನು ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಅಂತ ಈಗಾಗಲೇ ಸ್ಪಷ್ಟವಾಗಿ ಹೇಳಿದ್ದೇನೆ. ಆದರೂ ಈ ವಿಚಾರದಲ್ಲಿ ಪಕ್ಷ ಏನು ತೀರ್ಮಾನ ಮಾಡುತ್ತದೆಯೋ ಎಂದು ಕಾದು ನೋಡಬೇಕು. ನಾನು ಪಕ್ಷ ಏನು ಹೇಳಿದೆಯೋ ಅದನ್ನು ಮಾಡಿಕೊಂಡು ಬಂದಿದ್ದೇನೆ. ಎಂತಹ ಸಂದರ್ಭದಲ್ಲಿಯೂ ವಿಚಲಿತ ಅಗಿಲ್ಲ. ಈಗ ಪಕ್ಷ ನನಗೆ ಜವಾಬ್ದಾರಿ ಕೊಟ್ಟರೆ ನಿಭಾಯಿಸುತ್ತೇನೆ ಕೊಡೆದೇ ಇದ್ದರೂ ನನಗೆ ಯಾವುದೇ ಬೇಸರ ಇಲ್ಲ. ಪಕ್ಷದ ಕೆಲಸ ಮಾಡಿಕೊಂಡಿರುತ್ತೇನೆ ಎಂದರು.
ಕಳೆದ 45 ವರ್ಷಗಳಿಂದ ರಾಜಕೀಯ ಮಾಡಿಕೊಂಡು ಬಂದಿದ್ದೇನೆ, ನನಗೆ ಸುಮ್ಮನೆ ಕುಳಿತು ಅಭ್ಯಾಸವಿಲ್ಲ. ಸದಾ ಚಟುವಟಿಕೆಯಿಂದ ಇರುವವ. ನಾನು ಏನು ಕಳೆದುಕೊಂಡಿದ್ದೇನೋ ಅದನ್ನು ಪಡೆದುಕೊಳ್ಳುತ್ತೇನೆ. ಉಪ್ಪು ಖಾರ ಏನು ಹಾಕಬೇಕೋ ಹಾಕಿಕೊಳ್ಳಿ ಎಂದು ಸೋಮಣ್ಣ ಮಾರ್ಮಿಕವಾಗಿ ನುಡಿದರು.
ರಾಜ್ಯಾಧ್ಯಕ್ಷ ಸ್ಥಾನ ಸಿಗದೇ ಇದ್ದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸೋಮಣ್ಣ ಜವಾಬ್ದಾರಿ ಏನು ಎನ್ನುವ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸೋಮಣ್ಣ, ಸ್ಥಾನಮಾನ ಕೊಡುವುದು ಬಿಡುವುದು ಹೈಕಮಾಂಡ್ ನಾಯಕರಿಗೆ ಬಿಟ್ಟದ್ದಾಗಿದೆ. ನನಗೆ ಯಾವ ಮುಜುಗರವೂ ಇಲ್ಲ. ನನಗಿಂತ ಬುದ್ಧಿವಂತರು ಇದ್ದರೆ ಕೊಡಲಿ. ಹಿಂದೆ ಮುಂದೆ ಮಾತನಾಡುವವರ ನೀತಿ ಪಾಠ ಗೊತ್ತು. ನಾನು ಕೇವಲ ಪಕ್ಷ ಕೊಡುವ ಜವಾಬ್ದಾರಿ ನಿರ್ವಹಿಸುತ್ತೇನೆ ಎಂದರು.
ಕಟೀಲ್ ರಾಜೀನಾಮೆ ಹೇಳಿಕೆ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಸೋಮಣ್ಣ, ಹಾಲಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಸಂಭಾವಿತ, ಸಂಸ್ಕಾರ ಇರುವ ವ್ಯಕ್ತಿ. ಇಡೀ ರಾಜ್ಯವನ್ನು ಗ್ರಾಮ ಮಟ್ಟದಿಂದ ರಾಜ್ಯ ಮಟ್ಟದವರೆಗೂ ಪ್ರವಾಸ ಮಾಡಿದ್ದಾರೆ. ಅವರ ಶ್ರಮ ದುಡಿಮೆ, ದೂರದೃಷ್ಟಿ ಚಿಂತನೆಗಳಿಂದ ಪಕ್ಷ ಇಲ್ಲಿವರೆಗೆ ಬೆಳೆದಿದೆ ಎಂದು ಕಟೀಲ್ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
2019ರ ಚಿಂಚೋಳ್ಳಿ ಮತ್ತು ಕುಂದಗೋಳ ಉಪಚುನಾವಣೆ ವಿಚಾರ ಪ್ರಸ್ತಾಪಿಸಿ, ಪಕ್ಷದ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪಗೆ ಸೋಮಣ್ಣ ಟಾಂಗ್ ನೀಡಿದರು. ಚಿಂಚೋಳಿ ಚುನಾವಣೆಯಲ್ಲಿ ಸೋಮಣ್ಣ, ರವಿಕುಮಾರ್ ಚುನಾವಣಾ ಉಸ್ತುವಾರಿಯಾಗಿದ್ದರೆ ಕುಂದಗೋಳಕ್ಕೆ ಯಡಿಯೂರಪ್ಪ, ಪ್ರಹ್ಲಾದ್ ಜೋಶಿ, ಡಿ.ವಿ. ಸದಾನಂದಗೌಡರು ಉಸ್ತುವಾರಿಗಳು ಆಗ ಬಿಜೆಪಿ ಚಿಂಚೋಳಿ ಗೆದ್ದು, ಕುಂದಗೋಳದಲ್ಲಿ ಸೋಲು ಅನುಭವಿಸಿತು ಎಂದು ಯಡಿಯೂರಪ್ಪ ವಿರುದ್ಧ ತಮಗಿರುವ ಅಸಮಧಾನವನ್ನು ವ್ಯಕ್ತಪಡಿಸಿದರು.