ಬೆಂಗಳೂರು: ಕರ್ನಾಟಕ ಸೇರಿದಂತೆ ಎಲ್ಲಾ ರಾಜ್ಯಗಳಲ್ಲಿಯೂ ಕೊರೊನಾ ಸೋಂಕಿತರಿಗೆ ನೀಡಲಾಗುವ ಹೈಡ್ರಾಕ್ಸಿಕ್ಲೋರೊಕ್ವಿನ್ ಮತ್ತು ಪ್ಯಾರಾಸಿಟಮೋಲ್ ಮುಂತಾದ ಔಷಧಿಗಳ ಸಾಕಷ್ಟು ದಾಸ್ತಾನಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ. ಸದಾನಂದ ಗೌಡ ಸ್ಪಷ್ಟಪಡಿಸಿದ್ದಾರೆ.
ಕೊರೊನಾವನ್ನು ಮಣಿಸಲು ರಾಜ್ಯ ಸರ್ಕಾರಗಳಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಎಲ್ಲಾ ರೀತಿಯ ನೆರವು ನೀಡುತ್ತಿದೆ. ಕೊರೊನಾ ವಿರುದ್ಧದ ಹೋರಾಟದ ವಿಚಾರವಾಗಿ ಕೇಂದ್ರ ಸರ್ಕಾರವು, ರಾಜ್ಯಾಡಳಿತದೊಂದಿಗೆ ಸತತ ಸಂಪರ್ಕದಲ್ಲಿದ್ದು ಇನ್ನೂ ಏನೆಲ್ಲಾ ಅಗತ್ಯವೂ ಅದನ್ನು ಮಾಡಲು ನಾವು ಸಿದ್ಧರಿದ್ದೇವೆ ಎಂದು ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ.
ಔಷಧ ಉದ್ಯಮ ನನ್ನ ಇಲಾಖೆಯ ಅಧೀನದಲ್ಲಿಯೇ ಬರುತ್ತದೆ. ಹಾಗಾಗಿ ನಾನು ಪ್ರತಿದಿನ ಖುದ್ದಾಗಿ ಔಷಧ ಉತ್ಪಾದನೆ ಹಾಗೂ ವಿತರಣೆ ಹೇಗಾಗುತ್ತಿದೆ ಎಂದು ಪರಿಶೀಲಿಸುತ್ತಿದ್ದೇನೆ. ಈ ವಿಚಾರದಲ್ಲಿ ಸದಾ ನಿಗಾ ಇಡಲಾಗುತ್ತಿದೆ. ಎಲ್ಲಾ ರಾಜ್ಯಗಳಲ್ಲೂ ಹೈಡ್ರಾಕ್ಸಿಕ್ಲೋರೊಕ್ವಿನ್, ಪ್ಯಾರಾಸಿಟಮೋಲ್ ಮುಂತಾದ ಔಷಧಗಳ ಸಾಕಷ್ಟು ದಾಸ್ತಾನಿದ್ದು, ದೇಶಾದ್ಯಂತ ಇರುವ ನಮ್ಮ ಇಲಾಖೆಯ ಜನೌಷಧಿ ಕೇಂದ್ರಗಳಲ್ಲಿಯೂ ಸಾಕಷ್ಟು ಪ್ರಮಾಣದಲ್ಲಿ ಜೀವರಕ್ಷಕ ಔಷಧಿಗಳು ಲಭ್ಯವಿದೆ. ಕರ್ನಾಟಕ ಒಂದರಲ್ಲಿಯೇ 600ಕ್ಕೂ ಹೆಚ್ಚು ಜನೌಷಧ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ ಎಂದು ಮಾಹಿತಿ ನೀಡಿದರು.
ಔಷಧಗಳ ಕೊರತೆ, ಕಾಳಸಂತೆಯಂತಹ ಏನಾದರೂ ದೂರುಗಳಿದ್ದರೆ ನಮ್ಮ ಜನೌಷಧ ಸಹಾಯವಾಣಿ 18001808080 ಅಥವಾ ಎನ್‌ಪಿಪಿಎ ಸಹಾಯವಾಣಿ ಸಂಖ್ಯೆ 18001112550/ 011-23345118/ 011-23345122 ಗೆ ಕರೆ ಮಾಡಬಹುದು ಅಥವಾ ಖುದ್ದಾಗಿ ನನ್ನ ಗಮನಕ್ಕೂ ತರಬಹುದು. ಏನೇ ಸಮಸ್ಯೆ ಇದ್ದರೂ ಅದನ್ನು ಇತ್ಯರ್ಥಪಡಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಸರ್ಕಾರಿ ಅಥವಾ ಖಾಸಗಿ ಸಂಸ್ಥೆಗಳು ತುರ್ತು ಔಷಧ, ವೈದ್ಯಕೀಯ ಉಪಕರಣಗಳ ಆಮದು ಮಾಡಿಕೊಳ್ಳುವ ವಿಚಾರವಾಗಿ ತೊಡಕುಗಳಿದ್ದರೆ, ನಮ್ಮ ಇಲಾಖೆಯ ಅಥವಾ ನನ್ನ ಗಮನಕ್ಕೆ ತರಬಹುದು. ಅಗತ್ಯ ಅನುಮತಿಯನ್ನು ಸ್ವಲ್ಪವೂ ವಿಳಂಬವಿಲ್ಲದೆ ದೊರಕಿಸಿಕೊಡಲಾಗುವುದು ಎಂದು ಅಭಯ ನೀಡಿದ್ದಾರೆ.
ಇದುವರೆಗೂ ಕಂಡು ಕೇಳರಿಯದ ಕೊರೊನಾ ರೋಗವು ಜಗತ್ತಿನ ಆರೋಗ್ಯ, ಆರ್ಥಿಕ ವ್ಯವಸ್ಥೆಯನ್ನು ಬುಡಮೇಲು ಮಾಡಿದೆ. ನಾವೆಲ್ಲಾ ಒಟ್ಟಾಗಿ ಸಂಘಟಿತ ಪ್ರಯತ್ನ ಮಾಡಿದಾಗಲೇ ಇದನ್ನು ಮಣಿಸಲು ಸಾಧ್ಯ. ಸಾರ್ವಜನಿಕರೂ ಈ ಹೋರಾಟದಲ್ಲಿ ಕೈಜೋಡಿಸಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು, ವೈದ್ಯರು ಸೇರಿದಂತೆ ಕೊರೊನಾ ಯೋಧರ ಜೊತೆ ಎಲ್ಲ ರೀತಿಯಿಂದ ಸಹಕರಿಸಿ ಎಂದು ಕೇಂದ್ರ ಸಚಿವ ಸದಾನಂದ ಗೌಡರು ಮನವಿ ಮಾಡಿದ್ದಾರೆ.