ಬೆಂಗಳೂರು: ಮೈಸೂರಿನ ಕುರುಬರಹಳ್ಳಿಯಲ್ಲಿ 139 ಎಕರೆ ಸರ್ಕಾರಿ ಭೂಮಿಯನ್ನು 30 ವರ್ಷಗಳವರೆಗೆ ಅವೈಜ್ಞಾನಿಕ ಆಧಾರದಲ್ಲಿ ಮೈಸೂರು ರೇಸ್ ಕ್ಲಬ್ ಲಿಮಿಟೆಡ್‌ಗೆ ಗುತ್ತಿಗೆ ನೀಡಿರುವ ಕ್ರಮ ಪ್ರಶ್ನಿಸಿ, ಸಲ್ಲಿಸಿರುವ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಗಡುವು ನೀಡಿದೆ.
ಸರ್ಕಾರಿ ಭೂಮಿಯನ್ನು ಅವೈಜ್ಞಾನಿಕವಾಗಿ ರೇಸ್ ಕ್ಲಬ್ಗೆ ಗುತ್ತಿಗೆ ನೀಡಿರುವ ಕ್ರಮ ಪ್ರಶ್ನಿಸಿ ವಕೀಲ ಉಮಾಪತಿ ಎಂಬುವರು ಅರ್ಜಿಯನ್ನು ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ, ಕೆಲ ಕಾಲ ವಾದ ಆಲಿಸಿ ಅರ್ಜಿಗೆ ಫೆಬ್ರವರಿ 18 ರೊಳಗೆ ಅಕ್ಷೇಪಣೆ ಸಲ್ಲಿಸಲು ಕೊನೆಯ ಅವಕಾಶ ನೀಡಿ ವಿಚಾರಣೆಯನ್ನು ಫೆ. 19ಕ್ಕೆ ಮುಂದೂಡಿತು.
ಓದಿ: ಮೈಸೂರು ರೇಸ್ ಕ್ಲಬ್ಗೆ ಭೂಮಿ ಗುತ್ತಿಗೆ ವಿಚಾರ: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
ಅರ್ಜಿದಾರರ ಕೋರಿಕೆ: 1970ರಲ್ಲಿ ಕುರುಬರಹಳ್ಳಿಯ ಸರ್ವೆ ನಂ. 5 ಮತ್ತು 74ರಲ್ಲಿನ 139.39 ಎಕರೆ ಸರ್ಕಾರಿ ಭೂಮಿಯನ್ನು ಕುದುರೆ ರೇಸ್ ಚಟುವಟಿಕೆಗಾಗಿ ಮೈಸೂರಿನ ರೇಸ್ ಕ್ಲಬ್ ಲಿಮಿಟೆಡ್‌ಗೆ ಲೋಕೋಪಯೋಗಿ ಇಲಾಖೆ ಗುತ್ತಿಗೆ ನೀಡಿದೆ. ಆ ಗುತ್ತಿಗೆ 2016ರಲ್ಲಿ ಮುಕ್ತಾಯವಾಗಿದ್ದು, ಮತ್ತೆ 2016ರಿಂದ 2046ರವರೆಗೆ 2020ರ ಜನವರಿಯಲ್ಲಿ ಗುತ್ತಿಗೆ ನೀಡಲಾಗಿದೆ. ಗುತ್ತಿಗೆ ಮಂಜೂರು ಪ್ರಕ್ರಿಯೆ ಕಾನೂನು ಪ್ರಕಾರವಾಗಿಲ್ಲ.
ಕಂದಾಯ ಇಲಾಖೆ ಅಧೀನದಲ್ಲಿರುವ ಭೂಮಿಯನ್ನು ಅನಧಿಕೃತವಾಗಿ ಲೋಕೋಪಯೋಗಿ ಇಲಾಖೆಯ ಕಾರ್ಯಕಾರಿ ಇಂಜಿನಿಯರ್ ಕ್ಲಬ್ಗೆ ಅನುಕೂಲವಾಗುವ ರೀತಿಯಲ್ಲಿ ಗುತ್ತಿಗೆ ಮಾಡಿಕೊಡುತ್ತಿದ್ದಾರೆ. ಈ ಜಾಗ ಲೋಕೋಪಯೋಗಿ ಇಲಾಖೆಗೆ ಸೇರಿದ್ದಲ್ಲ. ಇನ್ನು ಕ್ಲಬ್‌ನ ವಾರ್ಷಿಕ ಆದಾಯದ ಶೇ. 2ರಷ್ಟು ಹಣವನ್ನು ಮಾತ್ರ ಬಾಡಿಗೆ ನೀಡುವಂತೆ ಒಪ್ಪಂದ ಮಾಡಿಕೊಂಡಿರುವುದು ಅವೈಜ್ಞಾನಿಕವಾಗಿದೆ. ಕಡಿಮೆ ಮೊತ್ತಕ್ಕೆ ಗುತ್ತಿಗೆ ನೀಡಿರುವುದರಿಂದ ಸರ್ಕಾರಕ್ಕೂ ನಷ್ಟವಾಗಿದೆ. ಆದ್ದರಿಂದ ಗುತ್ತಿಗೆ ನವೀಕರಣ ಆದೇಶ ರದ್ದುಪಡಿಸಬೇಕು ಹಾಗೂ ಈವರೆಗಿನ ನಷ್ಟವನ್ನು ವಸೂಲಿ ಮಾಡಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.