ಬೆಂಗಳೂರು: ಬಿಜೆಪಿ, ಜೆಡಿಎಸ್ ಸೇರಿ ಅನ್ಯ ಪಕ್ಷಗಳ ವಿವಿಧ ನಾಯಕರು ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಇಂದು ದಿನವಿಡೀ ನಡೆದ ಸಭೆಯ ಕೊನೆಯಲ್ಲಿ ಸೇರ್ಪಡೆ ಕಾರ್ಯಕ್ರಮ ಸಹ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್, ಆರ್.ವಿ. ದೇಶಪಾಂಡೆ, ಭೀಮಣ್ಣ ನಾಯ್ಕ್ ಮತ್ತಿತರರು ಉಪಸ್ಥಿತರಿದ್ದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮುಖಂಡರನ್ನು ಪಕ್ಷದ ಬಾವುಟ ನೀಡಿ ಬರಮಾಡಿಕೊಂಡರು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ಪ್ರತಿ ಪಕ್ಷ ನಾಯಕ ಎಸ್.ಆರ್. ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.
ಡಿ.ಕೆ. ಶಿವಕುಮಾರ್ ಮಾತನಾಡಿ, 3-4 ತಿಂಗಳ ಹಿಂದೆಯೇ ಈ ಸೇರ್ಪಡೆ ಸಮಾರಂಭ ಆಗಬೇಕಿತ್ತು. ಕೊರೊನಾ ಹಾಗೂ ಇತರೆ ಕಾರಣದಿಂದ ಮುಂದೂಡಿಕೆಯಾಗಿ ಇಂದು ಸಮಾರಂಭ ಆಯೋಜಿಸಿದ್ದೇವೆ. ಪಕ್ಷ ಸಂಘಟನೆ ಸಂದರ್ಭದಲ್ಲಿ ಇದೇ ಮಾದರಿಯ ಹಲವು ವಿಚಾರವನ್ನು ಚರ್ಚಿಸಿದ್ದೇವೆ. ಇಂದೇ ಸೇರ್ಪಡೆ ಕಾರ್ಯಕ್ರಮವೂ ಆಗಿ ಹೋಗಲಿ ಅಂತ ಕರೆಸಿದ್ದೇವೆ ಎಂದರು.
ಮಾಜಿ ಸಚಿವ ಆರ್.ವಿ. ದೇಶಪಾಡೆ ಮಾತನಾಡಿ, ಇಂದು ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡೆಗೆ ಮುಖಂಡರು ಆಗಮಿಸಬೇಕಿತ್ತು. ಕೆಲ ನಾಯಕರಿಗೆ ಆಗಮಿಸಲು ಸಾಧ್ಯವಾಗಿಲ್ಲ. ಪಕ್ಷ ಬಲಪಡಿಸಲು ಈ ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ. ಜನರ ಬದುಕನ್ನು ಈ ಬಿಜೆಪಿ ಸರ್ಕಾರ ಸಂಕಷ್ಟಕ್ಕೆ ದೂಡಿದೆ. ಬಡವರು ಬದುಕುವುದು ಕಷ್ಟಕರವಾಗಿದೆ. ಇಂತಹ ಸಂದರ್ಭದಲ್ಲಿ ನಮ್ಮ ಪಕ್ಷದ ಸಿದ್ಧಾಂತ ಒಪ್ಪಿ ಹಲವು ನಾಯಕರು ಸೇರ್ಪಡೆಯಾಗುತ್ತಿರುವುದು ಸಂತಸದ ಸಂಗತಿ ಎಂದರು.
ಉತ್ತರ ಕನ್ನಡ ಜಿಲ್ಲೆಯ ಕಾಂಗ್ರೆಸ್ ನಾಯಕ ಭೀಮಣ್ಣ ನಾಯಕ್ ಮಾತನಾಡಿ, ಜಿಲ್ಲೆಯ ಜೆಡಿಎಸ್ ಹಾಗೂ ಬಿಜೆಪಿಯ ಹಲವು ನಾಯಕರು ಇಂದು ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಇವರು ಪಕ್ಷ ಬಲವರ್ಧನೆಗೆ ನಮ್ಮ ಕೈ ಬಲಪಡಿಸಲಿದ್ದಾರೆ ಎಂದು ವಿವರಿಸಿದರು.
ಇದಕ್ಕೂ ಮುನ್ನ ಉತ್ತರ ಕನ್ನಡ ಜಿಲ್ಲೆ ಕಾಂಗ್ರೆಸ್ ಮುಖಂಡರ ಜತೆ ರಾಜಕೀಯ ವಿದ್ಯಮಾನ, ಪಕ್ಷ ಸಂಘಟನೆ ಬಲವರ್ಧನೆ, ಮುಂಬರುವ ಚುನಾವಣೆಗಳ ಸಂಬಂಧ ಬೆಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸಮಾಲೋಚನೆ ನಡೆಸಿದರು. ಹುಬ್ಬಳ್ಳಿ-ಧಾರವಾಡ, ಹಾವೇರಿ, ಗದಗ ಜಿಲ್ಲೆ ಕಾಂಗ್ರೆಸ್ ಮುಖಂಡರ ಜತೆ, ವಿಜಯಪುರ ಹಾಗೂ ಬಾಗಲಕೋಟೆ ಕಾಂಗ್ರೆಸ್ ಮುಖಂಡರ ಜತೆ, ಬೆಳಗಾವಿ ನಗರ, ಗ್ರಾಮಾಂತರ ಮತ್ತು ಚಿಕ್ಕೋಡಿ ಕಾಂಗ್ರೆಸ್ ಮುಖಂಡರ ಜತೆ ರಾಜ್ಯ ನಾಯಕರು ಸುದೀರ್ಘ ಚರ್ಚೆ ನಡೆಸಿದರು.
ಬಳ್ಳಾರಿಯಲ್ಲಿ ಕಾಂಗ್ರೆಸ್ ಕಚೇರಿ ನಿರ್ಮಾಣಕ್ಕೆ ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆಯ ಆಕಾಂಕ್ಷಿಗಳು ಕೊಡಮಾಡಿರುವ 8.02 ಲಕ್ಷ ರೂ. ದೇಣಿಗೆಯ ಚೆಕ್ ಗಳನ್ನು ಜಿಲ್ಲಾಧ್ಯಕ್ಷ ಜಿ.ಎಸ್. ಮೊಹಮ್ಮದ್ ರಫಿ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಬೆಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಹಸ್ತಾಂತರಿಸಿದರು.