ಬೆಂಗಳೂರು: ಶಾಸಕರ ಜೊತೆ ಊಟ ಮಾಡಿದ್ದು ನಿಜ. ಆದರೆ ಯಾವುದೇ ರೀತಿಯ ಬಂಡಾಯ ಚಟುವಟಿಕೆ ನಡೆಸಿಲ್ಲ. ಇಂತಹ ಸಮಯದಲ್ಲಿ ಅಂತಹ ಕೆಲಸ ಮಾಡಲ್ಲ. ನಮಗೂ ಜವಾಬ್ದಾರಿ ಇದೆ ಎಂದು ಶಾಸಕ ಉಮೇಶ್ ಕತ್ತಿ ಸ್ಪಷ್ಟಪಡಿಸಿದ್ದಾರೆ.
ವೀಡಿಯೋ ಸಂದೇಶ ಬಿಡುಗಡೆ ಮಾಡಿರುವ ಕತ್ತಿ:
ಬೆಂಗಳೂರಿನಲ್ಲಿ ಉತ್ತರ ಕರ್ನಾಟಕ ಭಾಗದ ಶಾಸಕರಿಗೆ ಊಟದ ಸಮಸ್ಯೆ ಕಾಡುತ್ತಿದೆ. ಹಾಹಾಗಿ ನಾವೆಲ್ಲಾ ಊಟಕ್ಕೆ ಸೇರಿದ್ದೆವು. ಕಳೆದ ಗುರುವಾರವೂ ಸೇರಿದ್ದೆವು. ನಿನ್ನೆಯೂ ಸೇರಿದ್ದೆವು ಎಂದು ಶಾಸಕರು ಒಂದೆಡೆ ಸೇರಿದ್ದನ್ನು ಒಪ್ಪಿಕೊಂಡಿದ್ದಾರೆ.
ಎರಡು ದಿನದ ಹಿಂದೆ ಸಿಎಂ ಭೇಟಿಯಾಗಿ ರಾಜ್ಯಸಭೆ ಟಿಕೆಟ್ ಕುರಿತು ಚರ್ಚೆ ನಡೆಸಿದ್ದೇನೆ. ಈ ವೇಳೆ ಸಿಎಂ ಶಾಸಕರನ್ನು ಊಟಕ್ಕೆ ಕರೆದಿರುವುದರ ಬಗ್ಗೆ ಕೇಳಿದ್ದರು. ಹೌದು ಎಂದಿದ್ದೆ. ಸಿಎಂಗೆ ಕೂಡ ನಮ್ಮ ಭೋಜನ ಕೂಟದ ಮಾಹಿತಿ ಇತ್ತು. ಸಿಎಂಗೆ ಕೂಡ ಆಹ್ವಾನ ನೀಡಿದ್ದೆ. ಆದರೆ ಅವರು ಬರಲಿಲ್ಲ, ನಾವಷ್ಟೇ ಸೇರಿದ್ದೆವು. ಅಲ್ಲಿ ಯಾವುದೇ ರೀತಿಯ ರಾಜಕೀಯ, ಬಂಡಾಯ ಚರ್ಚೆಯಾಗಿಲ್ಲ. ಮೂರು ತಿಂಗಳಿನಿಂದ ಭೇಟಿ ಮಾಡಿರಲಿಲ್ಲ. ಹಾಗಾಗಿ ಸಮಾಲೋಚನೆ ಮಾಡಿದ್ದೇವೆ ಅಷ್ಟೇ ಎಂದರು.
ಇತ್ತೀಚೆಗೆ ಸಿಎಂ ಭೇಟಿಯಾದ ವೇಳ ಟಿಕೆಟ್ ಬೇಡಿಕೆ ಇರಿಸಿದ್ದೆ. ಲೋಕಸಭೆ ಚುನಾವಣೆ ವೇಳೆ ನಿಡಿದ್ದ ಭರವಸೆಯಂತೆ ಪ್ರಸ್ತಾಪ ಮಾಡಿದ್ದೆ. ಟಿಕೆಟ್ ಫೈನಲ್ ಮಾಡುವುದು ಹೈಕಮಾಂಡ್ ಎಂಬುದು ನಮಗೂ ಗೊತ್ತು. ಆದರೂ ರಾಜ್ಯದಿಂದ ಶಿಫಾರಸು ಇರಲಿ ಎಂದು ಮನವಿ ಮಾಡಿದ್ದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಭೇಟಿ ಮಾಡಬೇಕೆಂದಿದ್ದೇನೆ. ಅಷ್ಟರಲ್ಲಿ ಮಾಧ್ಯಮಗಳಲ್ಲಿ ಭೋಜನ ಕೂಟ, ಬಂಡಾಯ ಎಂಬಿತ್ಯಾದಿ ವರದಿ ಬಂದಿದೆ.
ನಾನು ಒಂಭತ್ತು ಬಾರಿ ಶಾಸಕನಾಗಿದ್ದೇನೆ. ಜವಾಬ್ದಾರಿಯುತ ಶಾಸಕನಾಗಿ ಕೊರೊನಾದಂತಹ ಸಂದರ್ಭದಲ್ಲಿ ರಾಜಕೀಯ, ಬಂಡಾಯ ಸಲ್ಲದು. ನಾನು ಅಂತಹ ಕೆಲಸ ಮಾಡಿಲ್ಲ. ಎಲ್ಲರೂ ಕುಳಿತು ಊಟ ಮಾಡಿದ್ದೇವೆ ಅಷ್ಟೇ ಎಂದು ಸ್ಪಷ್ಟನೆ ನೀಡಿದರು.