ಬೆಂಗಳೂರು: ರಾಜಧಾನಿಯಲ್ಲಿ ಮುಂಗಾರು ಮಳೆಯ ಆರ್ಭಟ ಜೋರಾಗಿದ್ದು, ನಗರದಾದ್ಯಂತ ಮಧ್ಯಾಹ್ನ ಸುಮಾರು 1 ಗಂಟೆಯಿಂದ ಭಾರಿ ಮಳೆ ಪ್ರಾರಂಭವಾಗಿದೆ. ವಸಂತನಗರ, ರಾಜಾಜಿನಗರ, ಮಲೇಶ್ವರಂ ಮುಂತಾದ ಪ್ರಮುಖ ಬಡಾವಣೆಗಳು ಜಲಾವೃತಗೊಂಡಿದೆ. ಪಾಲಿಕೆಯ ಅಪೂರ್ಣ, ಅವೈಜ್ಞಾನಿಕ ಕಾಮಗಾರಿಗಳಿಂದ ವಾಹನ ಸವಾರರು ಪರದಾಡಿದ್ದಾರೆ.
ಆರ್ ಆರ್ ನಗರ, ಬಿಟಿಎಂ ಲೇಔಟ್, ಬಸವನಗುಡಿ, ಯಶವಂತಪುರ, ಪೀಣ್ಯ, ಇಂದಿರಾನಗರದಲ್ಲಿ ಗಾಳಿ ಸಹಿತ ಮಳೆ ಅವಾಂತರ ಸೃಷ್ಟಿಸಿದೆ. ವರ್ಷಧಾರೆ ಹಲವು ಬಡಾವಣೆಗಳಲ್ಲಿ ಕೂಡ ವರದಿಯಾಗಿದೆ. ಮುಂಗಾರಿನ ಪ್ರಭಾವದಿಂದ ಕರಾವಳಿ ಜಿಲ್ಲೆಗಳಲ್ಲಿ ಕೂಡ ಹೆಚ್ಚಿನ ಮಳೆಯಾಗುತ್ತಿದ್ದು, ರಾಜ್ಯದ ಬಹುತೇಕ ಎಲ್ಲ ಭಾಗಗಳಲ್ಲಿಯೂ ಗುಡುಗು ಸಹಿತ ಮಳೆಯಾಗಲಿದೆ. ರಾಜಧಾನಿಯಲ್ಲಿ ಮಳೆ ಮುಂದುವರೆಯುವ ಮುನ್ಸೂಚನೆಯನ್ನು ಹವಾಮಾನ ಇಲಾಖೆಯ ಪ್ರಾದೇಶಿಕ ನಿರ್ದೇಶಕ ಸಿ.ಎಸ್ ಪಾಟೀಲ್ ಕೂಡ ನೀಡಿದ್ದಾರೆ.
ಕುಮಾರಕೃಪಾ ರೋಡ್, ಕಾವೇರಿ ಜಂಕ್ಷನ್, ವಿಲ್ಸನ್ ಮ್ಯಾನರ್, ಶೇಷಾದ್ರಿಪುರಂ ಸುತ್ತಮುತ್ತ ಭಾರಿ ಮಳೆಗೆ ವಾಹನ ಸವಾರರ ಪರದಾಟ ಕೂಡ ವರದಿಯಾಗಿದೆ. ಐಟಿಸಿ ವಿಲ್ಸನ್ ಮ್ಯಾನರ್ ಅಂಡರ್ ಪಾಸ್ನಲ್ಲಿ ನೀರು ತುಂಬಿದ ದೃಶ್ಯಗಳು ಕಂಡು ಬಂದಿದೆ. ನೀರು ತುಂಬಿದ ರಸ್ತೆಗಳಿಂದ ಸಂಜೆ ಹೊತ್ತಿನಲ್ಲಿ ವರುಣನ ಅರ್ಭಟಕ್ಕೆ ವಾಹನ ಸವಾರರು ಪರದಾಡಿದ್ದಾರೆ.