ಬೆಂಗಳೂರು : ಪೊಲೀಸ್ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಅನೇಕರಿಂದ ಲಕ್ಷಾಂತರ ರೂ. ಹಣ ಪಡೆದು ವಂಚಿಸಿದ್ದ ನಕಲಿ ಸಬ್ ಇನ್ಸ್ಪೆಕ್ಟರ್, ಉಪ್ಪಾರಪೇಟೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಉತ್ತರಕರ್ನಾಟಕ ಮೂಲದ ಅನಿಲ್ ನರಸಿಂಹರಾವ್ ಕುಲಕರ್ಣಿ ಎಂಬಾತ ಬಂಧಿತ ಆರೋಪಿ. ಈತ ಪೊಲೀಸ್ ಹೆಲ್ಮೆಟ್ ಮತ್ತು ಖಾಕಿ ಪ್ಯಾಂಟ್ ಧರಿಸಿಕೊಂಡು ಮೆಜೆಸ್ಟಿಕ್ ಸುತ್ತಮುತ್ತ ತಿರುಗಾಡುತ್ತಾ ತನ್ನನ್ನು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಎಂದು ಸಾರ್ವಜನಿಕರಿಗೆ ಪರಿಚಯಿಸಿಕೊಂಡು ನಮ್ಮ ಇಲಾಖೆಯಲ್ಲಿ ಕೆಲಸ ಖಾಲಿಯಿದೆ. ಭರ್ತಿ ಮಾಡಲು ನನಗೆ ಸೂಚಿಸಿದ್ದಾರೆ. ನೀವು ಸ್ವಲ್ಪ ಹಣ ಕೊಟ್ಟರೆ ನಿಮಗೆ ಕೆಲಸ ಕೊಡುವುದಾಗಿ ನಂಬಿಸುತ್ತಿದ್ದನು.
ಆತನ ಮಾತಿಗೆ ಮರುಳಾಗಿ ಕೆಲವರು ಹಣ ಕೂಡ ನೀಡಿದ್ದು, ಹಣ ಕೊಟ್ಟವರಿಂದ ನಕಲಿ ಓಎಂಆರ್ ಶೀಟ್‌ಗೆ ಸಹಿ ಹಾಕಿಸಿಕೊಂಡು ಕೆಲಸ ಪಕ್ಕಾ ಆಗುತ್ತದೆ ಎಂದು ನಂಬಿ ಬಳಿಕ ಮೊಬೈಲ್ ಸುಚ್ ಆಫ್ ಮಾಡಿಕೊಂಡು ಪರಾರಿಯಾಗುತ್ತಿದ್ದನು.
ಇತ್ತೀಚೆಗೆ ಭಾಸ್ಕರ್ ಮತ್ತು ಭರತ್ ಎಂಬುವರಿಗೆ ಕೆಲಸ ಕೊಡಿಸುವುದಾಗಿ ನಂಬಿಸಿ ಅವರಿಂದ ಸುಮಾರು 1.30 ಲಕ್ಷ ರೂ. ಪಡೆದುಕೊಂಡಿದ್ದಾನೆ. ಈ ಸಂಬಂಧ ವಂಚನೆಗೊಳಗಾದವರು ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಇದನ್ನೂ ಓದಿ: ಓಮಿಕ್ರೋನ್ ಸೋಂಕಿಗೆ ಲಸಿಕೆ ನೀಡುವ ನೆಪದಲ್ಲಿ ಮನೆಗೆ ನುಗ್ಗಿ ಪಿಸ್ತೂಲ್ ತೋರಿಸಿ ದರೋಡೆ