ಬೆಂಗಳೂರು: ನೇಪಾಳದಿಂದ ಬೆಂಗಳೂರಿಗೆ ವಿಮಾನದಲ್ಲಿ ಬಂದು ಬೀಗ ಹಾಕಿದ ಮನೆಗಳನ್ನೇ ಗುರಿಯಾಗಿಸಿಕೊಂಡು ಚಿನ್ನಾಭರಣ ಕಳ್ಳತನ ಮಾಡುತ್ತಿದ್ದ ಇಬ್ಬರು ಖದೀಮರನ್ನು ನಗರದ ಸೋಲದೇವನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸೋಲದೇವನಹಳ್ಳಿಯ ದಾಸೇನಹಳ್ಳಿಯ ಮನೆಯೊಂದರಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿ ಬೀಗ ಒಡೆದು ಕಳ್ಳತನ ಮಾಡಲಾಗಿತ್ತು. ಈ ಸಂಬಂಧ ನೇಪಾಳ ಮೂಲದ ಮನೋಜ್ ಬಿಶ್ವಕರ್ಮ ಹಾಗೂ ಗೋರಜ್ ಬಿಶ್ವಕರ್ಮ ಎಂಬವರನ್ನು ಬಂಧಿಸಿ 10 ಲಕ್ಷ ರೂ. ಬೆಲೆಬಾಳುವ ಚಿನ್ನಾಭರಣ ವಶಕ್ಕೆ ಪಡೆದುಕೊಳ್ಳಲಾಗಿದೆ.
ಸುಲಭವಾಗಿ ಹಣ ಸಂಪಾದನೆ ಹಾಗೂ ಐಷಾರಾಮಿ ಜೀವನ ನಡೆಸಲು ಕಳ್ಳತನದ ಮಾರ್ಗ ಆಯ್ಕೆ ಮಾಡಿಕೊಂಡಿದ್ದ ಆರೋಪಿ ಮನೋಜ್, ಕೆಲ ವರ್ಷಗಳ ಹಿಂದೆ ನೇಪಾಳದಿಂದ ಮುಂಬೈಗೆ ಬಂದು ಹೋಟೆಲ್ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದ. ಬೀಗ ಹಾಕಿದ ಮನೆಗಳನ್ನೇ ಟಾರ್ಗೆಟ್ ಮಾಡಿಕೊಂಡು 5 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲು ಸೇರಿದ್ದ. ತದನಂತರ ಜಾಮೀನು ಪಡೆದು ಹೊರಬಂದ ಮನೋಜ್ನ ಸ್ನೇಹಿತ ಗೋರಜ್ ಬೆಂಗಳೂರಿನಲ್ಲಿ ಸೆಕ್ಯೂರಿಟಿ ಕೆಲಸ ಮಾಡಿಕೊಂಡಿದ್ದ. ಗೋರಜ್ನೊಂದಿಗೆ ಸೇರಿಕೊಂಡ ಮನೋಜ್, ಬೆಂಗಳೂರಿನ ವಿದ್ಯಾರಣ್ಯಪುರ, ಪೀಣ್ಯ ಹಾಗೂ ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿ ನೇಪಾಳಕ್ಕೆ ಪರಾರಿಯಾಗಿದ್ದರು.
ವಿಮಾನದಲ್ಲಿ ಬೆಂಗಳೂರಿಗೆ ಬಂದು ಕಳ್ಳತನ: ಐಷಾರಾಮಿ ಜೀವನ ನಡೆಸುತ್ತಿದ್ದ ಆರೋಪಿಗಳು ಪುನಃ ಕೃತ್ಯ ಎಸಗಲು ವಿಮಾನದ ಮೂಲಕ ಬೆಂಗಳೂರಿಗೆ ದಾಂಗುಡಿ ಇಟ್ಟಿದ್ದರು. ಕಿತ್ತಗನೂರಿನಲ್ಲಿ ಪರಿಚಯಸ್ಥ ಸೆಕ್ಯೂರಿಟಿ ಗಾರ್ಡ್ನ ಮನೆಯೊಂದರಲ್ಲಿ ವಾಸ್ತವ್ಯ ಹೂಡಿದ್ದರು. ಊರಿಗೆ ಹೋಗುವಾಗ ಸೆಕ್ಯೂರಿಟಿ ಗಾರ್ಡ್ ಮನೆಯ ಕೀಯನ್ನು ಆರೋಪಿಗಳಿಗೆ ನೀಡಿದ್ದ. ಸಂಬಂಧಿಕರ ಹೆಸರಿನಲ್ಲಿ ಖರೀದಿಸಿದ್ದ ಬೈಕ್ ಮೂಲಕ ಬೀಗ ಹಾಕಿದ ಮನೆಗಳನ್ನೇ ಗುರಿಯಾಗಿಸಿಕೊಳ್ಳಲು ಓಡಾಡುತ್ತಿದ್ದರು.
ಜುಲೈ 16 ರಂದು ಹೆಸರಘಟ್ಟದ ದಾಸೇನಹಳ್ಳಿಯ ಮನೆಯೊಂದನ್ನು ಟಾರ್ಗೆಟ್ ಮಾಡಿಕೊಂಡು ಬೀಗ ಮುರಿದು ಮನೆಯೊಳಗಿದ್ದ 10 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಾಂತ್ರಿಕ ಆಯಾಮದಲ್ಲಿ ತನಿಖೆ ನಡೆಸಿದಾಗ ಕೃತ್ಯ ನಡೆದ ಸ್ಥಳದಲ್ಲಿ ಸಿಕ್ಕ ಫಿಂಗರ್ ಪ್ರಿಂಟ್ ಹಾಗೂ ಈ ಹಿಂದೆ ಕಳ್ಳತನ ಪ್ರಕರಣದಲ್ಲಿ ಬಂಧನವಾಗಿ, ಜೈಲುಸೇರಿದ್ದ ಮನೋಜ್ನ ಫಿಂಗರ್ ಪ್ರಿಂಟ್ಗೆ ಹೋಲಿಕೆ ಕಂಡುಬಂದಿತ್ತು.
ಹೀಗಾಗಿ, ಹಳೆಯ ಕಳ್ಳನೇ ಕೃತ್ಯ ಎಸಗಿರುವುದು ಖಚಿತಪಡಿಸಿಕೊಂಡ ಇನ್ಸ್ಪೆಕ್ಟರ್ ಹರಿಯಪ್ಪ ನೇತೃತ್ವದ ತಂಡ ಅಪರಾಧವೆಸಗಲು ಬಳಸಿದ್ದ ಬೈಕ್ ನಂಬರ್ ಹಾಗೂ ಸೆರೆಯಾಗಿದ್ದ ಸಿಸಿಟಿವಿ ವಿಡಿಯೋ ಆಧರಿಸಿ ಇಬ್ಬರು ಖದೀಮರನ್ನು ಬಂಧಿಸಿದ್ದಾರೆ. ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಲ್ಲಿ ರೋಡ್ ರೇಜ್ ಗಲಾಟೆ ಹೆಚ್ಚಳ: ಗಂಭೀರವಾಗಿ ಪರಿಗಣಿಸಿದ ಪೊಲೀಸರು, ನಾಲ್ವರ ವಿರುದ್ಧ ರೌಡಿಪಟ್ಟಿ ಓಪನ್