ಬೆಂಗಳೂರು: ಪೂರ್ಣ ಪ್ರಮಾಣದ ಸಚಿವ ಸಂಪುಟ ರಚನೆಯಾಗದ ಹೊರತು ಈಗಾಗಲೇ ಪ್ರಮಾಣ ವಚನ ಸ್ವೀಕರಿಸಿರುವ ಸಿಎಂ ಮತ್ತು ಡಿಸಿಎಂ ಸೇರಿದಂತೆ ಹಾಲಿ ಎಂಟು ಜನ ಸಚಿವರುಗಳಿಗೆ ಯಾವುದೇ ಖಾತೆ ಹಂಚಿಕೆ ಮಾಡಲು ತನ್ನ ಒಪ್ಪಿಗೆ ನೀಡದಿರುವ ತೀರ್ಮಾನವನ್ನು ಕಾಂಗ್ರೆಸ್ ಹೈಕಮಾಂಡ್ ತೆಗೆದುಕೊಂಡಿದೆ.
ದೆಹಲಿಯಲ್ಲಿ ಬುಧವಾರದಿಂದ ಮಂತ್ರಿಮಂಡಲ ವಿಸ್ತರಣೆ ಸಂಬಂಧ ಸರಣಿ ಸಭೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ ಸೇರಿ ಪಕ್ಷದ ಹೈಕಮಾಂಡ್ ನಡೆಸುತ್ತಿದ್ದಾರೆ. ಪೂರ್ಣ ಪ್ರಮಾಣದ ಮಂತ್ರಿ ಮಂಡಲ ರಚನೆಗೆ ತನ್ನ ಮೊದಲ ಆದ್ಯತೆಯನ್ನು ಹೈಕಮಾಂಡ್ ನೀಡಿದೆ.
ಸಚಿವ ಸಂಪುಟಕ್ಕೆ ಪಕ್ಷದ ಶಾಸಕರನ್ನು ತೆಗೆದುಕೊಳ್ಳುವ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ನಡುವೆ ಪೈಪೋಟಿ ಏರ್ಪಟ್ಟಿದೆ. ಇಬ್ಬರೂ ಮುಖಂಡರು ತಮ್ಮ ಬೆಂಬಲಿಗರನ್ನು ಸಂಪುಟಕ್ಕೆ ಸೇರಿಸಲು ತೀವ್ರ ಪ್ರಯತ್ನ ನಡೆಸುತ್ತಿದ್ದಾರೆ.
ಸಚಿವ ಸ್ಥಾನದ ಆಕಾಂಕ್ಷಿಗಳು ಹೆಚ್ಚಿರುವುದರಿಂದ ಪೂರ್ಣ ಪ್ರಮಾಣದ ಸಚಿವ ಸಂಪುಟ ರಚನೆ ಮಾಡುವುದು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಗೆ ಈಗ ಬಹಳಷ್ಟು ಕಗ್ಗಂಟಾಗಿ ಪರಿಣಮಿಸಿದೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಯ್ಕೆಯಾದ ಸಂದರ್ಭದಲ್ಲಿ ಹಾಗೂ ಸಿಎಂ ಮತ್ತು ಡಿಸಿಎಂ ಗಳ ಪ್ರಮಾಣ ವಚನ ಸ್ವೀಕಾರ ಸಂದರ್ಭದಲ್ಲಿ ಪೂರ್ಣ ಪ್ರಮಾಣದ ಮಂತ್ರಿ ಮಂಡಲ ರಚಿಸಲು ಪಕ್ಷದ ಹೈಕಮಾಂಡ್ ಸುದೀರ್ಘ ಚರ್ಚೆ ನಡೆಸಿತ್ತು. ಆದರೆ ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವೆ ಒಮ್ಮತ ಅಭಿಪ್ರಾಯ ಮೂಡಿಸಲು ಸಾಧ್ಯವಾಗದೇ ಕೇವಲ 8 ಜನ ಹಿರಿಯ ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ತನ್ನ ಅನುಮತಿ ನೀಡಿತ್ತು. ಹಾಗೆಯೇ ಹೊಸ ಸಚಿವರಿಗೆ ಯಾವುದೇ ಖಾತೆ ಹಂಚಿಕೆ ಮಾಡಲು ಅವಕಾಶ ಕೊಡದೇ ನಾಯಕರಿಗೆ ದೆಹಲಿಗೆ ಬರಲು ಸೂಚಿಸಿತ್ತು.
ಸಚಿವ ಸಂಪುಟ ಪೂರ್ಣ ಪ್ರಮಾಣದಲ್ಲಿ ರಚನೆಯಾದ ನಂತರ ಎಲ್ಲ ಸಚಿವರಿಗೂ ಸೂಕ್ತ ಖಾತೆ ಹಂಚಿಕೆ ಮಾಡುವ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಒಲವು ಹೊಂದಿದೆ. ಒಂದು ವೇಳೆ ಈಗಾಗಲೇ ಪ್ರಮಾಣ ವಚನ ಸ್ವೀಕರಿಸಿರುವ ಸಿಎಂ, ಡಿಸಿಎಂ ಸೇರಿದಂತೆ ಎಂಟು ಜನ ಸಚಿವರಿಗೆ ಖಾತೆ ಹಂಚಿಕೆ ಮಾಡಿದರೆ ಇರುವ ವ್ಯವಸ್ಥೆಯಲ್ಲಿ ಸರ್ಕಾರ ಮುಂದುವರೆದು, ಪೂರ್ಣ ಪ್ರಮಾಣದ ಸಚಿವ ಸಂಪುಟ ವಿಸ್ತರಣೆ ಮತ್ತಷ್ಟು ವಿಳಂಬವಾಗಲಿದೆ ಎನ್ನುವುದು ಹೈಕಮಾಂಡ್ಗೆ ಗೊತ್ತಾಗಿದೆ. ಗೊಂದಲ ಸೃಷ್ಟಿ ಆಗಬಾರದೆಂದು ಯಾರಿಗೂ ಖಾತೆಯನ್ನು ಹಂಚಿಕೆ ಮಾಡಲು ಕಾಂಗ್ರೆಸ್ ಹೈಕಮಾಂಡ್ ತನ್ನ ಅನುಮತಿಯನ್ನು ನೀಡಿಲ್ಲವೆಂದು ಹೇಳಲಾಗುತ್ತಿದೆ.
ಹೈಕಮಾಂಡ್ನ ಈ ಬಿಗಿ ನಿಲುವಿನಿಂದಾಗಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು 8 ಜನ ಕ್ಯಾಬಿನೆಟ್ ದರ್ಜೆ ಸಚಿವರುಗಳು ಪ್ರಮಾಣ ವಚನ ಸ್ವೀಕರಿಸಿ ಆರು ದಿನಗಳಾದರೂ ಎಲ್ಲ ಮಂತ್ರಿಗಳು ಖಾತೆ ರಹಿತ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನೂತನ ಸಚಿವರಿಗೆ ಖಾತೆಗಳ ಹಂಚಿಕೆಯಾಗದಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಚಿವರ ಅಪೇಕ್ಷೆಗೆ ಅನುಗುಣವಾಗಿ ವಿಧಾನಸೌಧ ಮತ್ತು ವಿಕಾಸ ಸೌಧದಲ್ಲಿ ಕೊಠಡಿಗಳನ್ನು ಹಾಗೂ ಸಚಿವರಿಗೆ ಸರ್ಕಾರದ ಬಂಗಲೆಗಳನ್ನ ಹಂಚಿಕೆ ಮಾಡಿದ್ದಾರೆ.
ವಿಧಾನಸೌಧದಲ್ಲಿ ನಾಲ್ಕು ಕೊಠಡಿ ಡಿಕೆಶಿ ಹಂಚಿಕೆ: ಉಪಮುಖ್ಯಮಂತ್ರಿ ಆಗಿರುವ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರಿಗೆ ವಿಧಾನಸೌಧದಲ್ಲಿ ನಾಲ್ಕು ಕೊಠಡಿಗಳನ್ನು ಹಂಚಿಕೆ ಮಾಡಲಾಗಿದೆ. ಇದು ಹಲವರ ಹುಬ್ಬೇರಿಸಿದೆ. ಸಾಮಾನ್ಯವಾಗಿ ಹಿರಿಯ ಕ್ಯಾಬಿನೆಟ್ ಸಚಿವರಿಗೆ ಎರಡು ಕೊಠಡಿಗಳನ್ನು ನೀಡಲಾಗುತ್ತದೆ.
ಆದರೆ ಡಿಕೆ ಶಿವಕುಮಾರ್ ಅವರಿಗೆ ನಾಲ್ಕು ಕೊಠಡಿಗಳನ್ನ ಹಂಚಿಕೆ ಮಾಡಿರುವ ಬಗ್ಗೆ ಕಾಂಗ್ರೆಸ್ ಪಕ್ಷದ ವಲಯದಲ್ಲಿ ಟೀಕೆಗಳು ಕೇಳಿಬರತೊಡಗಿವೆ. ವಿಧಾನಸೌಧದ 3ನೇ ಮಹಡಿಯಲ್ಲಿ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ಕೊಠಡಿ ಸಂಖ್ಯೆ. 335, 336, 337 ಮತ್ತು 337a ನಂಬರಿನ ಕೊಠಡಿಗಳನ್ನ ಹಂಚಿಕೆ ಮಾಡಲಾಗಿದೆ. ಈ ಹಿಂದೆ ಡಿ ಕೆ ಶಿವಕುಮಾರ್ ಸಿದ್ದರಾಮಯ್ಯನವರ ಸರ್ಕಾರದಲ್ಲಿ ಸಚಿವರಾಗಿದ್ದ ವೇಳೆ ಪಡೆದ ಕೊಠಡಿಯನ್ನೇ ಈ ಬಾರಿಯೂ ಅವರು ಪಡೆದಿದ್ದಾರೆ.
ಸಿದ್ದರಾಮಯ್ಯ ವಾಸವಿದ್ದ ಕೊಠಡಿ ಪಡೆದ ಡಿಕೆಶಿ: ವಾಸ್ತು ತಜ್ಞರು ಹಾಗೂ ಜ್ಯೋತಿಷಿಗಳ ಸಲಹೆಯಂತೆ ಅದೇ ಕೊಠಡಿಗಳನ್ನು ಶಿವಕುಮಾರ್ ಅವರು ಪಡೆದಿದ್ದಾರೆಂದು ಹೇಳಲಾಗಿದೆ. ಹಾಗೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈಗ ಸದ್ಯ ವಾಸವಾಗಿರುವ ಶಿವಾನಂದ ಸರ್ಕಲ್ ಬಳಿ ಇರುವ ನಿವಾಸವನ್ನು ಶಿವಕುಮಾರ್ ಅವರು ಸರ್ಕಾರಿ ನಿವಾಸವನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ.
ಇದು ಅದೃಷ್ಟದ ನಿವಾಸ ಎನ್ನುವ ಹಿನ್ನೆಲೆಯಲ್ಲಿ ಈ ಬಂಗಲೆಯನ್ನು ಕೇಳಿ ಪಡೆದಿದ್ದಾರೆ ಎನ್ನಲಾಗುತ್ತಿದೆ. ಸಿದ್ದರಾಮಯ್ಯನವರು ಈ ಹಿಂದೆ ಇದೇ ಮನೆಯಲ್ಲಿ ವಾಸವಾಗಿ ವಿಧಾನಸಭೆ ಪ್ರತಿಪಕ್ಷ ನಾಯಕನ ಹುದ್ದೆಯಿಂದ ಮುಖ್ಯಮಂತ್ರಿ ಸ್ಥಾನಕ್ಕೆ ಬಡ್ತಿ ಪಡೆದಿದ್ದರ ಹಿನ್ನೆಲೆಯಲ್ಲಿ ಶಿವಕುಮಾರ್ ಅವರು ಇದೇ ನಿವಾಸ ಆಯ್ಕೆ ಮಾಡಿಕೊಂಡಿದ್ದಾರೆನ್ನಲಾಗಿದೆ. ಈ ನಿವಾಸ ಮಾಜಿ ಸಚಿವರಾದ ಮಾಜಿ ಪ್ರಧಾನಿ ದೇವೇಗೌಡರ ಪುತ್ರ ಹೆಚ್ ಡಿ ರೇವಣ್ಣನವರ ಫೇವರೆಟ್ ಬಂಗಲೆಯಾಗಿದೆ.
ಇದನ್ನೂಓದಿ:ನಮ್ಮಲ್ಲಿ ಇರುವುದು ಒಂದೇ ಬಣ, ನಾನು ಯಾವುದೇ ಖಾತೆಗೆ ಬೇಡಿಕೆ ಇಟ್ಟಿಲ್ಲ: ರಾಮಲಿಂಗಾರೆಡ್ಡಿ