ಬೆಂಗಳೂರು: ಕೆಲಸ ಮಾಡುತ್ತಿದ್ದ ಅಂಗಡಿಯಲ್ಲೇ ಪುರಾತನ ಕಾಲದ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಹಲಸೂರುಗೇಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನ ಮೂಲದ ಕೇತುರಾಮ್ ಮತ್ತು ಈತನ ಸ್ನೇಹಿತ ರಾಕೇಶ್ ಬಂಧಿತ ಆರೋಪಿಗಳು. ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ಶ್ಯಾಮ್‌ಗಾಗಿ ಶೋಧ ನಡೆಸಲಾಗಿದೆ.
ಆರೋಪಿಗಳಿಂದ 1.2 ಕೋಟಿ ರೂ. ಬೆಲೆ ಬಾಳುವ 1.624 ಕೆಜಿ ಚಿನ್ನ, 6.455 ಕೆಜಿ ಬೆಳ್ಳಿ ಹಾಗೂ 5.50 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ. ರಾಜಸ್ಥಾನ ಮೂಲದ ಮೂವರು ಆರೋಪಿಗಳು ಸಂಚು ರೂಪಿಸಿ ಅಕ್ಟೋಬರ್ 10 ರಂದು ನಗರತಪೇಟೆಯಲ್ಲಿರುವ ಕಾಂಚನಾ ಜ್ಯುವೆಲರ್ಸ್ ಅಂಗಡಿಯಲ್ಲಿದ್ದ ಪುರಾತನ ಚಿನ್ನ ಮತ್ತು ಚಿನ್ನದ ವಸ್ತುಗಳನ್ನು ಕಳ್ಳತನ ಮಾಡಿದ್ದರು. ಈ ಸಂಬಂಧ ಅಂಗಡಿ ಮಾಲೀಕ ಅರವಿಂದ್ ಕುಮಾರ್ ತಾಡೆ ಅವರು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ತಿಳಿಸಿದ್ದಾರೆ.
ಮಾಲೀಕರ ಕಣ್ತಪ್ಪಿಸಿ ಕೀ ಕಳ್ಳತನ: ಕೆಲಸಕ್ಕಾಗಿ ಅಲೆಯುತ್ತಿದ್ದ ಆರೋಪಿ ಕೇತರಾಮ್ನನ್ನು ಅಂಗಡಿ ಮಾಲೀಕರು ಒಂದು ತಿಂಗಳು ಹಿಂದೆ ಮನೆ ಮತ್ತು ಕ್ಲಿನಿಂಗ್ ಮಾಡುವ ಕೆಲಸಕ್ಕೆ ನೇಮಿಸಿಕೊಂಡಿದ್ದರು. ಮಾಲೀಕರು ರಾಜಸ್ಥಾನದವರಾಗಿದ್ದು, ತಮ್ಮ ಪಕ್ಕದ ಊರಿನ ನಿವಾಸಿಯಾದ ಕೇತರಾಮ್ ನಂಬಿಕೆ ಇಟ್ಟು ಕೆಲಸಕ್ಕೆ ನೇಮಿಸಿಕೊಂಡಿದ್ದರು. ಮನೆ ಕ್ಲೀನಿಂಗ್ ಮಾಡುವಾಗ ಮಾಲೀಕರು ಅಂಗಡಿಯ ಕೀ ಇಡುವ ಜಾಗವನ್ನು ಗಮನಿಸಿದ್ದ. ಮಾಲೀಕರು ಊರಿಗೆ ಹೋಗುವ ಹಿಂದಿನ ದಿನ ಅವರ ಕಣ್ತಪ್ಪಿಸಿ ಅಂಗಡಿಯ ಕೀ ಮತ್ತು ಲಾಕರ್‌ಗಳ ಕೀ ಕಳ್ಳತನ ಮಾಡಿದ್ದ. ಮಾಲೀಕ ಅರವಿಂದ್ ಅ.29 ರಂದು ತಮ್ಮ ಕುಟುಂಬದೊಂದಿಗೆ ಹಬ್ಬಕ್ಕಾಗಿ ಮುಂಬೈಗೆ ಹೋದಾಗ, ಆರೋಪಿ ಕೇತರಾಮ್ ರಾಜಸ್ತಾನದಿಂದ ರಾಕೇಶ್ ಹಾಗೂ ಶ್ಯಾಮ್ ಎಂಬ ಸ್ನೇಹಿತರನ್ನು ಕರೆಸಿಕೊಂಡು ಅರವಿಂದ್ ಅವರ ಅಂಗಡಿಯಿಂದ ಚಿನ್ನಾಭರಣ, ಬೆಳ್ಳಿ ವಸ್ತುಗಳನ್ನು ಹಾಗೂ ನಗದು ಲಪಟಾಯಿಸಿದ್ದ.
ಅಂಗಡಿ ಕಳ್ಳತನವಾಗಿರುವ ಬಗ್ಗೆ ಅಕ್ಕಪಕ್ಕದ ಅಂಡಿಯವರು ಕರೆ ಮಾಡಿ ತಿಳಿದ ಹಿನ್ನೆಲೆಯಲ್ಲಿ ಕೂಡಲೇ ಊರಿನಿಂದ ವಾಪಸ್ ಬಂದ ಮಾಲೀಕರು ಹಲಸೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿ ರಾಕೇಶ್ ವಿರುದ್ಧ ಸಿಟಿ ಮಾರುಕಟ್ಟೆ, ಹಲಸೂರು, ವರ್ತೂರು, ಬ್ಯಾಡರಹಳ್ಳಿ, ತಾವರೆಕೆರೆ ಪೊಲೀಸ್ ಠಾಣೆಗಳಲ್ಲಿ ಮನೆ ಕಳ್ಳತನ, ಎನ್‌ಡಿಪಿಎಸ್ ಕಾಯ್ದೆ ಅಡಿ ಸೇರಿ ಹಲವು ಪ್ರಕರಣ ದಾಖಲಾಗಿದ್ದು, ಆರೋಪಿ ಬಂಧನಕ್ಕೊಳಗಾಗಿ ಜೈಲಿಗೆ ಹೋಗಿ ಬಂದಿದ್ದಾನೆ ಎಂದು ಬಿ. ದಯಾನಂದ್ ತಿಳಿಸಿದ್ದಾರೆ.
ಇದನ್ನೂ ಓದಿ: ಮದುವೆಯಾಗುವುದಾಗಿ ನಂಬಿಸಿ ವಂಚನೆ ಆರೋಪ: ಸಂಸದ ಪುತ್ರನ ಮೇಲೆ ಎಫ್ಐಆರ್