ಬೆಂಗಳೂರು: ಕೊಲೆ ಮಾಡಿ ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿಟ್ಟ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವವೊಂದು ನಗರದ ರಾಜರಾಜೇಶ್ವರಿ ನಗರದ ರಾಜಕಾಲುವೆ ಬಳಿ ಪತ್ತೆಯಾಗಿದೆ.
ಮಂಗಳವಾರ ಬೆಳಗ್ಗೆ 8 ಗಂಟೆಗೆ ನೈಸ್‌ರೋಡ್ ಸಮೀಪದ ರಾಜಕಾಲುವೆಯ ದಡದಲ್ಲಿ ಚಿಂದಿ ಆಯುತ್ತಿದ್ದವರಿಗೆ ಪ್ಲಾಸ್ಟಿಕ್ ಚೀಲದಲ್ಲಿ ಯಾವುದೋ ವಸ್ತುವನ್ನು ಸುತ್ತಿಟ್ಟಿರುವುದು ಕಂಡು ಬಂದಿದೆ. ಅದರ ಬಳಿ ಹೋಗಿ ಪರಿಶೀಲಿಸಿದಾಗ 25 ರಿಂದ 30 ವರ್ಷದ ಯುವಕನ ಮೃತದೇಹ ದೊರೆತಿದೆ. ಕೂಡಲೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಆರ್.ಆರ್ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಅಪರಿಚಿತರ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೈ-ಕಾಲು ಕಟ್ಟಿ ಪ್ಲಾಸ್ಟರ್ ಟೇಪ್ ಅಂಟಿಸಿ ಕೊಲೆ
ದುಷ್ಕರ್ಮಿಗಳು ಕೊಲೆ ಮಾಡುವ ವೇಳೆ ಕಿರುಚಾಡದಂತೆ ಪ್ಲಾಸ್ಟರ್ ಟೇಪ್ (ಬ್ರೌನ್ ಟೇಪ್) ನಿಂದ ಮೃತನ ಮುಖ, ಬಾಯಿ ಮುಚ್ಚಿ, ಕೈ-ಕಾಲು ಕಟ್ಟಿಹಾಕಿದ್ದರು. ಆತ ಒದ್ದಾಡದಂತೆ ಕೈ-ಕಾಲುಗಳಿಗೆ ದಾರ ಕಟ್ಟಿ ವೈಯರ್‌ನಿಂದ ಕತ್ತು ಬಿಗಿದು ಕೊಲೆ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ನಂತರ ಮೂರು ಪ್ಲಾಸ್ಟಿಕ್ ಚೀಲಗಳಲ್ಲಿ ಮೃತದೇಹ ತುಂಬಿ ರಾಜಕಾಲುವೆಗೆ ಎಸೆದು ಪರಾರಿಯಾಗಿದ್ದಾರೆ. ದೇಹದಲ್ಲಿ ದೊಡ್ಡ ಗಾಯಗಳ ಗುರುತು ಮತ್ತು ರಕ್ತದ ಕಲೆ ಪತ್ತೆಯಾಗಿಲ್ಲ. ಕೊಲೆಯಾದ ಯುವಕನ ವಾರಸುದಾರರಿಗೆ ಹುಡುಕಾಟ ನಡೆಯುತ್ತಿದೆ. ವಾರಸುದಾರರು ಸಿಕ್ಕಿದ ಬಳಿಕ ಆರೋಪಿಗಳಿಗೆ ಶೋಧ ನಡೆಸಲಾಗುವುದು ಎಂದು ಡಿಸಿಪಿ ಸಂಜೀವ್ ಪಾಟೀಲ್ ತಿಳಿಸಿದ್ದಾರೆ.
ಇದನ್ನೂ ಓದಿ: ಮಂಗಳೂರು : ಪೊಲೀಸರ ನಿದ್ದೆಗೆಡಿಸಿದ್ದ ಖತರ್ನಾಕ್ ಕಳ್ಳರ ಗ್ಯಾಂಗ್ ಬಂಧನ