ಬೆಂಗಳೂರು: ವಿವಿಧತೆಯಲ್ಲಿ ಏಕರೂಪತೆ ಹೊಂದಿರುವ ಭಾರತದಲ್ಲಿ ಏಕರೂಪ ನಾಗರಿಕ ಸಂಹಿತೆಯ ಅಗತ್ಯವಿದೆ. ದೇಶದ ಸಮಸ್ತ ನಾಗರಿಕರಿಗೆ ಸಮಾನ ನ್ಯಾಯ ನೀಡಲು, ದೇಶದಲ್ಲಿ ಒಗ್ಗಟ್ಟು ಮೂಡಿಸಲು ಆದಷ್ಟು ಬೇಗ ಏಕರೂಪದ ನಾಗರಿಕ ಸಂಹಿತೆ ಜಾರಿಗೆ ತರುವ ಅಗತ್ಯವಿದೆ ಎಂದು ಮಾಜಿ ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು ಪ್ರತಿಪಾದಿಸಿದ್ದಾರೆ. ನಮ್ಮದು ಜಗತ್ತಿನ ಪುರಾತನ ನಾಗರಿಕ ದೇಶ. ನಾಗರಿಕತೆ ಬೆಳೆದಾಗ ಜಗತ್ತಿನ ಹಲವು ರಾಷ್ಟ್ರಗಳು ಹುಟ್ಟಿಯೇ ಇರಲಿಲ್ಲ ಎಂದು ತಿಳಿಸಿದರು.
ನಮ್ಮ ಪೂರ್ವಿಕರು ನಮಗೆ ಉತ್ತಮ ಜ್ಞಾನ ನೀಡಿದ್ದರು. ಆದರೆ ನಮ್ಮವರ ಒಳಜಗಳದ ಕಾರಣದಿಂದಾಗಿ ನಮ್ಮಲ್ಲಿ ಒಡಕುಗಳಾದವು, ಹೊರಗಿನವರು ಬಂದು ನಮ್ಮನ್ನು ಲೂಟಿ ಮಾಡಿದರು. ನಮ್ಮನ್ನು ಆಳ್ವಿಕೆ ಮಾಡಿದರು. ಮೆಕಾಲೆ ಕಾರಣದಿಂದ ನಾವು ನಮ್ಮ ಇತಿಹಾಸ ಓದಲಿಲ್ಲ. ನಮ್ಮ ಆಳ್ವಿಕೆಗಾರರೂ ಓದಲಿಲ್ಲ. ಅಲೆಕ್ಸಾಂಡರ್ ದಿ ಗ್ರೇಟ್ ಎನ್ನುತ್ತಾರೆ, ಆದರೆ ಆತ ಗ್ರೇಟ್ ಯಾರಿಗೆ? ನಮಗೆ ಚೆನ್ನಮ್ಮ ಗ್ರೇಟ್. ಹಾಗಾಗಿ ಅಂದು ಅತಿ ದೊಡ್ಡ ಲೋಪ. ಅದನ್ನು ಸರಿಪಡಿಸಬೇಕಿದೆ ಎಂದು ಹೇಳಿದರು.
ಈಗ ಭಾರತ ವಿಶ್ವಗುರುವಾಗಿ ಜಗತ್ತಿನಲ್ಲೇ ಗುರುತಿಸಿಕೊಂಡಿದೆ ಮತ್ತು ಗ್ರೇಟ್ ಎನಿಸಿಕೊಂಡಿದೆ. ಭಾರತೀಯರು ದೊಡ್ಡ ದೊಡ್ಡ ಬಹುರಾಷ್ಟ್ರೀಯ ಕಂಪನಿಗಳಲ್ಲಿದ್ದಾರೆ. ದೇಶದ ಪ್ರತಿಯೊಬ್ಬರಿಗೂ ಜ್ಞಾನವನ್ನು ಈ ಭೂಮಿ ನೀಡಿದೆ. ಕೌಶಲ್ಯವೇ ಇದಕ್ಕೆ ಕಾರಣ. ಈಗ ನೂತನ ಶಿಕ್ಷಣ ನೀತಿ ಹೊಸ ಆರಂಭವಾಗಿದೆ. ಎಲ್ಲ ರಾಜ್ಯಗಳು ಅಳವಡಿಸಿಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ನಾವೆಲ್ಲಾ ಭಾರತೀಯರು. ಒಂದು ದೇಶ ಒಂದು ನಾಗರಿಕ ಸಂಹಿತೆ ಅಗತ್ಯವಿದೆ. ಧರ್ಮಗಳಿಗೆಲ್ಲಾ ವೈಯಕ್ತಿಕ ಕಾನೂನು, ಧಾರ್ಮಿಕ ಆಚರಣೆ ಎಲ್ಲಾ ಇವೆ. ನಾಗರಿಕ ಸಂಹಿತೆ ಧಾರ್ಮಿಕ ಆಚರಣೆ ಇತ್ಯಾದಿಗಳಿಗೆ ಕಡಿವಾಣ ಹಾಕಲ್ಲ. ಆದರೆ ವಿಚ್ಚೇದನ, ಉತ್ತರದಾಯಿತ್ವ ಇತ್ಯಾದಿ ವಿಚಾರದಲ್ಲಿ ದೇಶದ ನಾಗರಿಕರನ್ನು ಸಮಾನವಾಗಿ ನೋಡಲು ಏಕರೂಪ ನಾಗರಿಕ ಸಂಹಿತೆ ಅಗತ್ಯವಿದೆ ಎಂದರು.
ಕಠಿಣ ಪರಿಶ್ರಮದಿಂದ ದೇಶವನ್ನು ಮುಂದಕ್ಕೆ ಕೊಂಡೊಯ್ಯಬೇಕಿದೆ. ದೇಶದ ಹಿತಾಸಕ್ತಿಗೆ ಪೂರಕವಾಗಿ ಮುನ್ನಡೆಯಬೇಕು. ಅಂಬೇಡ್ಕರ್ ಕೂಡ ಏಕರೂಪ ನಾಗರಿಕ ಸಂಹಿತೆ ಫ್ರೇಂ ಮಾಡಿದ್ದರು. ಅವರು ಗಂಡು ಹೆಣ್ಣಿಗೆ ಸಮಾನತೆ ನೀಡಿದ್ದರು.ಸಮಾನ ಸಂಹಿತೆ ಪರ ಇದ್ದರು.ಅದರಂತೆ ಏಕರೂಪ ನಾಗರಿಕ ಸಂಹಿತೆ ತಂದರೆ ಮದುವೆ, ವಿಚ್ಚೇದನ, ಆಸ್ತಿ ಹಕ್ಕು ವಿಚಾರದಲ್ಲಿ ಎಲ್ಲರಿಗೂ ಸಮಾನತೆ ಸಿಗಲಿದೆ ಎಂದು ತಿಳಿಸಿದರು.
ಒಬ್ಬ ಪುರುಷ ಓರ್ವ ಮಹಿಳೆಯನ್ನು ಮದುವೆಯಾಗಬೇಕು. ಅದೇ ರೀತಿ ವಿಚ್ಚೇದನಕ್ಕೆ ನಿಯಮಗಳಿರಲಿವೆ. ಬೇಕಾದಂತೆ ನಡೆದುಕೊಳ್ಳಲು ಸಾಧ್ಯವಿಲ್ಲ. ಅದೇ ರೀತಿ ಉತ್ತರಾಧಿಕಾರಿ ಆಸ್ತಿ ಹಕ್ಕು ವಿಚಾರದಲ್ಲಿಯೂ ಮಹಿಳೆಯರಿಗೆ ಪುರಷರ ಸರಿಸಮ ಹಕ್ಕು, ಸ್ವಾತಂತ್ರ್ಯ ಸಿಗಲಿದೆ. ಹಾಗಾಗಿ ಏಕರೂಪ ನಾಗರಿಕ ಸಂಹಿತೆಯ ಅಗತ್ಯತೆ ಇದೆ ಎಂದರು.
ಧಾರ್ಮಿಕ ಸಂಘಟನೆಗಳು, ರಾಜಕೀಯ ಪಕ್ಷಗಳು ದೇಶದ ಹಿತಾಸಕ್ತಿಗಾಗಿ ಏಕರೂಪ ನಾಗರಿಕ ಸಂಹಿತೆ ಪರವಾಗಿ ದನಿ ಎತ್ತಬೇಕು. ಏಕರೂಪ ನಾಗರಿಕ ಸಂಹಿತೆ ಎನ್ನುವುದು ಹಿಂದೂ ಸಿವಿಲ್ ಕೋಡ್, ಮುಸ್ಲಿಂ, ಸಿವಿಲ್ ಕೋಡ್, ಕ್ರಿಶ್ಚಿಯನ್ ಸಿವಿಲ್ ಕೋಡ್ ಅಲ್ಲ ಇದು ಕಾಮನ್ ಸಿವಿಲ್ ಕೋಡ್, ಎಲ್ಲರಿಗೂ ಒಂದೇ ಕಾನೂನು ಅನ್ವಯವಾಗಲಿದೆ ಹಾಗಾಗಿ ಎಲ್ಲರೂ ಈ ವಿಚಾರದಲ್ಲಿ ದನಿ ಎತ್ತಿ ಎಂದು ಮನವಿ ಮಾಡಿದರು.
ಸಮಾನ ನಾಗರಿಕ ಸಂಹಿತೆಯಿಂದ ಯಾರಿಗೂ ವಿನಾಯಿತಿ ನೀಡಲು ಸಾಧ್ಯವಿಲ್ಲ. ಒಬ್ಬರಿಗೆ ನೀಡಿದರೆ ಅಲ್ಲಸಂಖ್ಯಾತರಿಗೆ ವಿನಾಯಿತಿ ನೀಡಿ, ಜಮ್ಮು ಕಾಶ್ಮೀರಕ್ಕೆ, ಈಶಾನ್ಯ ರಾಜ್ಯಕ್ಕೆ ವಿನಾಯಿತಿ ನೀಡಿ ಎನ್ನುವ ಬೇಡಿಕೆ ಬರಲಿದೆ, ಸಂಹಿತೆಯ ಆಶಯಕ್ಕೆ ಧಕ್ಕೆಯಾಗಲಿದೆ, ಇದರಲ್ಲಿ ರಾಜಕೀಯ ಬೆರೆತುಹೋಗಲಿದೆ ಹಾಗಾಗಿ ಏಕರೂಪ ನಾಗರಿಕ ಸಂಹಿತೆಯಿಂದ ಯಾರನ್ನೂ ಹೊರಗಿಡಲು ಸಾಧ್ಯವಿಲ್ಲ ಎಂದರು.
ಮದರ್ ಟಂಗ್ ಫಸ್ಟ್, ಬ್ರದರ್ ಟಂಗ್ ನೆಕ್ಸ್ಟ್: ಮೊದಲು ಮಾತೃಭಾಷೆ ಕಲಿಕೆ ಅಗತ್ಯ, ನಂತರ ಇತರ ಭಾಷೆ ಕಲಿಸಿ, ನಾನು ಯಾವುದೇ ಭಾಷೆಯ ವಿರೋಧಿ ಅಲ್ಲ. ಆದರೆ ಮಕ್ಕಳು ಮಾತೃಭಾಷೆಯಲ್ಲೇ ಮೊದಲು ಕಲಿಕೆಯಬೇಕು, ನಾನು ಇಂಗ್ಲೀಷ್ ವಿರೋಧಿಯಲ್ಲ, ಮಾತೃಭಾಷೆ ದೃಷ್ಟಿ ಇದ್ದಂತೆ, ಇಂಗ್ಲೀಷ್ ಕನ್ನಡಕ ಇದ್ದಂತೆ, ಕಣ್ಣಿದ್ದರೆ ಕನ್ನಡಕ ಹಾಗೆಯೇ ಮಾತೃಭಾಷೆ ಇದ್ದಲ್ಲಿ ಮಾತ್ರ ಇಂಗ್ಲೀಷ್ ಹಾಗಾಗಿ ಮಾತೃಭಾಷೆಗೆ ಮೊದಲ ಆಧ್ಯತೆ ನೀಡಿ, ಮಕ್ಕಳು ವಿಷಯಗಳನ್ನು ಸರಿಯಾಗಿ ಗ್ರಹಿಸಲು ಮಾತೃಭಾಷೆಯಿಂದ ಮಾತ್ರ ಸಾಧ್ಯ ಎಂದು ಮಾತೃಭಾಷೆಯನ್ನು ವೆಂಕಯ್ಯನಾಯ್ಡು ಪ್ರತಿಪಾದಿಸಿದರು.
ಇದಕ್ಕೂ ಮೊದಲ ಮಾತನಾಡಿದ ಮಾಜಿ ಸಭಾಪತಿ ಡಿ.ಹೆಚ್.ಶಂಕರಮೂರ್ತಿ, ಭಾರತವನ್ನು ಇಂಡಿಯಾ ಎಂದೂ ಕರೆಯೋಣ ಎನ್ನುವ ನಿರ್ಧಾರವನ್ನು ಸ್ವಾತಂತ್ರ್ಯ ಬಂದ ವೇಳೆ ನಿರ್ಧರಿಸಲಾಯಿತು. ಆದರೆ ಇಂದಿನ ಕೆಲ ಬುದ್ದಿಗೇಡಿಗಳು ಭಾರತ ಎನ್ನುವುದಕ್ಕಿಂತ ಇಂಡಿಯಾ ಎನ್ನುವ ಹೆಸರೇ ಸರಿ ಎನ್ನುವ ಪ್ರತಿಪಾದನೆ ಮಾಡುತ್ತಿದ್ದಾರೆ. ಇಂತವರಿಗೆ ಏನನ್ನಬೇಕೋ ಗೊತ್ತಾಗುತ್ತಿಲ್ಲ ಎಂದು ಟೀಕಿಸಿದರು.
ಇದನ್ನೂಓದಿ: ವಾರಕ್ಕೆ 70 ತಾಸು ಕೆಲಸ: ಪರ-ವಿರೋಧ ಚರ್ಚೆ ಹುಟ್ಟು ಹಾಕಿದ ಇನ್ಫೊಸಿಸ್ ಮೂರ್ತಿ ಹೇಳಿಕೆ