ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ವಾರಿಯರ್ಸ್ಗೆ ಕೊರೊನಾ ಕಾಡುತ್ತಿದ್ದು, ಎರಡು ಪೊಲೀಸ್ ಠಾಣೆಯ ಸಿಬ್ಬಂದಿಯಲ್ಲಿ ಕೊರೊನಾ ಸೋಂಕು ದೃಢವಾಗಿದೆ.
ಶಿವಾಜಿ ನಗರ ಹಾಗೂ ವೈಯಾಲಿಕಾವಲ್ ಪೊಲೀಸ್ ಠಾಣೆಯ ಸಿಬ್ಬಂದಿಗೆ ಕೊರೊನಾ ತಗುಲಿದ್ದು, ಸೋಂಕಿತ ಸಿಬ್ಬಂದಿಯನ್ನು ಆಸ್ಪತ್ರೆಗೆ ದಾಖಲಿಸಿ ಠಾಣೆಗಳನ್ನು ಸೀಲ್ ಡೌನ್ ಮಾಡಲಾಗಿದೆ.
ಶಿವಾಜಿನಗರ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹೆಡ್ ಕಾನ್ಸ್ಟೇಬಲ್ಗೆ ಕೊರೊನಾ ಸೋಂಕು ತಗುಲಿದೆ. ಅವರು ನಿನ್ನೆಯವರೆಗೆ ಠಾಣೆಯಲ್ಲಿ ಡ್ಯೂಟಿ ಮಾಡಿದ ಕಾರಣ ಠಾಣೆಯ ಇತರೆ ಸಿಬ್ಬಂದಿಯಲ್ಲಿ ಆತಂಕ ಶುರುವಾಗಿದೆ. ಅವರ ಸಂಪರ್ಕದಲ್ಲಿರುವವರನ್ನು ಹೋಂ ಕ್ವಾರಂಟೈನ್ ಇರಲು ಸೂಚನೆ ನೀಡಿ, 48 ಗಂಟೆಗಳ ಕಾಲ ಠಾಣೆಯನ್ನು ಸೀಲ್ ಡೌನ್ ಮಾಡಲಾಗಿದೆ.
ಕೇಂದ್ರ ವಿಭಾಗದ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಕಾನ್ಸ್‌ಟೇಬಲ್ ಒಬ್ಬರಿಗೆ ಕೊರೊನಾ ಸೋಂಕು ದೃಢವಾಗಿದೆ. ಸದ್ಯ ಸೋಂಕಿತರ ಸಂಪರ್ಕದಲ್ಲಿರುವ 13 ಜನರನ್ನು ಕ್ವಾರಂಟೈನ್ ಮಾಡಿ ಠಾಣೆಯನ್ನು ಸೀಲ್ ಡೌನ್ ಮಾಡಲಾಗಿದೆ ಎಂದು ಕೇಂದ್ರ ವಿಭಾಗ ಡಿಸಿಪಿ ಚೇತನ್ ಸಿಂಗ್ ರಾಥೋಡ್ ಸ್ಪಷ್ಟನೆ ನೀಡಿದ್ದಾರೆ.