ಬೆಂಗಳೂರು: ''ಕಾಂಗ್ರೆಸ್ಸಿನ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ಸಚಿವರಿಗೆ ಸುಳ್ಳು ಹೇಳುವುದು ಮತ್ತು ತುಷ್ಟೀಕರಣದ ರಾಜಕೀಯ ಅತ್ಯಂತ ಸಹಜವಾಗಿದೆ. ಅದಕ್ಕಾಗಿಯೇ ಕೇಂದ್ರದಿಂದ ಬರಬೇಕಾದ ಅನುದಾನದ ವಿಚಾರದಲ್ಲಿಯೂ ತಪ್ಪು ಮಾಹಿತಿಯನ್ನೇ ನೀಡಿ ಜನತೆಯ ಹಾದಿ ತಪ್ಪಿಸುತ್ತಿದ್ದಾರೆ'' ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟೀಕಿಸಿದರು.
ಬೆಂಗಳೂರಿನ ಹೋಟೆಲ್ ರಮಾಡದಲ್ಲಿ ಇಂದು (ಸೋಮವಾರ) ನಡೆದ ಬಿಜೆಪಿ ಲೋಕಸಭಾ ಚುನಾವಣಾ ಯೋಜನಾ ಸಭೆಯಲ್ಲಿ ಪಾಲ್ಗೊಂಡಿದ್ದ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು. ''ಕಾಂಗ್ರೆಸ್ಸಿನ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ಸಚಿವರಿಗೆ ಸುಳ್ಳು ಹೇಳುವುದು ಹಾಗೂ ತುಷ್ಟೀಕರಣದ ರಾಜಕೀಯ ಸಹಜವಾಗಿದೆ. ರಾಜ್ಯ ಸರ್ಕಾರ ಒಂದು ಕೆಜಿ ಅಕ್ಕಿಯನ್ನೂ ಕೊಟ್ಟಿಲ್ಲ. ಸರಿಯಾಗಿ ಹಣವನ್ನೂ ಕೊಡುತ್ತಿಲ್ಲ. ಕೇಂದ್ರ ಸರಕಾರ ಕೊಡುವ ಅಕ್ಕಿ ವಿಚಾರದಲ್ಲಿ ಸುಳ್ಳು ಹೇಳಿಕೆ ಕೊಡುತ್ತಿದ್ದಾರೆ'' ಎಂದು ದೂರಿದರು. ''ಹುಬ್ಬಳ್ಳಿ ಘಟನೆಗೆ ಸಂಬಂಧಿಸಿ ಮುಖ್ಯಮಂತ್ರಿಯವರು ಈವರೆಗೂ ಬೋಗಸ್ ಸ್ಟೇಟ್‍ಮೆಂಟ್ ಮುಂದುವರೆಸಿದ್ದಾರೆ. ಎಲ್ಲ ಕೇಸುಗಳೂ ಖುಲಾಸೆಯಾಗಿವೆ'' ಎಂದು ವಿವರಿಸಿದರು.
''ತೆರಿಗೆ ಹಂಚಿಕೆಯಡಿ ಯುಪಿಎ 10 ವರ್ಷದಲ್ಲಿ 81,795 ಸಾವಿರ ಕೋಟಿ ರೂ. ಕೊಟ್ಟಿತ್ತು. ಒಂಬತ್ತೂವರೆ ವರ್ಷಗಳ ಮೋದಿಯವರ- ಎನ್‍ಡಿಎ ಕಾಲಾವಧಿಯಲ್ಲಿ ಸುಮಾರು 2,80,130 ಸಾವಿರ ಕೋಟಿ ರೂಪಾಯಿ ಕೊಡಲಾಗಿದೆ. ಇದು 240 ಶೇಕಡಾ ಹೆಚ್ಚು. ಅನುದಾನ ಹಂಚಿಕೆಯಡಿ (ಗ್ರಾಂಟ್ ಇನ್ ಏಡ್) 2004- 14ರ ನಡುವಿನ ಯುಪಿಎ ಅವಧಿಯಲ್ಲಿ 60,779 ಕೋಟಿ ರೂಪಾಯಿ ಕೊಟ್ಟಿದ್ದರೆ, 2014- 24ರ ನಡುವಿನ ಮೋದಿ ಅವರ ಕಾಲದಲ್ಲಿ 2,08,832 ಕೋಟಿ ರೂಪಾಯಿ ನೀಡಿದ್ದಾರೆ. ಇದು 244 ಶೇಕಡಾ ಜಾಸ್ತಿ'' ಎಂದು ಜೋಶಿ ತಿಳಿಸಿದರು.
''ಹಿಂದೆಯೂ ಸೆಂಟ್ರಲ್ ಸೇಲ್ಸ್ ಟ್ಯಾಕ್ಸ್ ಇತ್ತು. ಎಕ್ಸೈಸ್ ಡ್ಯೂಟಿ ಇತ್ತು. ಅದರಡಿ ಸಂಗ್ರಹವಾಗುತ್ತಿದ್ದ ಮೊತ್ತ ಮತ್ತು ಕರ್ನಾಟಕಕ್ಕೆ ಎಷ್ಟು ಬರುತ್ತಿತ್ತು ಎಂದು ಸಿದ್ದರಾಮಯ್ಯನವರು ತಿಳಿಸಲಿ'' ಎಂದು ಸವಾಲೆಸೆದರು. ''ನಾವು ಎಷ್ಟು ಹಣವನ್ನು ಮನೆಗಳಿಗೆ ಕೊಟ್ಟಿದ್ದೇವೆ? ನೀರಾವರಿಗೆ ಕೊಟ್ಟ ಹಣವೆಷ್ಟು ಎಂಬುದನ್ನು ಕೊಡುತ್ತೇವೆ. ನೀವೂ ವಿವರ ಕೊಡಿ'' ಎಂದು ಆಗ್ರಹಿಸಿದರು. ''ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಅವರು ಸುಳ್ಳಿನ ಸ್ಪರ್ಧೆಯಲ್ಲಿದ್ದಾರೆ'' ಎಂದು ವ್ಯಂಗ್ಯವಾಡಿದರು.
''ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆಯ ಆರೋಪಿಗಳು ಅಮಾಯಕರು. ಹುಬ್ಬಳ್ಳಿ ಗಲಭೆ ಸ್ವಲ್ಪ ಮುಂದುವರೆದಿದ್ದರೆ ಕಮೀಷನರ್ಗೆ ಚಪ್ಪಡಿ ಕಲ್ಲು ಹಾಕುತ್ತಿದ್ದರು. ಎಲ್ಲ ಕೇಸಿನಲ್ಲಿ ಖುಲಾಸೆ ಆದ ಆಟೋ ಓಡಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸುತ್ತಾರೆ. ಅದರ ಕುರಿತು 16 ಪ್ರಕರಣ ಬಾಕಿ ಇದೆ ಎಂದು ಸುಳ್ಳು ಹೇಳುತ್ತಾರೆ'' ಎಂದು ಜೋಶಿ ಆಕ್ಷೇಪ ವ್ಯಕ್ತಪಡಿಸಿದರು.
ಮಾಲ್ಡೀವ್ಸ್ನಲ್ಲಿ ಮೂವರು ಸಚಿವರ ವಜಾ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ''ಮೋದಿ ಅವರ ಕಾಲದಲ್ಲಿ ಭಾರತದ ಬಗ್ಗೆ ಅಭಿಮಾನ ಹೆಚ್ಚಾಗಿದೆ. ಭಾರತದ ಬಗ್ಗೆ ಅಸಡ್ಡೆಯನ್ನು ನಮ್ಮ ದೇಶ ಹಾಗೂ 140 ಕೋಟಿ ಜನರು ಸಹಿಸುವುದಿಲ್ಲ. ಭಾರತದ ಜನರ ಒಗ್ಗಟ್ಟಿನ ಪರಿಣಾಮದಿಂದ ಇದು ಸಾಧ್ಯವಾಗಿದೆ'' ಎಂದು ವಿವರಿಸಿದರು.
''ಶ್ರೀರಾಮ ಒಬ್ಬ ಕಾಲ್ಪನಿಕ ವ್ಯಕ್ತಿ ಎಂದಿದ್ದ ಕಾಂಗ್ರೆಸ್ಸಿಗರು ರಾಮಸೇತುವೆ ಕಾಲ್ಪನಿಕ ಎಂದಿದ್ದರು. ಅಯೋಧ್ಯೆಯಲ್ಲಿ ಅದೇ ಜಾಗದಲ್ಲಿ ಶ್ರೀರಾಮ ಹುಟ್ಟಿದ್ದ ಎಂಬ ಗ್ಯಾರಂಟಿ ಏನೆಂದು ಪ್ರಶ್ನಿಸಿದ್ದರು'' ಎಂದು ಹೇಳಿದರು.
ಇದನ್ನೂ ಓದಿ: ಲೋಕಸಭೆ ಚುನಾವಣೆಗೆ ಜೆಡಿಎಸ್ ತಯಾರಿ : ದೊಡ್ಡ ಆಲಹಳ್ಳಿಯಲ್ಲಿ ಬೆಳೆದ ಅಕ್ಕಿನಾ? : ಹೆಚ್ಡಿಕೆ