ಬೆಂಗಳೂರು: ನಾಳೆ ರಾಜ್ಯಾದ್ಯಂತ 889 ನೇ ವಿಶ್ವ ಬಸವ ಜಯಂತ್ಯೋತ್ಸವ ಮತ್ತು ನವೀಕೃತ ಅನುಭವ ಮಂಟಪ ಉದ್ಘಾಟನಾ ಕಾರ್ಯಕ್ರಮ ನಡೆಯುತ್ತಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ಬಾರಿಯ ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ವಿಶೇಷವಾಗಿದೆ.
ನಾಳೆ ಬೆಳಗ್ಗೆ 10 ಗಂಟೆಗೆ ಬಸವೇಶ್ವರ ವೃತ್ತದಲ್ಲಿರುವ ಬಸವ ಪುತ್ಥಳಿ ಆವರಣದಲ್ಲಿ ಬಸವ ಜಯಂತಿ ಕಾರ್ಯಕ್ರಮವನ್ನು ಬಸವ ಸಮಿತಿ ಆಯೋಜಿಸಿದೆ. ಅಶ್ವಾರೂಢ ಬಸವೇಶ್ವರರ ಪುತ್ಥಳಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾಲಾರ್ಪಣೆ ನೆರವೇರಿಸಿ ಬಸವ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಅನುಭವ ಮಂಟಪ ನವೀಕರಣಗೊಳಿಸಲಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನವೀಕೃತ ಅನುಭವ ಮಂಟಪದ ಉದ್ಘಾಟನಾ ಕಾರ್ಯ ನೆರವೇರಿಸಲಿದ್ದಾರೆ. ಬಸವ ಸಮಿತಿ ಸಂಸ್ಥಾಪಕ ಅಧ್ಯಕ್ಷ ಮಾಜಿ ಉಪ ರಾಷ್ಟ್ರಪತಿ ಬಿ.ಡಿ ಜತ್ತಿ ಅವರ ಪ್ರತಿಮೆಯನ್ನು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅನಾವರಣಗೊಳಿಸಲಿದ್ದಾರೆ.
ಕಲ್ಯಾಣದಲ್ಲಿರುವ ಏಕೈಕ ಬಸವಣ್ಣನ ಸ್ಮಾರಕ ಸ್ವರೂಪದಲ್ಲಿ ಸ್ಥಾಪನೆ ಮಾಡಿರುವ ಪರುಷಕಟ್ಟೆಯನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಘಾಟನೆ ಮಾಡಲಿದ್ದಾರೆ. ಬಸವ ಸಮಿತಿಯ ವೆಬ್ ಸೈಟ್ ಅನ್ನು ಕೇಂದ್ರ ಸಚಿವ ಭಗವಂತ ಖೂಬಾ ಉದ್ಘಾಟನೆ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಡೋಗ್ರಿ,ಬಜ್ಜಿಕ,ಅರಾಬಿಕ್ ಭಾಷೆಗಳಲ್ಲಿ ಹಾಗೂ ವಚನ ಲೆಕ್ಸಿಕಾನ್ ( ವಚನ ಪರಿಭಾಷೆಯ ದ್ವಿಭಾಷಾ ನಿಘಂಟು) ಅನ್ನು ಲೋಕಾರ್ಪಣೆ ಮಾಡಲಾಗುತ್ತದೆ.
ಅನುಭವ ಮಂಟಪದಲ್ಲೇನಿದೆ?: ದಿನಾಂಕ 25-08-1979 ರಂದು ಅನುಭವ ಮಂಟಪ ಮತ್ತು ಗ್ರಂಥಾಲಯ ಕಟ್ಟಡದ ಪ್ರಾರಂಭೋತ್ಸವವನ್ನು ಅಂದಿನ ಉಪರಾಷ್ಟ್ರಪತಿಗಳಾಗಿದ್ದ ಡಾ. ಬಸಪ್ಪ ದಾನಪ್ಪ ಜತ್ತಿ, ಮುಖ್ಯಮಂತ್ರಿಯಾಗಿದ್ದ ಡಿ. ದೇವರಾಜ ಅರಸ್ ಅಧ್ಯಕ್ಷತೆಯಲ್ಲಿ ನೆರವೇರಿತ್ತು. ಅನುಭವ ಮಂಟಪವನ್ನು ಆಧುನಿಕ ತಂತ್ರಜ್ಞಾನವನ್ನಳವಡಿಸಿ 310 ಸುಸಜ್ಜಿತ ಆಸನದ ಹವಾನಿಯಂತ್ರಿತ ವ್ಯವಸ್ಥೆಯೊಂದಿಗೆ ಬಸವಜಯಂತಿ ದಿನವಾದ ನಾಳೆ ಲೋಕಾರ್ಪಣೆಗೊಳಿಸಲಾಗುತ್ತಿದೆ.
ಇದರೊಂದಿಗೆ ಬಸವಣ್ಣನವರ ಜೀವನದ ಹನ್ನೊಂದು ಮಹತ್ವದ ಉಬ್ಬು ಚಿತ್ರಗಳನ್ನು, ಸಂಸ್ಥಾಪಕಾಧ್ಯಕ್ಷ ಡಾ. ಬಿ.ಡಿ. ಜತ್ತಿಯವರ ಪ್ರತಿಮೆಯನ್ನು ಮತ್ತು ಪರುಷಕಟ್ಟೆಯಲ್ಲಿ ವಿಶ್ವಗುರು ಬಸವಣ್ಣನವರ ಪ್ರತಿಮೆಯನ್ನು ಸಹ ಪ್ರತಿಷ್ಠಾಪಿಸಲಾಗಿದೆ. ಇದರ ಜೊತೆ ಹಲವಾರು ಶಿವಯೋಗಿಗಳ ಪ್ರತಿಮೆಗಳೂ ಇರಲಿವೆ.
ಬಸವ ಜಯಂತಿ ಕುರಿತು ಈಟಿವಿ ಭಾರತಕ್ಕೆ ಮಾಹಿತಿ ನೀಡಿದ ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ, ಮುಂದಿನ ದಿನಗಳಲ್ಲಿ ಮೌಲ್ಯಾಧಾರಿತ ಶಿಕ್ಷಣ ಕ್ರಮವನ್ನು ಮಕ್ಕಳಿಗೆ ಪಠ್ಯಕ್ರಮದಲ್ಲಿ ಸೇರಿಸಬೇಕು ಎನ್ನುವ ಚರ್ಚೆ ನಡೆಯುತ್ತಿದೆ. ಬಸವ ತತ್ವಗಳಿಗೆ ವ್ಯಕ್ತಿತ್ವವಿಕಸನ ಮಾಡಬಹುದಾದ ಎನ್ನುವ ಶಕ್ತಿಯಿದೆ. ನಾವೆಲ್ಲ ಸರ್ಕಾರದ ಮೇಲೆ ಒತ್ತಾಯ ಹೇರಿ ಪಠ್ಯಕ್ರಮದಲ್ಲಿ ವಚನಸಾಹಿತ್ಯ ಅಳವಡಿಸಲು ಸೂಚಿಸಬೇಕಿದೆ ಎಂದು ಹೇಳಿದರು.