ಬೆಂಗಳೂರು : ಕೃಷ್ಣಾ ಮೇಲ್ದಂಡೆ ಯೋಜನೆ ಜಾರಿ ಆದಷ್ಟು ಶೀಘ್ರವಾಗಿ ಆಗಲಿದೆ ಎಂದು ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.
ವಿಧಾನ ಪರಿಷತ್‌ನಲ್ಲಿ ನಿಯಮ 68ರ ಅಡಿ ಪ್ರತಿಪಕ್ಷ ನಾಯಕ ಎಸ್ ಆರ್ ಪಾಟೀಲ್ ಮತ್ತಿತರ ಸದಸ್ಯರು ನಡೆಸಿದ ಚರ್ಚೆಗೆ ಉತ್ತರಿಸಿದ ಅವರು, ಮುಖ್ಯಮಂತ್ರಿಗಳ ಜೊತೆ ಸಮಾಲೋಚಿಸಿದ್ದೇನೆ. ಕೇಂದ್ರ ಸಚಿವರನ್ನು ಭೇಟಿ ಮಾಡಿ ಚರ್ಚಿಸಿದ್ದೇನೆ. ಇನ್ನೊಮ್ಮೆ ತೆರಳಿ ಚರ್ಚಿಸುತ್ತೇನೆ. ಎಷ್ಟೇ ಹಣ ಖರ್ಚಾದ್ರೂ ಪರವಾಗಿಲ್ಲ ಯೋಜನೆ ಅನುಷ್ಠಾನಕ್ಕೆ ಬರಲಿದೆ. ಲೋಕಾಯುಕ್ತದಲ್ಲಿ ಪ್ರಕರಣ ನಡೆಯುತ್ತಿದೆ. ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ. ಯಾವುದೇ ಅಡೆತಡೆ ಎದುರಾದ್ರೂ ನಿವಾರಿಸಿಕೊಂಡು ಯೋಜನೆ ಅನುಷ್ಠಾನ ಮಾಡುತ್ತೇವೆ ಎಂದರು.
ಪ್ರತಿಪಕ್ಷ ನಾಯಕ ಎಸ್ ಆರ್ ಪಾಟೀಲ್ ಮಾತನಾಡಿ, ಮಹದಾಯಿ, ಕಾವೇರಿ ಮಾದರಿ ಸುಪ್ರೀಂಕೋರ್ಟ್ ಮೂಲಕ ನೋಟಿಫಿಕೇಷನ್ ಹೊರಡಿಸಿ ಇದಕ್ಕಿರುವ ಅಡೆತಡೆ ನಿವಾರಿಸಿ. ಕಡಿಮೆ ಪ್ರಮಾಣದ ಭೂಸ್ವಾಧೀನ ಪ್ರಕ್ರಿಯೆ ನಡೆಯಬೇಕಿದೆ. ಶೇ.75ರಷ್ಟು ಕಾಮಗಾರಿ ಮುಗಿದಿದೆ. ಶೇ.25ರಷ್ಟು ಬಾಕಿ ಇದೆ. ಯೋಜನೆಯಿಂದ ಏಳು ಜಿಲ್ಲೆಗೆ ಅನುಕೂಲ ಆಗಲಿದೆ. ಉತ್ತರಕರ್ನಾಟಕ ಭಾಗದ ಅಭಿವೃದ್ಧಿ ಆಗಲಿದೆ ಎಂದರು. ಸದಸ್ಯರಾದ ಬಸವರಾಜ್ ಇಟಗಿ, ಪ್ರಕಾಶ್ ರಾಥೋಡ್, ಆರ್ ಬಿ ತಿಮ್ಮಾಪೂರ್, ತಿಪ್ಪೇಸ್ವಾಮಿ ಕೃಷ್ಣಾ ಮೇಲ್ದಂಡೆ ಯೋಜನೆ ಜಾರಿ ಬಗ್ಗೆ ಒತ್ತಾಯ ಮಾಡಿದರು.
ಸಚಿವ ರಮೇಶ್ ಜಾರಕಿಹೊಳಿ ಸದನಕ್ಕೆ ಮತ್ತೊಮ್ಮೆ ಭರವಸೆ ನೀಡಿ ಮಾತನಾಡಿ, ಕಾವೇರಿ, ಮಹದಾಯಿ ವಿಚಾರದಲ್ಲಿ ಯಾವುದೇ ತಡೆಯಾಜ್ಞೆ ಇರಲಿಲ್ಲ. ಆದರೆ, ಇದಕ್ಕಿದೆ. ವ್ಯತ್ಯಾಸ ಸಾಕಷ್ಟಿದೆ. ಆದರೂ ನಮ್ಮ ಪ್ರಯತ್ನ ನಾವು ಮಾಡುತ್ತಿದ್ದೇವೆ. ನಮ್ಮ ಭಾಗದಲ್ಲಿ ಈ ಯೋಜನೆಗೆ ಪಕ್ಷಾತೀತ ನಡೆಯುತ್ತಿದೆ. ಮಾತುಕತೆ ನಡೆಸುತ್ತಿದ್ದೇವೆ. ಸಾಧ್ಯವಾಗುವ ವಿಶ್ವಾಸ ಇದೆ. ಭೂಸ್ವಾಧೀನಕ್ಕೆ ಒಂದು ದರ ನಿಗದಿ ಮಾಡಿ ಸ್ವಾಧೀನ ಪ್ರಕ್ರಿಯೆ ಮಾಡುತ್ತೇವೆ. ಸರ್ವಪಕ್ಷ ಸಭೆ ಕರೆದು ಚರ್ಚಿಸುತ್ತೇವೆ. ಈ ಭಾಗದ ಪ್ರತಿನಿಧಿಗಳ ಸಭೆ ನಡೆಸುತ್ತೇವೆ ಎಂದು ವಿವರಿಸಿದರು.