ಬೆಂಗಳೂರು: ವೈದ್ಯರೊಬ್ಬರ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಚಾರ್ಜ್ ಶೀಟ್ ಸಲ್ಲಿಸಿ ಕಾನೂನು ದುರ್ಬಳಕೆ ಮಾಡಿಕೊಂಡಿದ್ದ ಆರೋಪದಡಿ ಇಬ್ಬರ ಇನ್ಸ್ಪೆಕ್ಟರ್ಗಳನ್ನು ನಗರ ಪೊಲೀಸ್ ಆಯುಕ್ತ ದಯಾನಂದ ಅವರು ಸಸ್ಪೆಂಡ್ ಮಾಡಿದ್ದಾರೆ. ಪ್ರಸ್ತುತ ಜ್ಞಾನಭಾರತಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮಂಜುನಾಥ್ ಹಾಗೂ ಹಿಂದೆ ಇದೇ ಠಾಣೆಯ ಹಾಗೂ ಹಾಲಿ ದೇವನಹಳ್ಳಿ ಠಾಣೆಯ ಇನ್ಸ್ಪೆಕ್ಟರ್ ಲಕ್ಷ್ಮಣ್ ನಾಯಕ್ ಅವರನ್ನು ಅಮಾನತು ಮಾಡಲಾಗಿದೆ.
2022ರಲ್ಲಿ ಅಮಾಯಕ ವೈದ್ಯರನ್ನ ಕರೆತಂದು ಡ್ರಗ್ಸ್ ಕೇಸ್ನಡಿ ಅಂದಿನ ಇನ್ಸ್ಪೆಕ್ಟರ್ ಲಕ್ಷ್ಮಣ್ ನಾಯಕ್ ಅವರು ಎಫ್ಐಆರ್ ದಾಖಲಿಸಿದ್ದರು. ವರ್ಗಾವಣೆ ಬಳಿಕ ಬಂದ ಮಂಜುನಾಥ್ ವೈದ್ಯರ ಮೇಲೆ ಚಾರ್ಜ್ ಶೀಟ್ ಹಾಕಿದ್ದರು. ಇಬ್ಬರು ಕಾನೂನು ಉಲ್ಲಂಘನೆ ಮಾಡಿ ಅಮಾಯಕ ಡಾಕ್ಟರ್ ಸಿಲುಕಿಸಿದ ಹಿನ್ನೆಲೆ ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿ ವರದಿ ನೀಡಿದ್ದರು. ಡಿಸಿಪಿ ವರದಿ ಆಧಾರದ ಮೇಲೆ ಇಬ್ಬರನ್ನೂ ಕಮೀಷನರ್ ಬಿ ದಯಾನಂದ್ ಸಸ್ಪೆಂಡ್ ಮಾಡಿದ್ದಾರೆ.
ಕೆರೆ ಮಧ್ಯೆ ರಸ್ತೆ ನಿರ್ಮಾಣ ; ಇಬ್ಬರು ಇಂಜಿನಿಯರ್ಸ್ ಅಮಾನತು: ಹೊಸಕೆರೆಹಳ್ಳಿ ಕೆರೆಯ ಮಧ್ಯೆ ರಸ್ತೆ ನಿರ್ಮಾಣ ಮಾಡಿದ ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಬಿಬಿಎಂಪಿಯ ಇಬ್ಬರು ಅಭಿಯಂತರರನ್ನು ಅಮಾನತು ಮಾಡಲಾಗಿದೆ. ಘನ ತ್ಯಾಜ್ಯ ನಿರ್ವಹಣೆ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಹೆಚ್.ಎಸ್ ಮೇಘಾ ಮತ್ತು ಸಹಾಯಕ ಎಂಜಿನಿಯರ್ ಶಿಲ್ಪಾ ಅವರನ್ನು ಅಮಾನತುಗೊಳಿಸಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಆದೇಶ ಹೊರಡಿಸಿದ್ದಾರೆ.
ಅಮಾನತಿಗೆ ಡಿಸಿಎಂ ಸೂಚನೆ: ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ ಅವರು, ಹೊಸಕೆರೆಹಳ್ಳಿ ಕೆರೆಯಲ್ಲಿ ರಸ್ತೆ ನಿರ್ಮಾಣ ಮಾಡಿದವರು ಕುರಿತು ಮಾಹಿತಿ ಕೇಳಿದ್ದರು. ಇದಕ್ಕೆ ಉತ್ತರಿಸಲು ಅಧಿಕಾರಿಗಳು ತಡಬಡಾಯಿಸಿದ್ದರು. ಬಳಿಕ ಡಿಸಿಎಂ ತಕ್ಷಣವೇ ಹೊಸಕೆರೆಹಳ್ಳಿ ಕೆರೆ ಭಾಗ ಮಾಡಿ ರಸ್ತೆ ನಿರ್ಮಿಸಿದ ಅಧಿಕಾರಿಗಳನ್ನ ಅಮಾನತು ಮಾಡುವಂತೆ ಸೂಚನೆ ನೀಡಿದ್ದರು.
ಪ್ರಭಾವಿ ಅಪಾರ್ಟ್ಮೆಂಟ್ ಮಾಲೀಕರಿಗೆ ಅನುಕೂಲವಾಗಲೆಂದು ಹೊಸಕೆರೆಹಳ್ಳಿ ಕೆರೆ ಮಧ್ಯೆ ರಸ್ತೆ ನಿರ್ಮಾಣ ಯೋಜನೆ ರೂಪಿಸಿದ, ಅನುಷ್ಠಾನಕ್ಕೆ ತಂದ ಇಂಜಿನಿಯರ್ಗಳು ಮತ್ತು ಅಧಿಕಾರಿಗಳು ಕೂಡಲೇ ಸೇವೆಯಿಂದ ಅಮಾನತು ಮಾಡುವಂತೆ ಡಿಕೆಶಿ ಬಿಬಿಎಂಪಿ ಕಮಿಷನರ್ ಅವರಿಗೆ ತಾಕೀತು ಮಾಡಿದ್ದರು. ಡಿಸಿಎಂ ಸೂಚನೆ ಬೆನ್ನಲ್ಲೇ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
ಈ ಕೆರೆ ಮಧ್ಯೆ ರಸ್ತೆ ನಿರ್ಮಾಣ ಮಾಡಲು ಯೋಜನೆ ರೂಪಿಸಿದವರು ಯಾರು? ಐಡಿಯಾ ಕೊಟ್ಟವರು ಯಾರು? ಅನುಷ್ಠಾನಕ್ಕೆ ತಂದವರು ಯಾರು? ಯಾಕಾಗಿ ಇದನ್ನು ಮಾಡಿದಿರಿ? ಯಾರ ಅನುಕೂಲಕ್ಕಾಗಿ ಇದನ್ನು ಮಾಡಿದ್ದಿರಿ ಯಾರ್ಯಾರು ಇದರಲ್ಲಿ ಭಾಗಿಯಾಗಿದ್ದೀರಿ ಎಂದು ಡಿಸಿಎಂ ಸಭೆಯಲ್ಲಿ ಪ್ರಶ್ನಿಸಿದ್ದರು. ಇದೇ ವೇಳೆ ಈಜಿಪುರ ಮೇಲ್ಸೇತುವೆ ಯೋಜನೆ ಶೀಘ್ರದಲ್ಲೇ ಪೂರ್ಣಗೊಳಿಸಬೇಕು. ಈ ಬಗ್ಗೆ ಅಗತ್ಯವಿರುವ ಆಡಳಿತಾತ್ಮಕ ನಿರ್ಣಯಗಳನ್ನು ಕೈಗೊಳ್ಳಬೇಕು ಎಂದು ಡಿ. ಕೆ. ಶಿವಕುಮಾರ್ ಅವರು ಬಿಬಿಎಂಪಿ ಆಯುಕ್ತರಿಗೆ ತಿಳಿಸಿದ್ದರು.
ಇದನ್ನೂ ಓದಿ: ಕೆರೆ ಮಧ್ಯೆ ರಸ್ತೆ ನಿರ್ಮಾಣ ಪ್ರಕರಣ: ಡಿಸಿಎಂ ಸೂಚನೆ ಬೆನ್ನಲ್ಲೇ ಬಿಬಿಎಂಪಿಯ ಇಬ್ಬರು ಇಂಜಿನಿಯರ್ಸ್ ಅಮಾನತು