ಬೆಂಗಳೂರು: ಕೋವಿಡ್ ಲಸಿಕೆ ವಿತರಣೆ ಕುರಿತು ಕೋರ್ಟ್ ಆದೇಶ ನೀಡುತ್ತದೆ. ಆದರೆ ಸಾಕಷ್ಟು ಪ್ರಮಾಣದಲ್ಲಿ ಲಸಿಕೆ ಉತ್ಪಾದನೆ ಆಗಲಿಲ್ಲವೆಂದರೆ ನಾವೇನು ನೇಣು ಹಾಕಿಕೊಳ್ಳೋಕೆ ಆಗುತ್ತಾ? ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜಕೀಯ ಲಾಭಕ್ಕಾಗಿ ನಾವು ಪ್ಲಾನ್ ಆಫ್ ಆಕ್ಷನ್ ಮಾಡಿಲ್ಲ. ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೇವೆ. ಸಾಕಷ್ಟು ಪ್ರಮಾಣದಲ್ಲಿ ಉತ್ಪಾದನೆ ಆಗಲಿಲ್ಲ. ಅದು ನಮ್ಮ ಪ್ರಯತ್ನ ಮೀರಿದ್ದು ಎಂದರು.
ಕರ್ನಾಟಕದಲ್ಲಿ ನಿನ್ನೆಯವರೆಗೆ 98,000 ಡೋಸ್ ಲಸಿಕೆ ಸಂಗ್ರಹವಿತ್ತು. ಕೇಂದ್ರದಿಂದ ಇನ್ನೂ 75,000 ಡೋಸ್ ಬರಬೇಕಾಗಿದೆ. ಇದುವರೆಗೆ 1.18 ಕೋಟಿಗೂ ಹೆಚ್ಚು ಡೋಸ್ ಲಸಿಕೆ ವಿತರಣೆ ಮಾಡಲಾಗಿದೆ. ನೇರವಾಗಿ ಪ್ರಧಾನಿಯವರೇ ಲಸಿಕಾ ಅಭಿಯಾನದ ಉಸ್ತುವಾರಿ ವಹಿಸಿದ್ದಾರೆ. ಇನ್ನು ಒಂದು ವಾರದೊಳಗೆ ಗೊಂದಲಗಳು ಬಗೆಹರಿಯುತ್ತವೆ. ಅದಕ್ಕಾಗಿಯೇ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ವಿತರಣೆ ನಿಲ್ಲಿಸಿ, 45 ವರ್ಷ ಮೇಲ್ಪಟ್ಟವರಿಗೆ ಮುಂದುವರಿಸಲಾಗಿದೆ ಎಂದು ತಿಳಿಸಿದರು.
ಓದಿ : ರಾಜ್ಯದಲ್ಲಿ 2ನೇ ಡೋಸ್ ವ್ಯಾಕ್ಸಿನ್ ಕೊರತೆ: ಸರ್ಕಾರಕ್ಕೆ ಹೈಕೋರ್ಟ್ ತರಾಟೆ
ಕೊರೊನಾ ನಿರ್ವಹಣೆ ವಿಷಯದಲ್ಲಿ ಕೇಂದ್ರ ಸರ್ಕಾರ ವಿಫಲವಾಗಿಲ್ಲ. ರಾಜ್ಯ ಸರ್ಕಾರಗಳ ಜೊತೆ ಉತ್ತಮ ಸಂಪರ್ಕ ಸಂವಹನ ಮಾಡಿಕೊಂಡು ಔಷಧ ಆಕ್ಸಿಜನ್ ಹಾಗೂ ಹಣಕಾಸು ಸಹಾಯವನ್ನು ಪ್ರಧಾನಿ ನರೇಂದ್ರ ಮೋದಿ ಒದಗಿಸಿದ್ದಾರೆ. ಮೋದಿಯವರು ಅಂತಾರಾಷ್ಟ್ರೀಯ ಸಂಬಂಧ ಉತ್ತಮವಾಗಿಟ್ಟುಕೊಂಡ ಕಾರಣದಿಂದ ಎಲ್ಲಾ ದೇಶಗಳಿಂದ ಸಹಾಯ ಹರಿದು ಬಂದಿದೆ ಎಂದರು.
ವಾಗ್ದಾಳಿ: ಪ್ರತಿಪಕ್ಷದ ಪ್ರಮುಖ ನಾಯಕರು ಬೀದಿಯಲ್ಲಿ ಕೂತು ಪ್ರತಿಭಟನೆ ಮಾಡುವುದರಿಂದ ಕೊರೊನಾ ಹೋಗುತ್ತೆ ಎನ್ನುವುದಾದರೆ ಪ್ರತಿಭಟನೆ ಮಾಡಲಿ. ಈ ರೀತಿಯ ಪ್ರತಿಭಟನೆಯಿಂದ ಜನರ ಆತ್ಮಸ್ಥೈರ್ಯ ಕೆಡಿಸಲಾಗುಯತ್ತಿದೆ. ಅಷ್ಟು ಆಸಕ್ತಿ ಇದ್ದರೆ ಪ್ರತಿಪಕ್ಷದ ನಿಯೋಗ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಸಲಹೆ ಸೂಚನೆ ಕೊಡಲಿ ಮತ್ತು ಸಹಕಾರ ಕೊಡಲಿ ಎಂದು ವಾಗ್ದಾಳಿ ನಡೆಸಿದರು.
ರೆಮ್ಡಿಸಿವಿರ್ ಷೆಲ್ಫ್ ಲೈಫ್ ಮೂರು ತಿಂಗಳು ಮಾತ್ರ. ಮೊದಲ ಅಲೆ ಕಡಿಮೆಯಾದ ಬಳಿಕ ಬೇಡಿಕೆ ಕಡಿಮೆಯಾದ ಕಾರಣ ಉತ್ಪಾದಕ ಕಂಪನಿಗಳು ಉತ್ಪಾದನೆ ಕಡಿಮೆ ಮಾಡಿತ್ತು. ಎರಡನೇ ಅಲೆ ತೀವ್ರವಾದ ಬಳಿಕ ಸರ್ಕಾರದ ಕಡೆಯಿಂದ ಏಳು ಕಂಪನಿಯವರನ್ನು ಕರೆದು ಮಾತುಕತೆ ನಡೆಸಿ, ಅಗತ್ಯ ಸಹಕಾರ ಕೊಟ್ಟೆವು. ಪರಿಣಾಮ ಇವತ್ತು ರೆಮ್ಡಿಸಿವಿರ್ ಒಂದು ಕೋಟಿ ವಯಲ್ಸ್ ಉತ್ಪಾದನೆಯಾಗುತ್ತಿದೆ. ದರವೂ ಅಷ್ಟೇ, 3,400 ರೂ.ಗೆ ನಿಗದಿ ಮಾಡಿದ್ದೇವೆ. ಕೇಂದ್ರ ರಾಜ್ಯ ಸರ್ಕಾರಗಳಿಗೆ ಶೇ. 80ರಷ್ಟು ರೆಮ್ಡಿಸಿವಿರ್ ಪೂರೈಕೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ವಿವರಿಸಿದರು.
ಔಷಧಿ ಪೂರೈಕೆ: ಟ್ರಸ್ಲಿಜೋಂ ಔಷಧಕ್ಕೂ ಹೆಚ್ಚು ಬೇಡಿಕೆ ಇದೆ. ಪ್ರತಿ ಇಂಜೆಕ್ಷನ್ಗೆ 34,000 ರೂ. ದರ ಇದೆ. ಈ ಇಂಜೆಕ್ಷನ್ ಮೂಲ ಉತ್ಪಾದಕರು 50,000 ಡೋಸ್ ದಾನ ಮಾಡಿದ್ದಾರೆ. ಮಹಾರಾಷ್ಟ್ರ ಬಿಟ್ಟರೆ, ಕರ್ನಾಟಕಕ್ಕೆ ಅತಿ ಹೆಚ್ಚು ಪ್ರಮಾಣದಲ್ಲಿ ರೆಮ್ಡಿಸಿವಿರ್, ಟ್ರಸ್ಲಿಜೋಂ, ಆಂಪಿಟೋರೆಸಿಯನ್ ಇಂಜೆಕ್ಷನ್ಗಳನ್ನು ಸರಬರಾಜು ಮಾಡಿದ್ದೇವೆ. ಜೀವರಕ್ಷಕ ಸ್ಟರಾಯ್ಡ್ಗಳನ್ನು ರಾಜ್ಯಗಳ ಬೇಡಿಕೆಗೆ ತಕ್ಕಂತೆ ಪೂರೈಕೆ ಮಾಡಲು ವ್ಯವಸ್ಥೆ ಮಾಡಿದ್ದೇವೆ ಎಂದು ಹೇಳಿದರು.
ಮಹಾರಾಷ್ಟ್ರ ಕರ್ನಾಟಕ ಮತ್ತು ಉತ್ತರ ಪ್ರದೇಶಕ್ಕೆ ಆಮ್ಲಜನಕ ಪೂರೈಕೆ ಹೆಚ್ಚು ವ್ಯತ್ಯಾಸವಿಲ್ಲ. 850 ಮೆಟ್ರಿಕ್ ಟನ್ ಆಸುಪಾಸಿನಲ್ಲೇ ಆಕ್ಸಿಜನ್ ಪೂರೈಕೆ ಮಾಡಲಾಗಿದೆ. ನಾವು ಜಗಳ ಮಾಡಿ ಆ್ಯಕ್ಟೀವ್ ಕೇಸ್ ಆಧಾರದ ಮೇಲೆ ಕರ್ನಾಟಕಕ್ಕೆ ಹೆಚ್ಚು ಪೂರೈಕೆ ಮಾಡುವಂತೆ ಮಾಡಿದ್ದೇವೆ. ಈಗ ಒಂದು ಸಾವಿರದ ಹದಿನೈದು ಮೆಟ್ರಿಕ್ ಟನ್ ರಾಜ್ಯಕ್ಕೆ ಕೊಡಲಾಗುತ್ತಿದೆ ಎಂದು ಹೇಳಿದರು.
ನಿನ್ನೆಯವರೆಗೆ ಕೇಂದ್ರದ ಪಿಎಂ ಕೇರ್ ಫಂಡ್ನಿಂದ ರಾಜ್ಯ ಸರ್ಕಾರಕ್ಕೆ 303.63 ಕೋಟಿ ರೂ. ಬಂದಿದೆ. ಯಂತ್ರೋಪಕರಣಗಳ ಸರಬರಾಜು, ವ್ಯಾಕ್ಸಿನ್ ಎಲ್ಲವನ್ನು ಹೊರತುಪಡಿಸಿ, ಈ ಹಣ ಸಹಾಯ ಬಂದಿರುವುದು ಎಂದರು. ವಿಶೇಷ ಪ್ಯಾಕೇಜ್ ಬಗ್ಗೆ ನಾನು ಏನನ್ನೂ ಹೇಳಲ್ಲ ಎಂದ ಡಿವಿಎಸ್, ಪ್ರಧಾನಿ ಅವರ ಅಕೌಂಟ್ನಿಂದ ಈಗಾಗಲೇ ಹಣ ಕೊಡುತ್ತಿದ್ದಾರೆ ಎಂದು ತಿಳಿಸಿದರು.