ಬೆಂಗಳೂರು: ಅಯೋಧ್ಯೆ ರಾಮ ಮಂದಿರ ನಿಧಿ ಸಮರ್ಪಣೆ ಅಂಗವಾಗಿ ತೆರಳುತ್ತಿದ್ದ ವಾಹನದ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿರುವ ಆರೋಪ ಕೇಳಿ ಬಂದಿದೆ. ಗುರಪ್ಪನ ಪಾಳ್ಯದ ಬಳಿ ಈ ಘಟನೆ ನಡೆದಿದೆ.
ವಾಹನದಲ್ಲಿ ತೆರಳುತ್ತಿದ್ದ ವೇಳೆ ಕಿಡಿಗೇಡಿಗಳು ವಾಹನದ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎನ್ನಲಾಗಿದೆ. ಈ ವೇಳೆ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಹಲವು ಮಂದಿ ಕಾರ್ಯಕರ್ತರು ಜಮಾಯಿಸಿದ್ದರು.
ವಾಹನವನ್ನು ಇಲ್ಲಿಗೆ ಬರಲು ಬಿಟ್ಟಿದ್ಯಾರು ಎಂದು ಮೂವರು ಗಲಾಟೆ ಮಾಡಿದ್ದಲ್ಲದೆ ವಾಹನವನ್ನು ಜಖಂ ಮಾಡಲು ಯತ್ನಿಸಿ, ಬಳಿಕ ವಾಹನದಲ್ಲಿದ್ದ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹಲ್ಲೆಗೊಳಗಾದ ಸುರೇಶ್ ದೂರಿದ್ದಾರೆ.
ಸ್ಥಳದಲ್ಲಿ ಜನಸಂದಣಿ ಅಧಿಕವಾದ ಬೆನ್ನಲ್ಲೇ ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಗೆ ಡಿಸಿಪಿ ಶ್ರೀನಾಥ್ ಜೋಷಿ ದೌಡಾಯಿಸಿದ್ದಾರೆ. ಅಲ್ಲದೆ ಸ್ಥಳದಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಸಂಜೆ ಪೊಲೀಸ್ ಠಾಣೆಗೆ ಆಗಮಿಸಿದ ಪಾಲಿಕೆ ಮಾಜಿ ಸದಸ್ಯ, ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಘಟಕ ಅಧ್ಯಕ್ಷ ಎನ್.ಆರ್.ರಮೇಶ್ ಮಾತುಕತೆ ನಡೆಸಿದ್ದಾರೆ.
ಘಟನೆ ಕುರಿತು ಈಶಾನ್ಯ ವಿಭಾಗ ಡಿಸಿಪಿ ಶ್ರೀನಾಥ್ ಎಂ.ಜೋಷಿ ಮಾತನಾಡಿ, ಸುದ್ದಗುಂಟೆಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿ ಬಳಿ ರಾಮ ಮಂದಿರ ನಿರ್ಮಾಣಕ್ಕೆ ಹಣ ಕಲೆಕ್ಟ್ ಮಾಡುತ್ತಿದ್ದರು. ಈ ವೇಳೆ ಯಾರೋ ಮೂವರು ಹಲ್ಲೆ ಮಾಡಿದ್ದಾರೆ. ಈ ಘಟನೆ ಸಂಬಂಧ ಎಫ್ಐಆರ್ ದಾಖಲಿಸಿದ್ದೇವೆ. ತನಿಖೆ ಮುಂದುವರೆದಿದೆ ಎಂದು ತಿಳಿಸಿದರು.
ಈ ವೇಳೆ ಠಾಣೆಯ ಮುಂಭಾಗ ನ್ಯಾಯ ಒದಗಿಸಿಕೊಡುವಂತೆ ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಸಾಂಕೇತಿಕ ಪ್ರತಿಭಟನೆ ನಡೆಸಿದರು.
ಇದನ್ನೂ ಓದಿ: ನೂತನ ಸಚಿವರನ್ನು ಸದನಕ್ಕೆ ಪರಿಚಯಿಸಿದ ಸಿಎಂ: ಪದ್ಮ ಪುರಸ್ಕಾರ ಪಡೆದವರಿಗೆ ಅಭಿನಂದನೆ