ಬೆಂಗಳೂರು: ಡಿ.ಜೆ ಹಳ್ಳಿ ಮತ್ತು ಕೆ.ಜಿ ಹಳ್ಳಿ ಗಲಭೆ ಪ್ರಕರಣದ ಇಬ್ಬರು ಆರೋಪಿಗಳು ಆನ್‌ಲೈನ್ ಲಿಂಕ್ ಬಳಸಿ ಮೊಬೈಲ್ ಮೂಲಕ ಜೈಲಿನಿಂದಲೇ ಹೈಕೋರ್ಟ್ ಕಲಾಪ ವೀಕ್ಷಿಸಿರುವ ಪ್ರಕರಣವನ್ನು ತನಿಖೆ ಮಾಡಲು ತಂಡ ರಚಿಸುವುದಾಗಿ ತಿಳಿಸಿದೆ.
ಗಲಭೆ ಪ್ರಕರಣದಲ್ಲಿ ಜಾಮೀನು ಕೋರಿ ಆರೋಪಿಗಳಾದ ಶೇಕ್ ಮೊಹಮ್ಮದ್ ಬಿಲಾಲ್ ಹಾಗೂ ಮೊಹಮ್ಮದ್ ಶರೀಫ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೂತು ಹೈಕೋರ್ಟ್ ನ ವಿಡಿಯೋ ಕಾನ್ಫರೆನ್ಸ್ ಲಿಂಕ್ ಬಳಸಿ ಮೊಬೈಲ್ ಮೂಲಕ ಜುಲೈ 27 ರಂದು ನಡೆದ ಅರ್ಜಿ ವಿಚಾರಣೆಯನ್ನು ವೀಕ್ಷಿಸಿದ್ದರು.
ಈ ವಿಚಾರವನ್ನು ಎನ್‌ಐಎ ಪರ ವಕೀಲರಾದ ಪಿ. ಪ್ರಸನ್ನ ಕುಮಾರ್ ಅವರು ಹೈಕೋರ್ಟ್ ಗಮನಕ್ಕೆ ತಂದಿದ್ದರು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದ ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರಿದ್ದ ವಿಭಾಗೀಯ ಪೀಠ, ಘಟನೆ ಬಗ್ಗೆ ವಿವರಣೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು.ಅದರಂತೆ ಇಂದು ನಡೆದ ಅರ್ಜಿ ವಿಚಾರಣೆ ವೇಳೆ ಹೆಚ್ಚುವರಿ ಅಡ್ವೋಕೇಟ್ ಜನರಲ್ ಆರ್. ಸುಬ್ರಮಣಿ ಹಾಜರಾಗಿ, ಪ್ರಕರಣದ ಕುರಿತು ತನಿಖೆ ನಡೆಸಲು ಬೆಂಗಳೂರು ದಕ್ಷಿಣ ವಲಯದ ಡಿಜಿಐ ಟಿ.ಪಿ. ಶೇಷ ಅವರನ್ನು ನಿಯೋಜಿಸಲಾಗುವುದು ಎಂದು ತಿಳಿಸಿದರು.
ಇದಕ್ಕೆ ಒಪ್ಪದ ಪೀಠ, ಈ ರೀತಿ ತನಿಖೆ ನಡೆಸುವುದು ಬೇಡ. ಓರ್ವ ಪೊಲೀಸ್ ಅಧಿಕಾರಿ ಮತ್ತೋರ್ವ ಪೊಲೀಸ್ ಅಧಿಕಾರಿಯನ್ನು ರಕ್ಷಣೆ ಮಾಡುತ್ತಾರೆಂಬುದು ನಮಗೂ ಗೊತ್ತಿದೆ. ಆದ್ದರಿಂದ ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ನೇತೃದಲ್ಲಿ ನಿವೃತ್ತ ಐಎಎಸ್-ಐಪಿಎಸ್ ಅಧಿಕಾರಿಗಳನ್ನು ಒಳಗೊಂಡ ಪ್ರತ್ಯೇಕ ತಂಡ ರಚಿಸುತ್ತೇವೆ ಎಂದು ತಿಳಿಸಿತು.ಅಲ್ಲದೆ, ನಿವೃತ್ತ ಐಪಿಎಸ್ ಅಧಿಕಾರಿಗಳಿಗೆ ಎಲ್ಲಾ ವಿಚಾರಗಳು ತಿಳಿರುತ್ತದೆ. ಯಾವ ವಸ್ತು ಹೇಗೆ ಜೈಲಿನ ಒಳಗೆ ಬರುತ್ತದೆ, ಯಾರನ್ನು ಹೇಗೆ ಹಿಡಿಯಬೇಕು ಎಂಬುದೂ ಅವರಿಗೆ ಗೊತ್ತಿರುತ್ತದೆ. ಆರೋಪಿಗಳು ಜೈಲಿನಲ್ಲಿ ಕೂತು ವಿಡಿಯೋ ಕಾನ್ಫರೆನ್ಸ್ ನೋಡುವುದು ಆಕಸ್ಮಿಕವಾಗಿ ತಿಳಿದಿದೆ. ಗಮನಿಸದೇ ಹೋಗಿದ್ದರೆ ಯಾರಿಗೂ ತಿಳಿಯುತ್ತಿರಲಿಲ್ಲ. ಹೀಗಾಗಿ ತನಿಖೆ ನಡೆಸಲು ನಾವೇ ತಂಡ ರಚಿಸುತ್ತೇವೆ. ಈ ಕಾರ್ಯಕ್ಕೆ ನಿಯೋಜಿಸಬಹುದಾದ ಅಧಿಕಾರಿಗಳ ಹೆಸರು ತಿಳಿಸಿ ಎಂದು ಎಎಜಿಗೆ ಸೂಚಿಸಿತು.
ವಿಚಾರಣೆ ವೇಳೆ ಎನ್‌ಐಎ ಪರ ವಕೀಲರು, ಕೇಂದ್ರ ಗೃಹ ಸಚಿವಾಲಯ ದೇಶದ ಎಲ್ಲ ರಾಜ್ಯಗಳ ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದು, ಕರ್ನಾಟಕವೂ ಸೇರಿದಂತೆ ದೇಶದ ವಿವಿಧ ರಾಜ್ಯಗಳ ಕಾರಾಗೃಹಗಳು ಭಯೋತ್ಪಾದಕ ಕೃತ್ಯಗಳ ಸಂಘಟನೆಗೆ, ಹಣ ಸಂಗ್ರಹಕ್ಕೆ ಮತ್ತು ಹೊಸ ಸದ್ಯಸರ ಆಯ್ಕೆಗೆ ಹಾಗೂ ಕಾರ್ಯಾಚರಣೆ ಯೋಜನೆ ರೂಪಿಸುವ ಸ್ಥಳಗಳಾಗುತ್ತಿವೆ. ಜೈಲು ಅಧಿಕಾರಿಗಳ ನೆರವಿನಿಂದಲೇ ಕೈದಿಗಳು ಮೊಬೈಲ್ ಪಡೆದು ಅಕ್ರಮಗಳ ಕುರಿತು ಯೋಜಿಸುತ್ತಿದ್ದಾರೆ. ಜೈಲುಗಳಲ್ಲಿ ಮೊಬೈಲ್ ಬಳಕೆ ಕಟ್ಟುನಿಟ್ಟಾಗಿ ನಿಷೇಧಿಸಬೇಕು. ಭದ್ರತೆ ಹೆಚ್ಚಿಸಿ ಮೊಬೈಲ್ ಗಳು ಜೈಲು ಪ್ರವೇಶಿಸುವುದನ್ನು ತಡೆಯಲು ಕ್ರಮ ಕೈಗೊಳ್ಳಿ ಎಂದು ಪತ್ರದಲ್ಲಿ ನಿರ್ದೇಶಿಸಲಾಗಿತ್ತು ಎಂದು ವಿವರಿಸಿದರು.
ಹೇಳಿಕೆ ಪರಿಗಣಿಸಿದ ಪೀಠ, ಪ್ರಕರಣದ ತನಿಖೆ ನಡೆಸಲು ನ್ಯಾಯಾಲಯ ನಿರ್ಧರಿಸಿದೆ. ಆದ್ದರಿಂದ, ಸರ್ಕಾರ ತನಿಖಾ ತಂಡಕ್ಕೆ ನಿಯೋಜಿಸಬಹುದಾದ ನಿವೃತ್ತ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ಹೆಸರು ಸೂಚಿಸಬೇಕು. ಇನ್ನು ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿಗಳನ್ನು ನೇಮಿಸುವ ಕುರಿತು ನ್ಯಾಯಾಲಯವೇ ಯೋಚಿಸಲಿದೆ ಎಂದು ತಿಳಿಸಿ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿತು.