ಬೆಂಗಳೂರು: ಬೆಂಕಿ ಹಚ್ಚುವುದನ್ನು ಯಾವ ಧರ್ಮವೂ ಬೆಂಬಲಿಸುವುದಿಲ್ಲ ಎಂದು ಮಾಜಿ ಸಚಿವ, ಶಾಸಕ ಯು.ಟಿ.ಖಾದರ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಡಿ.ಜೆ.ಹಳ್ಳಿ ಘಟನೆ ಅತ್ಯಂತ ನೋವು ತಂದಿದೆ. ಬೆಂಕಿ ಹಚ್ಚುವುದನ್ನು ಯಾವ ಧರ್ಮವೂ ಬೆಂಬಲಿಸುವುದಿಲ್ಲ. ಶಾಂತಿ, ಸಹನೆ, ತಾಳ್ಮೆ ನಮ್ಮ ಪ್ರವಾದಿಗಳ ಸಂದೇಶ. ಸಾಮಾಜಿಕ ಜಾಲತಾಣ ವಿಷಕಾರಿ ಆಗಿದೆ. ಬೆಂಕಿ ಹಚ್ಚಿ ದಾಂಧಲೆ ಮಾಡುವುದು ಅಕ್ಷಮ್ಯ ಅಪರಾಧ. ಸರ್ಕಾರ ಈ ಬಗ್ಗೆ ಕೂಲಂಕಷವಾಗಿ ತನಿಖೆ ಮಾಡಬೇಕು. ತಪ್ಪು ಯಾರೇ ಮಾಡಿದರೂ ಅದು ತಪ್ಪು. ಎಲ್ಲಾ ಧರ್ಮದವರು ಇದನ್ನು ಖಂಡಿಸಿದ್ದಾರೆ. ಸರ್ಕಾರ ನಿಜವಾದ ಆರೋಪಿಗಳನ್ನ ಪತ್ತೆ ಹಚ್ಚಬೇಕು ಎಂದರು.
ಎಸ್‌ಡಿಪಿಐ ಮತ್ತು ಪಿಎಫ್ಐ ಸಂಘಟನೆಳ ನಿಷೇಧ ವಿಚಾರದ ಕರಿತು ಮಾತನಾಡಿ, ಯಾವ ಸಂಘಟನೆ ಕಾನೂನು ಕೈಗೆತ್ತಿಕೊಂಡು ಸಮಾಜದ ಸ್ವಾಸ್ಥ್ಯ ಕೆಡಿಸುತ್ತದೆಯೋ ಅಂತಹ ಸಂಘಟನೆಯನ್ನು ನಿಷೇಧ ಮಾಡಲಿ ಎಂದು ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆ ಕುರಿತು ಮಾತನಾಡಿ, ಅವರು ಪ್ರತಿಯೊಂದರಲ್ಲೂ ರಾಜಕಾರಣ ಮಾಡುತ್ತಾರೆ. ಈ ಘಟನೆಗೆ ಮಾಜಿ ಸಚಿವರು ಕಾರಣ ಎಂದು ಹೇಳಿದ್ದಾರೆ. ಆ ಸಚಿವರು ಯಾರೆಂದು ಅವರೇ ಬಹಿರಂಗಪಡಿಸಲಿ. ಬಿಜೆಪಿ ಪಕ್ಷವೇ ಎಸ್‌ಡಿಪಿಐ ಸಂಘಟನೆಗೆ ಗಾಡ್ ಫಾದರ್ ಎಂದು ದೂರಿದರು.