ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತ ಜಾಹೀರಾತುಗಳನ್ನು ತೆರವುಗೊಳಿಸಲು ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ (ಕೆಓಪಿ) ಕಾಯ್ದೆ-1981ರ ಅನ್ವಯ ಯಾವ ಕ್ರಮ ಕೈಗೊಂಡಿದೆ ಎನ್ನುವುದರ ಬಗ್ಗೆ ವರದಿ ಸಲ್ಲಿಸಲು ಬಿಬಿಎಂಪಿಗೆ ಹೈಕೋರ್ಟ್ ಸೂಚಿಸಿದೆ.
ಅನಧಿಕೃತ ಜಾಹೀರಾತು ತೆರವುಗೊಳಿಸಲು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ಬುಧವಾರ ನಡೆಯಿತು. ಅರ್ಜಿದಾರರ ಪರ ವಾದಿಸಿದ ನ್ಯಾಯವಾದಿಗಳು ಸಾರ್ವಜನಿಕ ಸ್ಥಳಗಳಲ್ಲಿ ಕೆಎಂಸಿ ಕಾಯ್ದೆ-1976 ಮತ್ತು ಕೆಓಪಿ ಕಾಯ್ದೆ-1981ರ ಪ್ರಕಾರ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ಜಾಹೀರಾತುಗಳನ್ನು ಹಾಕಬಾರದು. ಆದರೆ ಕಾಯ್ದೆಯನ್ನು ಉಲ್ಲಂಘಿಸಿ ಜಾಹೀರಾತುಗಳನ್ನು ಹಾಕುತ್ತಿದ್ದಾರೆ. ಹಾಗೆ ಬೈಲಾ 2018ರ ಕರಡನ್ನು ಪರಿಷ್ಕರಿಸಿ ಜಾರಿಗೆ ತರಲಾಗುವುದು ಎಂದು ಬಿಬಿಎಂಪಿ ಹೇಳುತ್ತಲೇ ಇದೆ. ಇಲ್ಲಿಯವರೆಗೆ ಬೈಲಾವನ್ನು ಜಾರಿಗೆ ತಂದಿಲ್ಲ ಎಂಬುದನ್ನು ಹೈಕೋರ್ಟ್ ಗಮನಕ್ಕೆ ತಂದರು.
ಈ ವೇಳೆ ಜಾಹೀರಾತುದಾರರ ಪರ ವಾದಿಸಿದ ನ್ಯಾಯವಾದಿಗಳು ಬಿಬಿಎಂಪಿ 1 ವರ್ಷ ಜಾಹೀರಾತು ಅಳವಡಿಕೆಯನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಇದರಿಂದ ಜಾಹೀರಾತು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ 5 ಸಾವಿರ ಮಂದಿಗೆ ಉದ್ಯೋಗವಿಲ್ಲದಂತಾಗಿದೆ ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು ಕಾನೂನು ಏನು ಹೇಳುತ್ತದೆ ಎನ್ನುವುದರ ಮಾಹಿತಿ ನೀಡುವಂತೆ ತಿಳಿಸಿ ಜುಲೈ 23ಕ್ಕೆ ವಿಚಾರಣೆ ಮುಂದೂಡಿದೆ.