ಬೆಂಗಳೂರು: ಭಾರತದ ಭಾಷಾ ವೈವಿಧ್ಯತೆಯ ಸಂರಕ್ಷಣೆ ಮತ್ತು ಬೆಳವಣೆಗೆಗೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಬದ್ಧವಾಗಿದೆ ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದ್ದಾರೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸಂಘಟಿಸಿರುವ “ಭಾಷಾ ಭಾರತ ಬಲಿಷ್ಠ ಭಾರತ” ಎಂಬ ಎರಡು ದಿನಗಳ ರಾಷ್ಟ್ರಮಟ್ಟದ ಭಾರತೀಯ ಭಾಷೆಗಳ ದುಂಡುಮೇಜಿನ ಪರಿಷತ್ತನ್ನು ದೆಹಲಿಯಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದ್ರು. ಬಳಿಕ ಮಾತನಾಡಿರ ಸಚಿವರು, ನರೇಂದ್ರ ಮೋದಿ ನೇತೃತ್ವದ ನಮ್ಮ ಕೇಂದ್ರ ಸರ್ಕಾರವು ಭಾಷಾ ವೈವಿಧ್ಯತೆಯನ್ನು ಗೌರವಿಸುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಕೇಂದ್ರವು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಿದೆ. ನೀಟ್ (NEET) ಜೆಇಇ (JEE) ಸೇರಿದಂತೆ ರಾಷ್ಟ್ರಮಟ್ಟದ ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತಮ್ಮ ಮಾತೃಭಾಷೆಯಲ್ಲಿಯೇ ಬರೆಯಲು ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗಿದೆ ಎಂದರು.
ಕೇಂದ್ರ ಬಜೆಟ್ನಲ್ಲಿ ಭಾರತೀಯ ಭಾಷಾ ಅನುವಾದ ಯೋಜನೆಗಳಿಗಾಗಿ ಅನುದಾನ ನೀಡಲಾಗಿದೆ. ವೈದ್ಯಕೀಯ ಶಾಸ್ತ್ರ ಸೇರಿದಂತೆ ವಿಜ್ಞಾನ ಸಂಬಂಧಿತ ವಿಷಯಗಳು ಎಲ್ಲ ಭಾರತೀಯ ಭಾಷೆಗಳಲ್ಲಿ ಲಭ್ಯವಾಗಿಸಲು ಕೇಂದ್ರವು ಕ್ರಮಕೈಗೊಂಡಿದೆ. ಭಾರತವು ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ದೇಶವಾಗಿದೆ. ನಮ್ಮದು ಬಹುಭಾಷೆ, ಬಹುಸಂಸ್ಕೃತಿಯ ಸಮ್ಮಿಲನವಾಗಿದೆ. ಪ್ರತಿಯೊಂದು ಭಾಷೆಗೂ ಅದರದ್ದೇ ಆದ ಸೊಗಡು ಇದೆ. ಪ್ರತಿಯೊಂದು ರಾಜ್ಯಕ್ಕೂ ಅದರದ್ದೇ ವೈಶಿಷ್ಟವಿದೆ. ಆಡಳಿತವು ಆಯಾ ಭಾಷೆಯಲ್ಲಿಯೇ ಇದ್ದರೆ ಸ್ಥಳೀಯರಿಗೆ ಅನುಕೂಲ.1956 ರಲ್ಲಿ ಭಾಷಾ ಆಧಾರಿತವಾಗಿ ರಾಜ್ಯಗಳ ವಿಂಗಡಣೆ ಮಾಡಿದ್ದು, ಇದೇ ಕಾರಣದಿಂದ ಎಂದು ಅವರು ಹೇಳಿದರು.
ಓದಿ:ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಮಾಡ್ಯೂಲರ್ ಐಸಿಯು ಲೋಕಾರ್ಪಣೆ : ಇದು ದೇಶದಲ್ಲೇ ಮೊದಲು
ಭಾರತೀಯ ಭಾಷೆಗಳ ಮಧ್ಯೆ ಹೆಚ್ಚೆಚ್ಚು ಸಮನ್ವಯತೆ ಸಾಧಿಸಲು ಹಾಗೂ ಭಾರತೀಯರ ಮಾತೃಭಾಷೆಗಳ ಮಹತ್ವವನ್ನು ಹೆಚ್ಚಿಸುವ ಉದ್ದೇಶದಿಂದ ಈ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿರುವುದು ಶ್ಲಾಘನೀಯವಾಗಿದೆ. ಇದಕ್ಕಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಮತ್ತು ಅವರ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆ ತಿಳಿಸುತ್ತೇನೆ ಎಂದು ಸದಾನಂದ ಗೌಡ ಹೇಳಿದರು.