ಬೆಂಗಳೂರು: ಕೊರೊನಾ ಎನ್ನುವುದು ಒಂದು ರೀತಿಯಲ್ಲಿ ಜೈವಿಕ ಯುದ್ಧ. ಬನ್ನಿ, ಎಲ್ಲರೂ ಒಟ್ಟಾಗಿ ಹೋರಾಡಿದರೆ ಈ ಮಹಾಮಾರಿಯನ್ನು ಮಣಿಸುವುದು ಕಷ್ಟದ ಕೆಲಸವಲ್ಲ ಎಂದು ಕೇಂದ್ರ ಸಚಿವ ಸಚಿವ ಸದಾನಂದಗೌಡ ಕರೆ ನೀಡಿದ್ದಾರೆ.
ಸರ್ಕಾರ, ಪಕ್ಷ, ಸಂಘ-ಸಂಸ್ಥೆಗಳ ವತಿಯಿಂದ ದೊಡ್ಡ ಪ್ರಮಾಣದಲ್ಲಿ ಊಟ, ದಿನಸಿಗಳನ್ನು ಹಂಚಲಾಗುತ್ತಿದೆ. ನಮ್ಮ ಸದಾಸ್ಮಿತ ಪ್ರತಿಷ್ಠಾನದ ವತಿಯಿಂದಲೂ ದಿನಸಿ ಹಂಚುತ್ತಿದ್ದೇವೆ. ಆದರೆ ನಾವು ಮೊದಲ ಸಾಲಿನಲ್ಲಿ ನಿಂತು ಜನರ ಜೀವ ರಕ್ಷಣೆಗಾಗಿ ಹೋರಾಡುತ್ತಿರುವ ಕೊರೊನಾ ಯೋಧರ ಆರೋಗ್ಯ ರಕ್ಷಣೆಗೆ ಹೆಚ್ಚು ಗಮನಹರಿಸಿದ್ದೇವೆ ಎಂದು ಪ್ರತಿಷ್ಠಾನದ ಮಹಾಪೋಷಕರೂ ಆಗಿರುವ ಸಚಿವ ಸದಾನಂದಗೌಡ ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ.
ವೈದ್ಯರು, ಶುಶ್ರೂಷಕರು ಸೋಂಕು ಪೀಡಿತರ ನೇರ ಸಂಪರ್ಕಕ್ಕೆ ಬರುತ್ತಾರೆ. ಅವರಿಗೂ ಸೋಂಕು ತಗಲುವ ಸಾಧ್ಯತೆ ತುಂಬಾನೇ ಜಾಸ್ತಿಯಿರುತ್ತದೆ. ಅವರಲ್ಲಿ ಅನೇಕ ಜನ ತಮ್ಮ ಮನೆಗೂ ಹೋಗದೆ ಕರ್ತವ್ಯ ನಿರ್ವಹಿಸುತ್ತಾರೆ. ಅಂತಹ ಜನರ ಆರೋಗ್ಯ ಕಾಪಾಡುವುದು ನಮ್ಮೆಲ್ಲರ ಕರ್ತವ್ಯ. ಹಾಗಾಗಿ ಪ್ರತಿಷ್ಠಾನದ ವತಿಯಿಂದ ನಮ್ಮ ಕೈಲಾದಷ್ಟು ಪಿಪಿಇ ಕಿಟ್ಗಳು, ಎನ್-95 ಮಾದರಿ ಮಾಸ್ಕ್‌ಗಳನ್ನು ಒದಗಿಸುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಎಷ್ಟು ಸೋಂಕು ನಿರೋಧಕ ತೊಡುಗೆಗಳು ಇದ್ದರೂ ಕಡಿಮೆಯೇ ಎಂದರು.
ಈ ಸಂದರ್ಭದಲ್ಲಿ ಪೊಲೀಸರಿಗೆ ಕಾನೂನು ವ್ಯವಸ್ಥೆ ಕಾಪಾಡುವುದು ಒಂದು ದೊಡ್ಡ ಸವಾಲು. ಒಂದೆಲ್ಲಾ ಒಂದು ಕಾರಣದಿಂದ ಬೀದಿಗಿಳಿಯುವ ಜನರನ್ನು ನಿಯಂತ್ರಿಸುವುದು ಕಷ್ಟ. ಯಾರಿಗೆ ಸೋಂಕು ಇದೆಯೋ ಇಲ್ಲವೋ ಎಂಬುದು ತಿಳಿಯುವುದಿಲ್ಲ. ಆಸ್ಪತ್ರೆಯಲ್ಲಿ, ಪ್ರತ್ಯೇಕ ಕ್ವಾರಂಟೈನ್ ವಾರ್ಡುಗಳಲ್ಲಿ ಶಾಂತಿ-ಸುವ್ಯವಸ್ಥೆ ಜವಾಬ್ಧಾರಿಯೂ ಪೊಲೀಸರದೇ. ಪೊಲೀಸರಿಗೂ ಕೊರೊನಾ ಸೋಂಕು ತಗುಲಿರುವ ಸಾಕಷ್ಟು ಉದಾಹರಣೆಗಳಿವೆ. ಅದಕ್ಕಾಗಿ ಅವರಿಗೆ ಎನ್-95 ಮಾದರಿ ಮಾಸ್ಕ್‌ಗಳು, ಸ್ಯಾನಿಟೈಸರ್ ಒದಗಿಸುತ್ತಿದ್ದೇವೆ ಎಂದಿದ್ದಾರೆ.
ಇನ್ನು ಮನೆ ಮನೆಗೆ ಸರ್ವೆ ನಡೆಸಲು ತೆರಳುವ ಆಶಾ ಕಾರ್ಯಕರ್ತೆಯರು, ಮನೆ ಮನೆ ಬಾಗಿಲಿಗೆ ಹಾಲು ಹಾಕುವವರು, ಗ್ಯಾಸ್ ಸಿಲಿಂಡರ್ ಡೆಲಿವರಿ ಹುಡುಗರು, ಸ್ವಚ್ಛತಾ ಸಿಬ್ಬಂದಿ, ಸ್ಥಳದಲ್ಲಿದ್ದು ವರದಿ ಮಾಡುವ ಮಾಧ್ಯಮ ಮಿತ್ರರೂ ಸಾಕಷ್ಟು ರಿಸ್ಕ್ ತೆಗೆದುಕೊಂಡು ಕೆಲಸ ನಿರ್ವಹಿಸುತ್ತಾರೆ. ಅವರಿಗೆಲ್ಲ ಪ್ರತಿಷ್ಠಾನದ ವತಿಯಂದ ಎನ್-95 ಮಾದರಿಯ ಮಾಸ್ಕ್, ಸ್ಯಾನಿಟೈಸರ್ ಒದಗಿಸುತ್ತಿದ್ದೇವೆ. ಈ ಕಾರ್ಯ ಮುಂದುವರಿಯುತ್ತದೆ. ಅನೇಕ ಸಂಘ-ಸಂಸ್ಥೆಗಳು ಕೊರೊನಾ ವಿರುದ್ಧದ ಈ ಹೋರಾಟದಲ್ಲಿ ಕೈಜೋಡಿಸಿವೆ. ಹಾಗೆಯೇ ನಮ್ಮದೂ ಒಂದು ಅಳಿಲು ಸೇವೆ. ಇದೊಂದು ರೀತಿಯಲ್ಲಿ ಜೈವಿಕ ಯುದ್ಧ. ಎಲ್ಲರೂ ಒಟ್ಟಾಗಿ ಹೋರಾಡೋಣ ಎಂದಿದ್ದಾರೆ.