ಬೆಂಗಳೂರು: ಕೇಂದ್ರ ಸರ್ಕಾರದಿಂದ ಹೊಸ ರೂಪದ ಲಾಕ್‌ಡೌನ್ 4.O ಮಾರ್ಗಸೂಚಿ ಇನ್ನೂ ಹೊರಬೀಳದ ಕಾರಣ ರಾಜ್ಯ ಸರ್ಕಾರವು ಮೇ 19 ರ ಮಧ್ಯರಾತ್ರಿವರೆಗೆ ಯಥಾಸ್ಥಿತಿ ಲಾಕ್‌ಡೌನ್ ಕಾಪಾಡುವಂತೆ ಆದೇಶ ಹೊರಡಿಸಿದೆ.
ಕೇಂದ್ರ ಸರ್ಕಾರ ನಾಲ್ಕನೇ ಹಂತದ ಲಾಕ್‌ಡೌನ್ ಸಂಬಂಧ ಇನ್ನೂ ಮಾರ್ಗಸೂಚಿ ಹೊರಡಿಸಿಲ್ಲ. ಹೀಗಾಗಿ 3.Oನಲ್ಲಿದ್ದ ಲಾಕ್‌ಡೌನ್ ಮಾರ್ಗಸೂಚಿಗಳನ್ನೇ ರಾಜ್ಯ ಸರ್ಕಾರ ಎರಡು ದಿನಗಳಿಗೆ ಮುಂದುವರಿಸಿದೆ. ಈ ಸಂಬಂಧ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಆದೇಶ ಹೊರಡಿಸಿದ್ದಾರೆ. ಮೇ 2ರಿಂದ ಜಾರಿಯಲ್ಲಿರುವ ಪರಿಷ್ಕೃತ ಮಾರ್ಗಸೂಚಿಯನ್ನೇ 19ರ ಮಧ್ಯರಾತ್ರಿವರೆಗೆ ಕಡ್ಡಾಯವಾಗಿ ಮುಂದುವರಿಸುವಂತೆ ಆದೇಶಿಸಿದ್ದಾರೆ. ಹೊಸ ಪರಿಷ್ಕೃತ ಆದೇಶ ಬರುವವರೆಗೆ ಯಥಾಸ್ಥಿತಿ ಕಾಪಾಡುವಂತೆ ಆದೇಶದಲ್ಲಿ ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿ ಹೊರಡಿಸಿದ ಬಳಿಕ ರಾಜ್ಯ ಸರ್ಕಾರ ಅದಕ್ಕೆ ಅನುಸಾರವಾಗಿ ಲಾಕ್‌ಡೌನ್ 4.O ಆದೇಶವನ್ನು ಹೊರಡಿಸಲಿದೆ. ಕೇಂದ್ರದ ಮಾರ್ಗಸೂಚಿಗೆ ಅನುಗುಣವಾಗಿ ರಾಜ್ಯ ಸರ್ಕಾರ ರಾಜ್ಯದಲ್ಲಿ ಇನ್ನಷ್ಟು ಲಾಕ್‌ಡೌನ್ ಸಡಿಲಿಕೆ ಮಾಡುವ ಮುನ್ಸೂಚನೆ ನೀಡಿದೆ.