ಬೆಂಗಳೂರು: ಕಲಬುರಗಿ ಜಿಲ್ಲೆಯ ಕೈಲಾಶ್ ನಗರದಲ್ಲಿ ಮ್ಯಾನ್‌ಹೋಲ್ ಸ್ವಚ್ಛಗೊಳಿಸಲು ಇಳಿದಿದ್ದ ಇಬ್ಬರು ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿದ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಇನ್ನೊಂದು ವಾರದಲ್ಲಿ ಚಾರ್ಜ್ಶೀಟ್ ಸಲ್ಲಿಸಲಾಗುವುದು ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.
ಮನುಷ್ಯರಿಂದ ಮಲಗುಂಡಿ (ಮ್ಯಾನ್‌ಹೋಲ್) ಸ್ವಚ್ಛಗೊಳಿಸುವ ಪದ್ಧತಿ ನಿಷೇಧ ಮತ್ತು ಪುನರ್ವಸತಿ ಕಾಯ್ದೆ-2013ರ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಸರ್ಕಾರಕ್ಕೆ ನಿರ್ದೇಶಿಸಲು ಕೋರಿ ಕಾರ್ಮಿಕ ಸಂಘಟನೆ ಎಐಸಿಸಿಟಿಯು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಓದಿ:ಪಂಚಮಸಾಲಿ ಸಮಾವೇಶ: ಕೋವಿಡ್ ನಿಯಮೋಲ್ಲಂಘನೆ ವಿವರ ಕೇಳಿದ ಹೈಕೋರ್ಟ್
ಈ ವೇಳೆ ಸರ್ಕಾರದ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ, ಕಲಬುರಗಿಯ ಕೈಲಾಶ್ ನಗರದಲ್ಲಿ ಜ.28ರಂದು ಮ್ಯಾನ್‌ಹೋಲ್‌ನಲ್ಲಿ ಉಸಿರುಗಟ್ಟಿ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದರು. ಪ್ರಕರಣದ ಸಂಬಂಧ ಈಗಾಗಲೇ ತನಿಖೆ ಪೂರ್ಣಗೊಂಡಿದೆ. ಒಂದು ವಾರದಲ್ಲಿ ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗುವುದು ಎಂದು ಮಾಹಿತಿ ನೀಡಿದರು. ಹೇಳಿಕೆ ದಾಖಲಿಸಿಕೊಂಡ ಪೀಠ ವಿಚಾರಣೆಯನ್ನು ಮಾ.16ಕ್ಕೆ ಮುಂದೂಡಿತು.