ಬೆಂಗಳೂರು: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ (ಎಸ್ಸಿ, ಎಸ್ಟಿ)ದ ಅಭ್ಯರ್ಥಿಗಳಿಗೆ 2022-23 ಸಾಲಿನಲ್ಲಿ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ನಡೆಸುವ ಪರೀಕ್ಷೆಗೆ ಪೂರ್ವಭಾವಿ ತರಬೇತಿ ನೀಡಲು 27 ಸಂಸ್ಥೆಗಳನ್ನು ಸಮಾಜ ಕಲ್ಯಾಣ ಇಲಾಖೆ ಆಯ್ಕೆ ಮಾಡಿದೆ. ಬೆಂಗಳೂರು, ಹೈದರಾಬಾದ್ ಮತ್ತು ದೆಹಲಿಯಲ್ಲಿರುವ ಪ್ರತಿಷ್ಠಿತ ತರಬೇತಿ ಸಂಸ್ಥೆಗಳ ಮೂಲಕ ಪರೀಕ್ಷೆಗೆ ಎಸ್ಸಿ, ಎಸ್ಟಿ ಅಭ್ಯರ್ಥಿಗಳು ಉಚಿತವಾಗಿ ತರಬೇತಿ ಪಡೆಯಬಹುದು. ಈ ತರಬೇತಿಗೆ ಆಯ್ಕೆಯಾಗಲು ಸಮಾಜ ಕಲ್ಯಾಣ ಇಲಾಖೆಯ ಪರೀಕ್ಷೆಯಲ್ಲಿ ಮೆರಿಟ್ ಮೇಲೆ ತೇರ್ಗಡೆಯಾಗಬೇಕು.
ಈ ಸಂಸ್ಥೆಗಳಲ್ಲಿ ತರಬೇತಿ: ಡಾ.ರಾಜ್‌ಕುಮಾರ್ ಅಕಾಡೆಮಿ ಫಾರ್ ಸಿವಿಲ್ ಸರ್ವಿಸಸ್, ಸಾಧನಾ ಕೋಚಿಂಗ್ ಸೆಂಟರ್, ಸ್ಪರ್ಧಾ ಚೈತ್ರ, ಸ್ಪರ್ಧಾ ಮಿತ್ರ, ಐಎಎಸ್ ಬಾಬಾ, ಶಾಹೀನ್ ಶಿಕ್ಷಣ ಟ್ರಸ್ಟ್, ಜೆಎಸ್ಎಸ್ ಮಹಾವಿದ್ಯಾಪೀಠ, ಅಮೋಘವರ್ಷ ಬುಕ್ ಪಬ್ಲಿಕೇಷನ್ ಅಂಡ್ ಎಜುಕೇಷನ್, ಯನಿವರ್ಸಲ್ ಕೋಚಿಂಗ್ ಸೆಂಟರ್, ಪಂಚಶೀಲ ವೆಲ್ಫೇರ್ ಅಸೋಸಿಯೇಷನ್, ಮೇರು ಐಎಎಸ್, ಸಹಾರ, ಕನ್ಸಾರ್ಟಿಯಂ ಮೈನಾರಿಟಿ ಅಸೋಸಿಯೇಷನ್, ದೆಹಲಿಯ ಗೈಡೆನ್ಸ್ ಐಎಎಸ್ ಸಂಸ್ಥೆ, ಹೈದರಾಬಾದ್ನ ಆರ್.ಸಿ.ರೆಡ್ಡಿ ಐಎಎಸ್ ಸ್ಟಡಿ ಸರ್ಕಲ್, ಶಂಕರ್ ಐಎಎಸ್ ಅಕಾಡೆಮಿ ಸೇರಿದಂತೆ ಒಟ್ಟು 27 ಸಂಸ್ಥೆಗಳನ್ನು ಆಯ್ಕೆ ಮಾಡಲಾಗಿದೆ.
ಏನಿದು ಯೋಜನೆ?: ಯುಪಿಎಸ್ಸಿ ಹುದ್ದೆಗಳಿಗೆ ಪರೀಕ್ಷೆ ತೆಗೆದುಕೊಳ್ಳುವ ಪ.ಜಾತಿ ಮತ್ತು ಪ.ಪಂಗಡದ ಅಭ್ಯರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಉಚಿತವಾಗಿ ಪ್ರತಿಷ್ಠಿತ ತರಬೇತಿ ಸಂಸ್ಥೆಗಳಲ್ಲಿ ತರಬೇತಿ ಸಿಗಲಿದೆ. ಈ ತರಬೇತಿಗೆ ಸಾಮಾನ್ಯ ಪ್ರವೇಶ ಪರೀಕ್ಷೆಯ ಮೂಲಕ ಮೆರಿಟ್ ಆಧಾರದ ಮೇಲೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಉಚಿತವಾಗಿ 7 ರಿಂದ 9 ತಿಂಗಳ ಅವಧಿಯ ತರಬೇತಿ ನೀಡಲಾಗುತ್ತದೆ.
ತರಬೇತಿಗೆ ಇವರು ಅರ್ಹರು..: ಯುಪಿಎಸ್ಸಿ ಹುದ್ದೆಗಳಿಗೆ ನಡೆಯುವ ಪರೀಕ್ಷೆಗಳಿಗೆ ಪರೀಕ್ಷಾ ಪೂರ್ವಭಾವಿ ತರಬೇತಿ ಪಡೆಯುವ ಅಭ್ಯರ್ಥಿಗಳು 21 ರಿಂದ 35 ವರ್ಷ ವಯೋಮಿತಿಯಲ್ಲಿರಬೇಕು. ಅಭ್ಯರ್ಥಿಗಳು ಪದವಿಯಲ್ಲಿ ಉತ್ತೀರ್ಣರಾಗಿರಬೇಕು. ಅಭ್ಯರ್ಥಿಗಳು ಕರ್ನಾಟಕ ರಾಜ್ಯದವರಾಗಿರಬೇಕು. ಪರೀಕ್ಷೆಗಳಿಗೆ ವಿಧಿಸುವ ಎಲ್ಲಾ ನಿಬಂಧನೆಗಳನ್ನು ಪೂರೈಸಬೇಕು. ಅಭ್ಯರ್ಥಿಯ/ಪೋಷಕರ ವಾರ್ಷಿಕ ಆದಾಯ ಎಲ್ಲಾ ಮೂಲಗಳಿಂದ 5 ಲಕ್ಷ ರೂ ಮೀರಿರಬಾರದು. ಸಾಮಾನ್ಯ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಮೆರಿಟ್ ಆಧಾರದ ಮೇಲೆ ಹಾಗೂ ವಿವಿಧ ಸಂಸ್ಥೆಗಳಲ್ಲಿ ಲಭ್ಯವಿರುವ ಸೀಟುಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ಸಮಾಜ ಕಲ್ಯಾಣ ಇಲಾಖೆ ಆಯ್ಕೆ ಮಾಡಲಿದೆ.
ಮಾಸಿಕ ಶಿಷ್ಯವೇತನ: ಈ ತರಬೇತಿಗೆ ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ಸರ್ಕಾರದಿಂದ ಶಿಷ್ಯವೇತನ ಸಿಗಲಿದೆ. ದೆಹಲಿಗೆ ತೆರಳುವವರಿಗೆ 10,000 ರೂ., ಹೈದರಾಬಾದ್ 8,000 ರೂ, ಬೆಂಗಳೂರಲ್ಲಿ 6,000 ಹಾಗೂ ರಾಜ್ಯದ ಇತರೆ ನಗರಗಳಲ್ಲಿ ತರಬೇತಿ ಪಡೆಯುವವರಿಗೆ 5,000 ರೂ. ಮಾಸಿಕ ಶಿಷ್ಯವೇತನ ನೀಡಲಾಗುತ್ತದೆ. ಸರ್ಕಾರದ ಆದೇಶದ ಪ್ರಕಾರ ಶಿಷ್ಯವೇತನವನ್ನು ಪ್ರತಿ ಮೂರು ತಿಂಗಳಿಗೆ ಒಂದು ಬಾರಿ ತರಬೇತಿ ಸಂಸ್ಥೆಯವರು ಸಲ್ಲಿಸುವ ಹಾಜರಾತಿಯನ್ವಯ ಪಾವತಿಸಲಾಗುತ್ತದೆ.
ಇದನ್ನೂ ಓದಿ: 1,472 ಐಎಎಸ್, 864 ಐಪಿಎಸ್, 1,057 ಐಎಫ್ಎಸ್ ಹುದ್ದೆಗಳು ಖಾಲಿ: ಲೋಕಸಭೆಗೆ ಕೇಂದ್ರದ ಮಾಹಿತಿ