ಬೆಂಗಳೂರು: ನಾಯಿ ಕಚ್ಚಿದ್ದಕ್ಕೆ ದೂರು ನೀಡಿದ್ದನ್ನು ಸಹಿಸದ ಮಾಲೀಕ ದೂರುದಾರರ ಮನೆಯ ದ್ವಿಚಕ್ರ ವಾಹನಗಳಿಗೆ ಬೆಂಕಿಯಿಟ್ಟ ಆರೋಪ ಕೇಳಿ ಬಂದಿದೆ. ದೂರು ನೀಡಿದ ಜಿದ್ದಿಗೆ ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ನಾಯಿಯ ಮಾಲೀಕ ನಂಜುಂಡ ಬಾಬು ಅವರ ತಾಯಿ ಗೌರಮ್ಮ ವಿರುದ್ಧ ಪುಷ್ಪಾ ಎಂಬ ಮಹಿಳೆ ಕೊತ್ತನೂರು ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣದ ವಿವರ: ದೂರುದಾರೆ ಪುಷ್ಪಾ ಅವರಿಗೆ ನಾಯಿ ಕಚ್ಚಿದ್ದರಿಂದ ಅದರ ಮಾಲೀಕ ನಂಜುಂಡ ಬಾಬು ವಿರುದ್ಧ ಕೊತ್ತನೂರು ಠಾಣೆಗೆ ಅವರು ದೂರು ನೀಡಿದ್ದರು. ಮತ್ತೊಂದೆಡೆ ನಂಜುಂಡ ಬಾಬು ಅವರ ತಾಯಿಗೆ ಚೀಟಿ ಹಣವನ್ನು ಕೊಡಬೇಕಿದ್ದ ಪುಷ್ಪಾ, "ನಿಮ್ಮ ಮನೆಯ ನಾಯಿ ಕಚ್ಚಿದ್ದರಿಂದಲೇ ಆಸ್ಪತ್ರೆಗೆ ಹಣ ಖರ್ಚಾಗಿದೆ. ಆದ್ದರಿಂದ ನಂತರ ಹಣ ಕೊಡುವುದಾಗಿ" ಹೇಳಿದ್ದರು. ಅದೇ ಸಂದರ್ಭದಲ್ಲಿ ಬಂದಿದ್ದ ನಂಜುಂಡ ಬಾಬು "ದೂರು ಕೊಟ್ಟವರನ್ನು ಸುಮ್ಮನೆ ಬಿಡುವುದಿಲ್ಲ" ಎಂದು ಬೆದರಿಕೆ ಹಾಕಿದ್ದರು.
ಇದಾದ ಬಳಿಕ ಅಕ್ಟೋಬರ್ 23 ರಂದು ಪುಷ್ಪಾ ಅವರ ಮನೆಯ ಮುಂದೆ ನಿಲ್ಲಿಸಲಾಗಿದ್ದ, ಅವರ ಮಗನ ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚಲಾಗಿತ್ತು. ನಂಜುಂಡ ಬಾಬು ಮತ್ತವರ ಕುಟುಂಬದವರೇ ಬೆಂಕಿ ಹಚ್ಚಿದ್ದಾರೆ ಎಂದು ಆರೋಪಿಸಿರುವ ಪುಷ್ಪಾ ಅವರು ಕೊತ್ತನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಆಧಾರದ ಮೇರೆಗೆ ಆರೋಪಿ ನಂಜುಂಡ ಬಾಬುನನ್ನು ಬಂಧಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ರಾಯಚೂರು: ಜಲ ಜೀವನ್ ಮಿಷನ್ ಕಾಮಗಾರಿಗೆ ತಂದಿದ್ದ ಪೈಪ್ ಬಂಡಲ್‌ಗಳಿಗೆ ಬೆಂಕಿ
ಜಲಜೀವನ್ ಮಿಷನ್ ಪೈಪ್ಗಳಿಗೆ ಬೆಂಕಿ( ರಾಯಚೂರು): ಮತ್ತೊಂದು ಪ್ರಕರಣದಲ್ಲಿ, ಜಲಜೀವನ್ ಮಿಷನ್ ಯೋಜನೆಯ ಕಾಮಗಾರಿಗೆ ಎಂದು ತಂದು ಹಾಕಿದ್ದ ಪೈಪ್ಗಳ ರಾಶಿಗೆ ಬೆಂಕಿ ತಗುಲಿ ಹೊತ್ತಿ ಉರಿದ ಘಟನೆ ಇತ್ತೀಚೆಗೆ ರಾಯಚೂರಿನ ದೇವಸುಗೂರು ಗ್ರಾಮದಲ್ಲಿ ನಡೆದಿತ್ತು. ಬೆಂಕಿ ಹೊತ್ತಿಕೊಂಡಿದ್ದ ಬಗ್ಗೆ ಮಾಹಿತಿ ತಿಳಿದು, ತಕ್ಷಣವೇ ಸ್ಥಳಕ್ಕೆ ಆಗಮಿಸಿದ್ದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿ ಹತೋಟಿಗೆ ತಂದಿದ್ದರು.
ದೇವಸುಗೂರು ಗ್ರಾಮದಲ್ಲಿ ಜಲಜೀವನ್ ಮಿಷನ್ ಕಾಮಗಾರಿ ನಡೆಯುತ್ತಿದ್ದು, ಗ್ರಾಮ ಪಂಚಾಯಿತಿ ಕಚೇರಿ ಹಿಂದೆ ಖಾಲಿ ಜಾಗದಲ್ಲಿ ಕಾಮಗಾರಿಗೆ ಸಂಬಂಧಿಸಿದ ಪೈಪ್ಗಳನ್ನು ಗುತ್ತಿಗೆದಾರರು ತಂದು ಹಾಕಿದ್ದರು. ಬೆಂಕಿ ಹೊತ್ತಿ ಉರಿದ ಕಾರಣ ಭಾರೀ ಪ್ರಮಾಣದಲ್ಲಿ ಪೈಪ್ ನಾಶವಾಗಿತ್ತು ಎಂದು ಪಿಡಿಓ ತಿಳಿಸಿದ್ದರು. ಬೆಂಕಿಗೆ ಒಟ್ಟು 12 ಪೈಪ್ ಬಂಡಲ್ಗಳು ಸುಟ್ಟು ಕರಕಲಾಗಿತ್ತು. ಅಂದಾಜು 10 ಲಕ್ಷ ರೂಪಾಯಿ ನಷ್ಟವಾಗಿತ್ತು. ಸ್ಥಳಕ್ಕೆ ಭೇಟಿ ನೀಡಿದ್ದ ಶಕ್ತಿನಗರ ಪೊಲೀಸ್ ಠಾಣೆ ಪಿಎಸ್ಐ ಪರಿಶೀಲನೆ ನಡೆಸಿದ್ದರು.