ಬೆಂಗಳೂರು: ನ್ಯಾಯಾಂಗ ಅಧಿಕಾರಿಗಳಾಗಿದ್ದ ರಾಜೇಂದ್ರ ಬಾದಾಮಿಕರ್ ಹಾಗೂ ಖಾಜಿ ಜೈಬುನ್ನಿಸಾ ಮೊಹಿಯುದ್ದೀನ್ ಅವರು ರಾಜ್ಯ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ಇಂದು ಮುಖ್ಯ ನ್ಯಾಯಮೂರ್ತಿಗಳಿಂದ ಪ್ರಮಾಣ ವಚನ ಸ್ವೀಕರಿಸಿದರು.
ಕಳೆದ ಮಾರ್ಚ್ 22ರಂದು ರಾಷ್ಟ್ರಪತಿಗಳ ಆದೇಶಾನುಸಾರ ಕೇಂದ್ರ ಕಾನೂನು ಸಚಿವಾಲಯ ಇಬ್ಬರನ್ನೂ ರಾಜ್ಯ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ನೇಮಕ ಮಾಡಿ ಆದೇಶ ಹೊರಡಿಸಿತ್ತು. ಅದರಂತೆ ಇಂದು ಮುಖ್ಯ ನ್ಯಾಯಮೂರ್ತಿಗಳ ಕೋರ್ಟ್ ಹಾಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಬ್ಬರೂ ಪ್ರಮಾಣ ವಚನ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ನೂತನ ನ್ಯಾಯಮೂರ್ತಿಗಳ ಕುಟುಂಬಸ್ಥರು ಹಾಗೂ ವಕೀಲರು ಉಪಸ್ಥಿತರಿದ್ದರು. ಮುಂದಿನ ಎರಡು ವರ್ಷಗಳ ಕಾಲ ಇವರು ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸಲಿದ್ದಾರೆ.
ಇದನ್ನೂ ಓದಿ: ಬಿಜೆಪಿ ಕೋರ್ ಕಮಿಟಿ ಪುನಾರಚನೆ: ಲಿಂಬಾವಳಿ, ಉದಾಸಿಗೆ ಕೊಕ್
ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಆಗಿದ್ದ ರಾಜೇಂದ್ರ ಬಾದಾಮಿಕರ್ ಹಾಗೂ ವಿಚಕ್ಷಣಾ ವಿಭಾಗದ ರಿಜಿಸ್ಟ್ರಾರ್ ಆಗಿದ್ದ ಖಾಜಿ ಜೈಬುನ್ನಿಸಾ ಮೊಹಿಯುದ್ದೀನ್ ಅವರನ್ನು ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿ ಹುದ್ದೆಗೆ ಸಿಜೆಐ ಎಸ್.ಎ. ಬೊಬ್ಡೆ ನೇತೃತ್ವದ ಕೊಲಿಜಿಯಂ ಕಳೆದ ಫೆ.4ರಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಇಬ್ಬರು ಹೆಚ್ಚುವರಿ ನ್ಯಾಯಮೂರ್ತಿಗಳ ಸೇರ್ಪಡೆಯೊಂದಿಗೆ ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿಗಳ ಸಂಖ್ಯೆ ಇದೀಗ 49ಕ್ಕೆ ಏರಿಕೆಯಾಗಿದೆ.