ಬೆಂಗಳೂರು : ಕಾಂಗ್ರೆಸ್ ಪಕ್ಷದವರಿಗೆ ಟಿಪ್ಪು ಜಯಂತಿ ಮಾಡಬೇಕು ಎಂದು ಅನಿಸುತ್ತದೆ. ಆದರೆ ಒಡೆಯರ್ ಜಯಂತಿ ಆಚರಿಸಬೇಕು ಅನಿಸಲಿಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಮಿಂಟೋ ಆಸ್ಪತ್ರೆಗೆ ತೆರಳಿ ಆ್ಯಸಿಡ್ ದಾಳಿಗೊಳಗಾದ ಸಂತ್ರಸ್ತೆಯ ಆರೋಗ್ಯ ವಿಚಾರಿಸಿದ ಬಳಿಕ ಮಾತನಾಡಿದ ಅವರು, ಕಾಂಗ್ರೆಸ್ ಪೋಸ್ಟರ್ ಅಭಿಯಾನಕ್ಕೆ ಪ್ರತಿಕ್ರಿಯಿಸುತ್ತಾ, ಪ್ರಜಾತಂತ್ರದ ವ್ಯವಸ್ಥೆಗೆ ಕುಹಕ, ಅವಮಾನ ಮಾಡುತ್ತಿದೆ. ಕರ್ನಾಟಕ ಕಾಂಗ್ರೆಸ್‌ನವರು ತಮ್ಮ ಒಳ ಜಗಳ ಮುಚ್ಚಿ ಹಾಕಿಕೊಳ್ಳಲು ಈ ರೀತಿ ನಾಟಕ ಆಡುತ್ತಿದ್ದಾರೆ. ಅವರ ನಾಟಕವನ್ನು ಜನ ನೋಡಿದ್ದಾರೆ ಎಂದು ಕಿಡಿಕಾರಿದರು.
ಅವರು ಅಧಿಕಾರದಲ್ಲಿದ್ದಾಗ ಅಭಿವೃದ್ಧಿ ಯಾಕೆ ಮಾಡಲಿಲ್ಲ?. ಕಾಂಗ್ರೆಸ್‌ನವರು ದೇಶದಲ್ಲಿ ಅಸ್ತಿತ್ವ ಕಳೆದುಕೊಂಡಿದ್ದಾರೆ. ಕರ್ನಾಟಕದಲ್ಲೂ ಭಯ ಬಿದ್ದಿದ್ದಾರೆ. ಕರ್ನಾಟಕದಲ್ಲಿ ಐವತ್ತು ಅರವತ್ತು ವರ್ಷಗಳಿಂದ ನಾಟಕ ಆಡುತ್ತಿದ್ದಾರೆ. ಜಾತಿ-ಧರ್ಮಗಳ ಮಧ್ಯೆ ಹೊಡೆದಾಡುವ ನೀತಿ ತಂದರು. ಇದಕ್ಕೆಲ್ಲ ಕಾಂಗ್ರೆಸ್‌ನವರು ಉತ್ತರ ಕೊಡಬೇಕಿದೆ ಎಂದು ಆಗ್ರಹಿಸಿದರು.
ಆ್ಯಸಿಡ್ ದಾಳಿ ಮಾಡೋರಿಗೆ ಉಗ್ರ ಶಿಕ್ಷೆ ಆಗಬೇಕು : ಇದಕ್ಕೂ ಮುನ್ನ ಮಿಂಟೋ ಆಸ್ಪತ್ರೆಯಲ್ಲಿ ಆ್ಯಸಿಡ್ ದಾಳಿಗೊಳಗಾದ ಸಂತ್ರಸ್ತೆ ವಿದ್ಯಾರ್ಥಿನಿಗೆ ಧೈರ್ಯ ತುಂಬಿದರು. ಬಳಿಕ ಮಾತನಾಡಿದ ಅವರು, ಹೆಣ್ಣುಮಕ್ಕಳ ಮೇಲೆ ನಿರಂತರ ದೌರ್ಜನ್ಯ ಮುಂದುವರೆಯುತ್ತಿದೆ. ನಿರ್ಭಯಾ ಪ್ರಕರಣ ಬಳಿಕ ಕಾನೂನಿನಲ್ಲಿ ಹಲವು ಬದಲಾವಣೆ ಆಯ್ತು. ಅಪ್ರಾಪ್ತ ವಯಸ್ಸಿನ ಹುಡುಗಿಯರಿಗೆ ಹಿಂಸೆ, ಕಿರುಕುಳ ಕೊಟ್ಟೋರಿಗೆ ಗಲ್ಲು ಶಿಕ್ಷೆ ಆಗುತ್ತೆ. ಆದರೆ ಕಾನೂನು ಕಾನೂನಾಗಿಯೇ ಉಳಿದುಕೊಳ್ಳುತ್ತಾ ಎಂದೆನಿಸುತ್ತಿದೆ. ಅಪ್ರಾಪ್ತರ ಮೇಲೆ ಅತ್ಯಾಚಾರ ಪ್ರಕರಣಗಳಲ್ಲಿ ಗಲ್ಲು ಶಿಕ್ಷೆ ಆಗುತ್ತೆ, ಅದೇ ರೀತಿ ಆ್ಯಸಿಡ್ ಹಾಕೋರಿಗೂ ಶಿಕ್ಷೆ ಆಗಬೇಕು ಎಂದು ಹೇಳಿದರು.
ಹಾನಿಗೊಳಗಾದ ವಿದ್ಯಾರ್ಥಿನಿಗೆ ಶಿಕ್ಷಣದಲ್ಲಿ ಮುಂದುವರೆಯುವ ಇಚ್ಛೆ ಇದೆ. ಆದರೆ ಕನಕಪುರದಲ್ಲಿ ಶಿಕ್ಷಣ ಮುಂದುವರೆಸಲು ಆಗಲ್ಲ. ಹೀಗಾಗಿ ಬೆಂಗಳೂರಿನಲ್ಲಿ ಶಿಕ್ಷಣ ಮುಂದುವರೆಸುವ ಬಗ್ಗೆ ಅವರ ತಾಯಿಯೂ ಹೇಳಿದ್ದಾರೆ ಎಂದು ಕೇಂದ್ರ ಸಚಿವರು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್ ಮಿಂಟೋ ಆಸ್ಪತ್ರೆಗೆ ತೆರಳಿ ಸಂತ್ರಸ್ತೆಯ ಆರೋಗ್ಯ ವಿಚಾರಿಸಿದರು. ಬಳಿಕ ಮಾತನಾಡಿ, ಶಾಂತಿ ಇರುವಂತ ನೆಲದಲ್ಲಿ ಇಂತಹ ದುಷ್ಕರ್ಮಿಗಳು ಇರಬಾರದು. ಈ ರೀತಿಯ ಒಂದೆರಡು ಕ್ರಿಮಿಗಳಿಂದ ಹೆಣ್ಣು ಮಕ್ಕಳ ಭವಿಷ್ಯ ಹಾಳಾಗುತ್ತಿದೆ. ಸಮಾಜದಲ್ಲಿ ಇಂತಹ ದುಷ್ಕೃತ್ಯವನ್ನು ಸಹಿಸೋಕೆ ಸಾಧ್ಯ ಇಲ್ಲ.
ಈ ರೀತಿಯ ಅಪರಾಧ ಮಾಡಿದರೆ ಕಾನೂನು ಚೌಕಟ್ಟಿನಲ್ಲಿ ಏನೇನು ಕ್ರಮ ತಗೊಬೇಕೋ ಅದನ್ನು ತೆಗದುಕೊಳ್ಳುತ್ತೇವೆ. ಈ ಅಪರಾಧದ ಬಗ್ಗೆ ಕಾನೂನು ಕ್ರಮ ದೊಡ್ಡದು ಇದೆ. ಇದನ್ನು ಅರ್ಥ ಮಾಡಿಕೊಳ್ಳದೇ ಕೆಲವು ಕ್ರಿಮಿಗಳು ಈ ಕೆಲಸ ಮಾಡ್ತಾರೆ. ಇಂತಹವರನ್ನು ಯಾವುದೇ ಮುಲಾಜಿಲ್ಲದೇ ಕಠಿಣ ಶಿಕ್ಷೆಗೆ ಒಳಪಡಿಸುತ್ತೇವೆ. ಪೂರ್ತಿ ತನಿಖೆಯಾದ ನಂತರ ಪರಿಹಾರದ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ: ರಾಮನಗರ: ಪ್ರೀತಿ ನಿರಾಕರಿಸಿದ್ದ ವಿದ್ಯಾರ್ಥಿನಿ ಮೇಲೆ ಆ್ಯಸಿಡ್ ಎರಚಿದ್ದ ಮೆಕ್ಯಾನಿಕ್ ಬಂಧನ