ಬೆಂಗಳೂರು: ಸರ್ಕಾರದ ಮಿಷನ್-2022 ಅಂಗವಾಗಿ ನಗರಾಭಿವೃದ್ಧಿ ಇಲಾಖೆ 'ಏಕೀಕೃತ ಜನಸಂಪರ್ಕ ವೇದಿಕೆ' ಆ್ಯಪ್ ಸಿದ್ಧತೆಗೆ ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ಬಿಬಿಎಂಪಿ ಹೊಸ ಅಪ್ಲಿಕೇಶನ್ ಅಭಿವೃದ್ಧಿಪಡಿಸುತ್ತಿದೆ.
ನಗರದ ಸಾರ್ವಜನಿಕರ ಕುಂದು ಕೊರತೆ ಬಗ್ಗೆ ದೂರಲು ಹಾಗೂ ವಿವಿಧ ಸೇವೆಗಳನ್ನು ಪಡೆಯಲು ಒಂದೇ ವೇದಿಕೆಯಲ್ಲಿ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಪಾಲಿಕೆಯ ತಂತ್ರಜ್ಞಾನ ವಿಭಾಗ ಏಕೀಕೃತ ಜನಸಂಪರ್ಕ ವೇದಿಕೆ ಆ್ಯಪ್ ಸಿದ್ಧಪಡಿಸುತ್ತಿದೆ.
ಈಗಾಗಲೇ ಬಿಬಿಎಂಪಿಯ ರಸ್ತೆ ಗುಂಡಿ, ಕಸದ ಸಮಸ್ಯೆ, ಬೀದಿ ದೀಪ ಸಮಸ್ಯೆ ಸೇರಿದಂತೆ ಇತರ ದೂರು ಸಲ್ಲಿಸಲು ಸಹಾಯ 2.0 ಆ್ಯಪ್ ಇದೆ. ಆದರೆ ಇದೇ ಆ್ಯಪ್ ಬಳಸಿ ಬಿಬಿಎಂಪಿ ಸೇವೆಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಹೊಸ ಆ್ಯಪ್ ಮೂಲಕ ನೆಟ್ ಬ್ಯಾಂಕಿಂಗ್ ಮಾದರಿಯಲ್ಲಿ ಹೆಸರು ಹಾಗೂ ಪಾಸ್ವರ್ಡ್ ಸಿಗಲಿದೆ.
ಮೊದಲ ಹಂತದಲ್ಲಿ ಖಾತೆ, ಆಸ್ತಿ ತೆರಿಗೆ ಪಾವತಿ, ಜನನ ಹಾಗೂ ಮರಣ ಪತ್ರಗಳ ವಿತರಣೆ, ಉದ್ಯಮ ಪರವಾನಗಿ ನವೀಕರಣ, ವಿದ್ಯುತ್ ಚಿತಾಗಾರ ಮಾಹಿತಿ ನೀಡಲು ಸಿದ್ಧತೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಎಲ್ಲಾ ಸೇವೆಗಳನ್ನು ಸೇರ್ಪಡೆ ಮಾಡಲು ಪಾಲಿಕೆ ಸಿದ್ಧತೆ ನಡೆಸಿದೆ.