ಬೆಂಗಳೂರು: ಅನರ್ಹ ಶಾಸಕರು ಕಾಂಗ್ರೆಸ್ನಲ್ಲಿ ರಾಜರಂತೆ ಇದ್ದರು,ಈಗ ಬಿಜೆಪಿಯವರ ಮುಂದೆ ಭಿಕ್ಷೆ ಬೇಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವ್ಯಂಗ್ಯವಾಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ದಿನೇಶ್, ಅನರ್ಹ ಶಾಸಕರು ಏನೇ ಮಾಡಿದ್ರೂ ಮುಕ್ತ ಅವಕಾಶ ನೀಡಲಾಗಿತ್ತು. ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕಾನೂನಾತ್ಮಕವಾಗಿ ಸರಿಯಾದ ತೀರ್ಮಾನ ತೆಗೆದುಕೊಂಡಿದ್ದಾರೆ. ಶಾಸಕರನ್ನ ಅನರ್ಹ ಮಾಡಿರುವುದು ಉತ್ತಮ ನಿರ್ಧಾರ. ಅವರಿಗೆ ಬಿಜೆಪಿಯವರು ಕೈ ಕೊಡ್ತಾರೆ ಅಂತ ಮೊದಲೇ ತಿಳಿ ಹೇಳಿದ್ದೆವು. ಮತ್ತೆ ಪಕ್ಷಕ್ಕೆ ಅವರನ್ನ ವಾಪಸ್ ಸೇರಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ ಎಂದರು.
ಗಾಂಧಿ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದೆ. ಗಾಂಧೀಜಿಯವರ ಜೀವನ, ಸಿದ್ಧಾಂತಗಳ ಬಗ್ಗೆ ಯುವ ಪೀಳಿಗೆಗೆ ತಿಳಿಸಬೇಕು. ಇವತ್ತಿನ ಸರ್ಕಾರಕ್ಕೆ ಹೋಲಿಸಿದರೆ ಮೈತ್ರಿ ಸರ್ಕಾರ ನೂರು ಪಾಲು ಚೆನ್ನಾಗಿತ್ತು. ಇವತ್ತು ರಾಜ್ಯದಲ್ಲಿ ಸರ್ಕಾರ ಸತ್ತು ಬಿದ್ದಿದ್ದು, ಬಿಜೆಪಿಯವರು ಪೊರಕೆ ಹಿಡಿದು ಸ್ವಚ್ಚತೆ ಅಂತ ಫೋಸ್ ಕೊಡ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.
ಇನ್ನು ಸಂಸದ ನಾರಾಯಣಸ್ವಾಮಿಗೆ ಪಾವಗಡದ ಗೊಲ್ಲರಹಟ್ಟಿಗೆ ಪ್ರವೇಶ ನಿರಾಕರಣೆ ಬಗ್ಗೆ ಮಾತನಾಡಿದ ಅವರು, ಇದೊಂದು ತಲೆ ತಗ್ಗಿಸುವ ವಿಚಾರ. ಒಬ್ಬ ಸಂಸದರಿಗೆ ಹೀಗಾದರೆ ಹೇಗೆ, ಇದನ್ನ ನಾವು ಬಲವಾಗಿ ಖಂಡಿಸುತ್ತೇವೆ. ನಮ್ಮ ಸಮಾಜದಲ್ಲಿ ಇನ್ನೂ ಸುಧಾರಣೆಯಾಗಬೇಕು ಎಂದರು.