ಬೆಂಗಳೂರು: ರಸ್ತೆ ಬದಿಯಲ್ಲಿ ಬ್ಯಾಗ್ ಮಾರಾಟ ಮಾಡುತ್ತಿದ್ದ ಉತ್ತರ ಭಾರತ ಮೂಲದ ವ್ಯಾಪಾರಿ ಮೇಲೆ ಹಲ್ಲೆ ನಡೆಸಿ, ಆತನ ಬಳಿಯಿದ್ದ ರೋಲ್ಡ್ ಗೋಲ್ಡ್ ಸರ ಹಾಗೂ ನಗದು ಕಸಿದುಕೊಂಡು ಪರಾರಿಯಾಗುತ್ತಿದ್ದ ಇಬ್ಬರು ಆರೋಪಿಗಳನ್ನು ಮಾಗಡಿ ರಸ್ತೆ ಸಂಚಾರ ಪೊಲೀಸರು ಬಂಧಿಸಿದ್ದಾರೆ. ಚಾಮುಂಡಿ ನಗರ ನಿವಾಸಿಗಳಾದ ವಿಜಯ್ ಮತ್ತು ಸೆಂಥಿಲ್ ಬಂಧಿತರು. ಇವರಿಬ್ಬರು ನೂರುಲ್ಲಾ ಎಂಬಾತನಿಂದ ಸರ ಹಾಗೂ ನಗದು ಕಳ್ಳತನ ಮಾಡಿ ಪರಾರಿಯಾಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ನೂರುಲ್ಲಾ ಮಂಗಳವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ರಾಜಾಜಿನಗರದ 6ನೇ ಬ್ಲಾಕ್‌ನಲ್ಲಿ ಬ್ಯಾಗ್ ಮಾರಾಟ ಮಾಡುತ್ತಿದ್ದ. ಇದೇ ವೇಳೆ ಆಟೋದಲ್ಲಿ ಬಂದ ಆರೋಪಿಗಳು ನೂರುಲ್ಲಾ ಮೇಲೆ ಹಲ್ಲೆ ನಡೆಸಿ ಆತನ ಕುತ್ತಿಗೆಯಲ್ಲಿದ್ದ ರೋಲ್ಡ್‌ಗೋಲ್ಡ್ ಸರ, ಬೆಳ್ಳಿಯ ಸರ ಹಾಗೂ 500 ರೂ. ನಗದನ್ನು ಕಿತ್ತುಕೊಂಡು ಆಟೋದಲ್ಲಿ ಪರಾರಿಯಾಗುತ್ತಿದ್ದರು. ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಕೂಗಳತೆ ದೂರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಾಗಡಿ ರಸ್ತೆ ಸಂಚಾರ ಠಾಣೆ ಎಎಸ್‌ಐ ರಾಮಚಂದ್ರ ಮತ್ತು ಮಹಿಳಾ ಪೊಲೀಸ್ ಕಾನ್‌ಸ್ಟೇಬಲ್ ಸಂಧ್ಯಾಗೆ ಮಾಹಿತಿ ನೀಡಿದ್ದರು. ಬಳಿಕ ಪೊಲೀಸರು ಆಟೋವನ್ನು ತಡೆದಿದ್ದರು.
ತಕ್ಷಣ ವಿಜಯ್, ತನ್ನ ಬಳಿಯಿದ್ದ ಸರಗಳನ್ನು ಸೆಂಥಿಲ್‌ಗೆ ನೀಡಿ ಪರಾರಿಯಾಗುವಂತೆ ಸೂಚಿಸಿದ್ದನು. ಕೂಡಲೇ ಕಾರ್ಯಪ್ರವೃತ್ತರಾದ ಕಾನ್‌ಸ್ಟೇಬಲ್ ಸಂಧ್ಯಾ, ಓಡಿ ಹೋಗುತ್ತಿದ್ದ ಸೆಂಥಿಲ್‌ನನ್ನು ಹಿಡಿದುಕೊಂಡರು. ನಂತರ ಸ್ಥಳೀಯರ ಸಹಾಯದಿಂದ ಇಬ್ಬರು ಆರೋಪಿಗಳನ್ನು ಮಾಗಡಿ ರಸ್ತೆ ಕಾನೂನು ಮತ್ತು ಸುವ್ಯವಸ್ಥೆ ಠಾಣೆಗೆ ಒಪ್ಪಿಸಿದ್ದರು. ಆರೋಪಿಗಳ ಪೈಕಿ ವಿಜಯ್ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ ಕಳವು, ಹಲ್ಲೆ, ದರೋಡೆ ಪ್ರಕರಣಗಳು ದಾಖಲಾಗಿದ್ದು, ರೌಡಿಶೀಟ್ ತೆರೆಯಲಾಗಿದೆ ಎಂಬುದು ಗೊತ್ತಾಗಿದೆ. ಪೊಲೀಸರ ಕರ್ತವ್ಯಪ್ರಜ್ಞೆಗೆ ನಗರ ಪೊಲೀಸ್ ಆಯಕ್ತ ಬಿ ದಯಾನಂದ ಶ್ಲಾಘಿಸಿ, ಪ್ರಶಂಸಿದ್ದಾರೆ.
ಇದನ್ನೂ ಓದಿ: ಮಂಗಳೂರು: ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ