ಬೆಂಗಳೂರು : ಹಸುಗೂಸುಗಳ ಮಾರಾಟ ದಂಧೆ ಪ್ರಕರಣದ ಇನ್ನಿಬ್ಬರು ಆರೋಪಿಗಳನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ನಕಲಿ ವೈದ್ಯ ಕೆವಿನ್ ಹಾಗೂ ಮಧ್ಯವರ್ತಿಯಾಗಿದ್ದ ರಮ್ಯಾ ಎಂಬುವರನ್ನ ಬಂಧಿಸಲಾಗಿದೆ. ಆ ಮೂಲಕ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಒಂಬತ್ತಕ್ಕೇರಿದೆ.
ರಾಜಾಜಿನಗರದಲ್ಲಿ ತನ್ನದೇ ಕ್ಲಿನಿಕ್ ನಡೆಸುತ್ತಿದ್ದ ಕೆವಿನ್, ರೋಗಿಗಳಿಗೆ ಚಿಕಿತ್ಸೆ ಸಹ ನೀಡುತ್ತಿದ್ದ. ಆದರೆ, ಮೂರನೇ ವರ್ಷದ ಎಂಬಿಬಿಎಂಸ್ ಫೇಲ್ ಆಗಿದ್ದ ಕೆವಿನ್, ತಾನೊಬ್ಬ ಡಾಕ್ಟರ್ ಅಂತ ಹೇಳಿಕೊಂಡಿದ್ದ. ಅಲ್ಲದೇ ಹಸುಗೂಸುಗಳ ಮಾರಾಟ ದಂಧೆಯಲ್ಲಿ ಭಾಗಿಯಾಗಿದ್ದ. ಮಕ್ಕಳನ್ನ ಖರೀದಿಸುವವರ ಬಳಿ ಹಣ ಪಡೆದು ನಕಲಿ ಸರ್ಟಿಫಿಕೆಟ್ ತಯಾರಿಸಿ ಕೊಡುವ ಕೆಲಸವನ್ನ ಕೆವಿನ್ ನೋಡಿಕೊಳ್ಳುತ್ತಿದ್ದ ಎಂಬುದಾಗಿ ತಿಳಿದು ಬಂದಿದೆ.
ಮತ್ತೊಂದೆಡೆ ರಮ್ಯಾ, ತನ್ನ ಸಂಬಂಧಿಯೊಬ್ಬರು ಮದುವೆಗೂ ಮೊದಲೇ ಗರ್ಭಿಣಿಯಾಗಿದ್ದಾಗ ತಾನೇ ಆ ಗರ್ಭಿಣಿಯನ್ನ ಆರೈಕೆ ಮಾಡಿ, ಮಗು ಹೆತ್ತ ಬಳಿಕ ಮಕ್ಕಳ ಮಾರಾಟದ ಗ್ಯಾಂಗ್ ಬಗ್ಗೆ ತಿಳಿದುಕೊಂಡು ಮಾರಾಟ ಮಾಡಿದ್ದಳು. ಅಲ್ಲದೇ ಮಗು ಹೆತ್ತು ಕೊಟ್ಟಿದ್ದ ಆ ಗರ್ಭಿಣಿಗೆ ಹಣ ಕೂಡ ನೀಡಿದ್ದಳು. ನಂತರ ದಂಧೆಯಲ್ಲಿ ತಾನೂ ಸಹ ಮುಂದುವರೆದಿದ್ದಳು ಎಂಬುದಾಗಿ ತನಿಖೆ ವೇಳೆ ತಿಳಿದು ಬಂದಿದೆ.
ತಮಿಳುನಾಡಿನಿಂದ ಬೆಂಗಳೂರಿಗೆ ಬಂದು ನವಜಾತ ಶಿಶು ಮಾರಾಟ ಮಾಡುತ್ತಿದ್ದ ಪ್ರಕರಣದಲ್ಲಿ ಎಂಟು ಜನ ಆರೋಪಿಗಳನ್ನ ಸಿಸಿಬಿ ಪೊಲೀಸರು ಬಂಧಿಸಿದ್ದರು. ಆರ್. ಆರ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಶುಕ್ರವಾರ ಮಗು ಮಾರಾಟಕ್ಕೆ ಯತ್ನಿಸಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ಕೈಗೊಂಡ ಸಿಸಿಬಿ ಸಂಘಟಿತ ಅಪರಾಧ ವಿಭಾಗದ ಅಧಿಕಾರಿಗಳು, ಆರಂಭದಲ್ಲಿ ನಾಲ್ವರನ್ನ ಬಂಧಿಸಿದ್ದರೆ, ನಂತರ ನಾಲ್ವರನ್ನ ಬಂಧಿಸಿದ್ದರು.
ಮಗು ಮಾರಾಟ ಜಾಲ ಭೇದಿಸಿದ್ದ ಸಿಸಿಬಿ ಪೊಲೀಸರು : ಆರ್ ಆರ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಶನಿವಾರ ಮಗು ಮಾರಾಟಕ್ಕೆ ಯತ್ನಿಸಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ಕೈಗೊಂಡ ಸಿಸಿಬಿ ಸಂಘಟಿತ ಅಪರಾಧ ವಿಭಾಗದ ಅಧಿಕಾರಿಗಳು ಕಣ್ಣನ್ ರಾಮಸ್ವಾಮಿ, ಹೇಮಲತಾ, ಮಹಾಲಕ್ಷ್ಮಿ, ಶರಣ್ಯ, ಸಹಾಸಿನಿ, ರಾಧಾ ಹಾಗೂ ಗೋಮತಿ ಎಂಬುವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ (ನವೆಂಬರ್ 28-2023) ಒಪ್ಪಿಸಿದ್ದರು.
ಬಂಧಿತ ಆರೋಪಿಗಳು, ಗರ್ಭ ಧರಿಸಿ ಮಗುವಿಗೆ ಜನ್ಮ ನೀಡಲು ಇಷ್ಟವಿಲ್ಲದವರ ಬಳಿ ಹಣದ ಆಮಿಷವೊಡ್ಡಿ, ಅವರ ಮಗುವನ್ನು ಮಾರಾಟ ಮಾಡಿಕೊಡುತ್ತೇವೆ ಎಂದು ಹೇಳಿ ಹೆರಿಗೆಯ ಬಳಿಕ ನವಜಾತ ಶಿಶುಗಳನ್ನು ತಮಿಳುನಾಡಿನಿಂದ ಬೆಂಗಳೂರಿಗೆ ತಂದು ಮಾರಾಟ ಮಾಡುತ್ತಿದ್ದರು. ಆರೋಪಿಗಳು ಗರ್ಭಿಣಿಯರಿಗೆ ಮಾತ್ರವಲ್ಲದೇ, ಯುವತಿಯರಿಗೂ ಬಾಡಿಗೆ ತಾಯ್ತನದ ಮೂಲಕ ಮಗುವಿಗೆ ಜನ್ಮ ನೀಡಿ, ಮಗು ಮಾರಾಟ ಮಾಡಿ ಹಣ ಮಾಡಬಹುದು ಎಂದೂ ಆಮಿಷವೊಡ್ಡುತ್ತಿದ್ದರು ಎಂಬುದಾಗಿ ತಿಳಿದು ಬಂದಿತ್ತು.
ಇದನ್ನೂ ಓದಿ : ಮಗು ಮಾರಾಟ ಜಾಲ ಭೇದಿಸಿದ ಸಿಸಿಬಿ ಪೊಲೀಸರು: ಬೆಂಗಳೂರಲ್ಲಿ ಏಳು ಜನ ಆರೋಪಿಗಳ ಬಂಧನ