ಬೆಂಗಳೂರು: ವೀರಪ್ಪ ಮೊಯ್ಲಿಯವರು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಲ್ಯಾಣಕ್ಕಾಗಿ ಹಲವು ಅಭಿವೃದ್ಧಿ ಯೋಜನೆಗಳನ್ನು ರೂಪಿಸಿದ್ದಾರೆ. ಅವರು ರೂಪಿಸಿರುವ ಈ ಕಾರ್ಯಕ್ರಮಗಳನ್ನು ಮತದಾರರಿಗೆ ಮನವರಿಕೆ ಮಾಡಿಕೊಡುವ ಮೂಲಕ ಪ್ರತಿ ಕಾಲೋನಿಗಳಿಗೆ ತೆರಳಿ ಮತಯಾಚನೆ ಮಾಡಬೇಕೆಂದು ಹರ್ಷ ಮೊಯ್ಲಿ ಮನವಿ ಮಾಡಿದರು.
ಯಲಹಂಕ ಉಪನಗರದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಆಯೋಜಿಸಿದ್ದ ಪರಿಶಿಷ್ಟ ಜಾತಿ-ಪಂಗಡಗಳ ಮುಖಂಡರು ಮತ್ತು ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಚುನಾವಣೆ ಸಮೀಪಿಸುತ್ತಿರುವ ಈ ಸಮಯದಲ್ಲಿ ಕಾರ್ಯಕರ್ತರು ಮತ್ತು ಮುಖಂಡರು ಬೂತ್ ಮಟ್ಟದಲ್ಲಿ ಪ್ರಚಾರದಲ್ಲಿ ತೊಡಗಿ ವೀರಪ್ಪ ಮೊಯ್ಲಿಯವರ ಪರ ಮತಯಾಚನೆ ಕಾರ್ಯ ಕೈಗೊಂಡಿದ್ದಾರೆ. ಅವರು ರೂಪಿಸಿರುವ ಜನಪರ ಕಾರ್ಯಗಳನ್ನು ಜನರಿಗೆ ತಿಳಿಸಬೇಕಿದೆ ಎಂದರು.
ಜೆಡಿಎಸ್ ಸಾಥ್:
ಯಲಹಂಕ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಮುಖಂಡರಾದ ಇ.ಕೃಷ್ಣಪ್ಪ, ಹನುಮಂತೇಗೌಡ ಸೇರಿದಂತೆ ಎಲ್ಲ ಮುಖಂಡರು ನಮ್ಮೊಂದಿಗೆ ಉತ್ತಮ ಸಮನ್ವಯ ಹೊಂದಿದ್ದು, ವೀರಪ್ಪ ಮೊಯ್ಲಿಯವರ ಪರವಾಗಿ ಮತಯಾಚನೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಮುಖಂಡರೂ ಸಹ ಹೆಚ್ಚು ಕಾಳಜಿ ವಹಿಸಿ ಪ್ರಚಾರದಲ್ಲಿ ತೊಡಗಿದ್ದಾರೆ ಎಂದು ತಿಳಿಸಿದರು.
ಎತ್ತಿನಹೊಳೆ ಯೋಜನೆ ವೀರಪ್ಪ ಮೊಯ್ಲಿಯವರ ಕನಸಿನ ಕೂಸು. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ ವ್ಯಾಪ್ತಿಯ ಪ್ರತಿ ಮನೆಗೆ ನೀರು ಒದಗಿಸಿ, ಪ್ರತಿ ಮನೆಯ ಯುವಕರಿಗೆ ಉದ್ಯೋಗ ಒದಗಿಸುವುದು ನಮ್ಮ ಧ್ಯೇಯವಾಗಿದೆ. ಈ ಬಾರಿ ವೀರಪ್ಪ ಮೊಯ್ಲಿಯವರು 1 ಲಕ್ಷಕ್ಕಿಂತ ಅಧಿಕ ಮತಗಳ ಅಂತರದಲ್ಲಿ ಆಯ್ಕೆಯಾಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.