ಬೆಂಗಳೂರು : ನಾಯಕರೂ ಅಲ್ಲ, ಸೇವಕರೂ ಅಲ್ಲ, ನಿಮ್ಮಿಂದ ಸಂಬಳ ಪಡೆದು ಕೆಲಸ ಮಾಡುವ ಕಾರ್ಮಿಕರು ನಾವು. ಉತ್ತಮ ರೀತಿ ಕೆಲಸ ಮಾಡುವವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದೇವೆ. ನಮ್ಮ ಬಳಿ ಹಣದ ಬಲವಿಲ್ಲ. ಕೇವಲ ಜನ ಬಲದಿಂದ ಮುಂದೆ ಸಾಗಿದ್ದೇನೆ ಇದು ನಟ, ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ ಅವರ ಮಾತು.
ಈಟಿವಿ ಭಾರತ್ ಜೊತೆ ತಮ್ಮ ಅನಿಸಿಕೆ ಹಂಚಿಕೊಂಡಿರುವ ನಟ ಉಪೇಂದ್ರ , ಹಣ ಬಲ, ಜನ ಬಲ, ಪಾರ್ಟಿ ಬಲ ಇಲ್ಲದೆ ಎಲೆಕ್ಷನ್ಗೆ ನಿಲ್ಲುವುದಕ್ಕೆ ಆಗುವುದಿಲ್ಲ. ಇಂತಹ ಸಂದರ್ಭದಲ್ಲಿ ಇವರೆಲ್ಲ ಮುಂದೆ ಬಂದಿದ್ದಾರೆ. ಟೈಲರಿಂಗ್, ವ್ಯಾಪರ ಸೇರಿ ಮತ್ತಿತರ ಸಣ್ಣ ಸಣ್ಣ ಕೆಲಸಗಳನ್ನು ಮಾಡುತ್ತಿರುವವರನ್ನು ಮತ್ತು ಅವರ ರಿಪೋರ್ಟ್ ಕಾರ್ಡ್ ನೋಡಿ ಆಯ್ಕೆ ಮಾಡಿದ್ದೇವೆ. ಇವರೆಲ್ಲ ಜನರ ಅಭಿಪ್ರಾಯ ಸಂಗ್ರಹಿಸಿ ಇಲ್ಲಿಗೆ ಬಂದಿದ್ದಾರೆ ಎಂದು ಹೇಳಿದ್ರು.
ನನ್ನ ಪಕ್ಷದ ಸಿದ್ಧಾಂತಗಳನ್ನ ಕಂಡು ಬೇರೆ ಪಕ್ಷದವರು ನನಗೆ ವೈಯಕ್ತಿಕವಾಗಿ ಮೆಚ್ಚುಗೆ ತಿಳಿಸಿದ್ದಾರೆ. ಇಂಥ ಸಿದ್ಧಾಂತ ನಮಗೂ ಬೇಕೆಂದಿದ್ದಾರೆ ಅಂದ್ರು. ಲೋಕಸಭಾ ಚುನಾವಣಾ ಕಣಕ್ಕೆ ಇಳಿಯವ ಬಗ್ಗೆ ಹೇಳಿದ ಉಪೇಂದ್ರ, ಈ ಚುನಾವಣೆಗೆ ಅಭ್ಯರ್ಥಿಗಳನ್ನು ತಯಾರು ಮಾಡುವ ಕೆಲಸಗಳಿದ್ದವು. ಹಾಗಾಗಿ, ನಾನು ಸ್ಪರ್ಧೆ ಮಾಡುತ್ತಿಲ್ಲ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಬಗ್ಗೆ ಯೋಚಿಸುತ್ತೇನೆ ಎಂದರು. ಚುನಾವಣೆಯಲ್ಲಿ ನಾವು ಗೆಲ್ಲುವುದು ಮುಖ್ಯವಲ್ಲ. ಜನರ ಬಳಿ ಹೋಗಿ ಗುರುತಿಸಿಕೊಳ್ಳುವುದು ಮುಖ್ಯವಾಗಿದೆ. ಜನರ ಸಮಸ್ಯೆಗಳಿಗೆ ಪರಿಹಾರ ಹುಡುಕುವುದು ನಮ್ಮ ಪಕ್ಷದ ಉದ್ದೇಶ. ಆ ನಿಟ್ಟಿನಲ್ಲಿ ನಾವು ಜನರ ಬಳಿ ಹೋಗುತ್ತೇವೆ ಎಂದು ಹೇಳಿದ್ದಾರೆ.