ಬೆಂಗಳೂರು: ವಿಕೃತಕಾಮಿ, ಸರಣಿ ಹಂತಕ ಉಮೇಶ್ ರೆಡ್ಡಿಗೆ ಕರ್ನಾಟಕ ಹೈಕೋರ್ಟ್ ಗಲ್ಲು ಶಿಕ್ಷೆ ಖಾಯಂಗೊಳಿಸಿದೆ. 2006ರಲ್ಲಿ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯನ್ನು ಕರ್ನಾಟಕ ಹೈಕೋರ್ಟ್ ಇದೀಗ ಖಾಯಂಗೊಳಿಸಿ ಮಹತ್ವದ ಆದೇಶ ನೀಡಿದೆ.
ಬೆಂಗಳೂರಿನಲ್ಲಿ ವಿಧವೆಯೋರ್ವರ ಮೇಲೆ ಅತ್ಯಾಚಾರವೆಸಗಿದ ಹಾಗೂ ಕೊಲೆಗೈದ ಪ್ರಕರಣದಲ್ಲಿ ಸೆಷನ್ಸ್ ಕೋರ್ಟ್ 2006ರಲ್ಲಿ ವಿಧಿಸಿರುವ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸುವಂತೆ ಕೋರಿ ಉಮೇಶ್ ರೆಡ್ಡಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ.ಅರವಿಂದ್ ಕುಮಾರ್ ಹಾಗೂ ನ್ಯಾ.ಪ್ರದೀಪ್ ಸಿಂಗ್ ಯೆರೂರ್ ಅವರಿದ್ದ ವಿಭಾಗೀಯ ಪೀಠ ವಜಾಗೊಳಿಸಿ, ಶಿಕ್ಷೆ ಖಾಯಂಗೊಳಿಸಿತು.
ಮೇಲ್ಮನವಿಗೆ ಕಾಲಾವಕಾಶ
ಇದೇ ವೇಳೆ ಅಪರಾಧಿ ಉಮೇಶ್ ರೆಡ್ಡಿ ಪರ ವಕೀಲ ಬಿ.ಎನ್.ಜಗದೀಶ್, ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಲು ಕಾಲಾವಕಾಶ ಕೋರಿದ್ದನ್ನು ಪರಿಗಣಿಸಿದ ಹೈಕೋರ್ಟ್, ಮೇಲ್ಮನವಿ ಸಲ್ಲಿಸಲು 6 ವಾರ ಕಾಲಾವಕಾಶ ನೀಡಿದೆ.
ಪ್ರಕರಣದ ಹಿನ್ನೆಲೆ
- ಬೆಂಗಳೂರಿನ ಪೀಣ್ಯಾದಲ್ಲಿ ವಿಧವೆ ಜಯಶ್ರೀ ಎಂಬುವರ ಮೇಲೆ 1998ರಲ್ಲಿ ಅತ್ಯಾಚಾರವೆಸಗಿ, ಕ್ರೂರವಾಗಿ ಹತ್ಯೆ ಮಾಡಿದ್ದ ಆರೋಪದಡಿ ನಗರದ ಸೆಷನ್ಸ್ ಕೋರ್ಟ್ 2006ರಲ್ಲಿ ಉಮೇಶ್ ರೆಡ್ಡಿಗೆ ಗಲ್ಲು ಶಿಕ್ಷೆ ವಿಧಿಸಿತ್ತು. ಈ ಆದೇಶ ಪ್ರಶ್ನಿಸಿ ಹೈಕೋರ್ಟ್ಗೆ ಸಲ್ಲಿಸಿದ್ದ ಅರ್ಜಿ ವಜಾಗೊಂಡಿತ್ತು.
- ನಂತರ ಸುಪ್ರೀಂಕೋರ್ಟ್ಗೆ ಸಲ್ಲಿಸಿದ್ದ ಮೇಲ್ಮನವಿಯನ್ನೂ ವಜಾಗೊಳಿಸಿ, ಗಲ್ಲು ಶಿಕ್ಷೆಯನ್ನು ಎತ್ತಿ ಹಿಡಿಯಲಾಗಿತ್ತು.
- ಆ ಬಳಿಕ ಉಮೇಶ್ ರೆಡ್ಡಿ ಕ್ಷಮಾದಾನ ಕೋರಿ ರಾಷ್ಟ್ರಪತಿಗಳಿಗೆ ಮನವಿ ಮಾಡಿದ್ದ. ಅರ್ಜಿ ಪರಿಶೀಲಿಸಿದ್ದ ರಾಷ್ಟ್ರಪತಿಗಳು ಪ್ರಕರಣದ ಕ್ರೌರ್ಯತೆಯನ್ನು ಪರಿಗಣಿಸಿ ಕ್ಷಮಾದಾನ ಅರ್ಜಿಯನ್ನು 2013ರಲ್ಲಿ ತಿರಸ್ಕರಿಸಿದ್ದರು.
ಅನೇಕ ಕೃತ್ಯಗಳಲ್ಲಿ ಭಾಗಿ
ಕರ್ನಾಟಕ ಮಾತ್ರವಲ್ಲ, ದೇಶದ ಹಲವು ಭಾಗಗಳಲ್ಲಿ ಉಮೇಶ್ ರೆಡ್ಡಿ ಹೀನ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ.
1997ರಲ್ಲಿ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡುವಾಗ ಪರಾರಿ ಆಗಿದ್ದ. 1998ರಲ್ಲಿ ಬೆಂಗಳೂರಿನ ವಿಧವೆಯೊಬ್ಬರ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಆತನನ್ನು ಬಂಧಿಸಲಾಗಿತ್ತು. ಈ ಕೃತ್ಯದಲ್ಲಿ ಉಮೇಶ್ ರೆಡ್ಡಿಗೆ ಗಲ್ಲು ಶಿಕ್ಷೆ ವಿಧಿಸಬೇಕಿತ್ತಾದರೂ, ಮತ್ತೆ ತನ್ನ ಶಿಕ್ಷೆ ಪ್ರಮಾಣವನ್ನು ಕಡಿತ ಮಾಡುವಂತೆ ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದ. ನನ್ನನ್ನು 10 ವರ್ಷಗಳ ಕಾಲ ಜೈಲಿನಲ್ಲಿ ಒಂಟಿಯಾಗಿ ಇಡಲಾಗಿದೆ. ಇದರಿಂದ ಮಾನಸಿಕವಾಗಿ ಸಾಕಷ್ಟು ಹಿಂಸೆ ಅನುಭವಿಸಿದ್ದೇನೆ. ಕ್ಷಮಾದಾನ ಅರ್ಜಿ ಪರಿಗಣಿಸಲೂ ವಿಳಂಬವಾಗಿದೆ. ಹೀಗಾಗಿ ತನಗೆ ವಿಧಿಸಿರುವ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸುವಂತೆ ಕೋರಿದ್ದ. ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ, ರಾಷ್ಟ್ರಪತಿಗಳು ಕ್ಷಮಾದಾನ ಅರ್ಜಿಯನ್ನು ವಿಳಂಬ ಮಾಡಿಲ್ಲ. ಹೀಗಾಗಿ ಮನವಿಯನ್ನು ಪರಿಗಣಿಸಲಾಗದು ಎಂದು ತಿಳಿಸಿ, ಗಲ್ಲುಶಿಕ್ಷೆಯನ್ನು ಖಾಯಂಗೊಳಿಸಿ ಆದೇಶಿಸಿದೆ.
ಈ ಸಂಬಂಧ ಮೇಲ್ಮನವಿ ಸಲ್ಲಿಕೆಗೆ ಮಾಡಿದ ಮನವಿ ಪರಿಗಣಿಸಿ 6 ವಾರ ಕಾಲಾವಕಾಶ ನೀಡಿದೆ. ಪ್ರಸ್ತುತ ಅಪರಾಧಿ ಉಮೇಶ್ ರೆಡ್ಡಿ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದಾನೆ.